ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ದರ ಏರಿಕೆ ವಿರುದ್ಧ ಜೆಡಿಎಸ್‌ ಪ್ರತಿಭಟನೆ

Last Updated 12 ಜೂನ್ 2021, 14:05 IST
ಅಕ್ಷರ ಗಾತ್ರ

ರಾಯಚೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪೆಟ್ರೋಲ್ ಬಂಕ್ ಚಿತ್ರ ಹಾಗೂ ಖಂದಿಲ್ ಗೆ ‍ಪೂಜೆ ಮಾಡಿ ಶನಿವಾರ ಪ್ರತಿಭಟನೆ ನಡೆಸಿದರು. ಆನಂತರ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಎರಡು ವರ್ಷಗಳಿಂದ ಕೋವಿಡ್‌ನಿಂದ ಜನರು ತೀವ್ರ ಆರ್ಥಿಕ ಸಂಕಷ್ಠಕ್ಕೆ ಸಿಲುಕಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಮತ್ತಷ್ಟು ಸಂಕಷ್ಟಕ್ಕೆ ದೂಡಿವೆ. ರಾಜ್ಯ ಸರ್ಕಾರ ಯಾವುದೇ ಮಾಹಿತಿ ನೀಡದೇ ವಿದ್ಯುತ್ ದರ ಏರಿಕೆ ಮಾಡಿದ್ದು, ಸರ್ಕಾರ ಅಚ್ಛೇ ದಿನ್ ಬದಲಾಗಿ ಬುರೇ ದಿನ್ (ಕಷ್ಟದ ದಿನಗಳು)ಗೆ ತಳ್ಳಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ನೀತಿಯಿಂದಾಗಿ ಜನಸಾಮಾನ್ಯರಿಗೆ ಪೆಟ್ರೋಲ್, ಡೀಸೆಲ್ ಸಿಗುವುದಿಲ್ಲ. ವಿದ್ಯುತ್ ಬಳಸಿದರೆ ಹೆಚ್ಚಿನ ದರ ನೀಡಬೇಕಾದ ಕಾರಣ ಮುಂಬರುವ ದಿನಗಳಲ್ಲಿ ಕಂದೀಲು ಬಳಸಬೇಕಾಗುತ್ತದೆ. ಇಂಧನ ದರಗಳ ಮೇಲಿನ ಹೆಚ್ಚಿನ ತೆರಿಗೆಯಿಂದಾಗಿ ಸಾಗಾಣಿಕೆ, ಉತ್ಪನ್ನಗಳ ಮಾರಾಟ ದರ ಏರಿಕೆಯಾಗಿ ಜನ ಸಾಮಾನ್ಯರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಲಿದೆ. ರಾಜ್ಯ ಸರ್ಕಾರ ಯಾವುದೇ ಪೂರ್ವ ಮಾಹಿತಿ ನೀಡದೇ ವಿದ್ಯುತ್ ದರ ಪ್ರತಿ ಯೂನಿಟ್ ಗೆ ₹1.90 ಏರಿಕೆ ಮಾಡಿದ್ದು ಅವೈಜ್ಞಾನಿಕವಾಗಿದೆ. ಸಾರ್ವಜನಿಕರ ಆಕ್ಷೇಪಣೆಗಳನ್ನು ಪರಿಗಣಿಸಬೇಕು ಎಂದರು.

ಬಿಜೆಪಿ ಪ್ರಣಾಳಿಕೆಯಲ್ಲಿ ಇಂಧನ ದರ ಏರಿಕೆ ಮಾಡುವುದಿಲ್ಲ ಎಂದು ಹೇಳಿ ಈಗ ಜನರಿಗೆ ಮೋಸ ಮಾಡಿದೆ. ಕೂಡಲೇ ರಾಜ್ಯ ಸರ್ಕಾರಕ್ಕೆ ಇಂದನ ದರ ಹಾಗೂ ವಿದ್ಯುತ್ ದರ ಏರಿಕೆ ಹಿಂಪಡೆಯಬೇಕು ಎಂದು ಸೂಚಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ವಿರೂಪಾಕ್ಷಿ, ಕಾರ್ಯಾಧ್ಯಕ್ಷ ವಕೀಲ ಎನ್. ಶಿವಶಂಕರ, ರಾಮಕೃಷ್ಣ, ವಿಶ್ವನಾಥ ಪಟ್ಟಿ, ಅಮ್ಜದ್ ಮತ್ತಿತರರು ಇದ್ದರು.

ದ್ವಿಚಕ್ರ ವಾಹನ ಎಳೆದು ಪ್ರತಿಭಟನೆ: ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಹಾಗೂ ರಾಜ್ಯ ಸರ್ಕಾರ ವಿದ್ಯುತ್‌ ಬೆಲೆ ಏರಿಕೆ ಮಾಡಿದ್ದನ್ನು ಖಂಡಿಸಿ ಅಂಬೇಡ್ಕರ್ ಸೇನೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ರಸ್ತೆಯಲ್ಲಿ ಬೈಕ್‌ಗಳಿಗೆ ಅಡುಗೆಸಿಲೆಂಡರ್ ಕಟ್ಟಿ ಹಗ್ಗದಿಂದ ಎಳೆಯುವ ಮೂಲಕ ಶನಿವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಕೋವಿಡ್ ಸೋಂಕಿನಿಂದ ಈಗಾಗಲೇ ಕೂಲಿಕಾರ್ಮಿಕರು, ವ್ಯಾಪಾರಸ್ಥರು, ರೈತರು, ಕಟ್ಟಡ ಕಾರ್ಮಿಕರು ಬಡ, ಮಧ್ಯಮ ವರ್ಗದ ಜನರು ತೀವ್ರ ಆರ್ಥಿಕ ಸಮಸ್ಯೆಗೆ ಸಿಲುಕಿ ಕುಟುಂಬ ನಿರ್ವಹಣೆಗೆ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ವಿದ್ಯುತ್‌, ಪೆಟ್ರೋಲ್, ಡಿಸೇಲ್, ಅಡುಗೆ ಸಿಲೆಂಡರುಗಳ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಇಂದನ ದರ ಹಾಗೂ ವಿದ್ಯುತ್ ದರ ಇಳಿಕೆ ಮಾಡಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ವಿಶ್ವನಾಥಪಟ್ಟಿ, ಮುಖಂಡ ಮಹೇಶ, ಅಮರಯ್ಯ ಸ್ವಾಮಿ, ರವಿಚಂದ್ರ, ದೇವೇಂದ್ರ ಕುರ್ಡಿ, ರಮೇಶ, ಆಕಾಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT