ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧರ್ಮ’ದ ನಾಡಿನಲ್ಲಿ ಹಳೆ ಬೇರು–ಹೊಸ ಚಿಗುರು

ಬಂಗೇರರ ವಿಜಯಯಾತ್ರೆಗೆ ಯುವ ಪಡೆಯ ಸವಾಲು
Last Updated 9 ಮೇ 2018, 10:56 IST
ಅಕ್ಷರ ಗಾತ್ರ

ಮಂಗಳೂರು: ಧರ್ಮದ ನಾಡು ಎಂದೇ ಖ್ಯಾತವಾಗಿರುವ ಧರ್ಮಸ್ಥಳವನ್ನು ಒಳಗೊಂಡಿರುವ ಪಶ್ಚಿಮ ಘಟ್ಟದ ತಪ್ಪಲಿನ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ರಂಗೇರಿದೆ. ಹಾಲಿ ಶಾಸಕ ವಸಂತ ಬಂಗೇರರ ಗೆಲುವಿನ ವಿಜಯಯಾತ್ರೆಗೆ, 36 ವರ್ಷದ ಯುವಕ ಹರೀಶ್‌ ಪೂಂಜಾ ಸವಾಲು ಒಡ್ಡಿದ್ದಾರೆ. ಧರ್ಮದ ನಾಡಿನಲ್ಲಿ ಹಳೆಯ ಬೇರು–ಹೊಸ ಚಿಗುರಿನ ಮಧ್ಯೆ ಪೈಪೋಟಿ ಏರ್ಪಟ್ಟಿದೆ.

ಜಿಲ್ಲೆಯ ಉಳಿದ ಕ್ಷೇತ್ರಗಳಂತೆ ಇಲ್ಲಿಯೂ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ನೇರ ಹಣಾಹಣಿ ಇದೆ. ಈ ಬಾರಿ ಹಿರಿಯ ಬಿಜೆಪಿ ಮುಖಂಡ ಗಂಗಾಧರ ಗೌಡರು ಕಾಂಗ್ರೆಸ್‌ ಸೇರಿದ್ದು, ಪಕ್ಷಕ್ಕೆ ಬಲ ತಂದು ಕೊಟ್ಟಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಯುವ ಕಾರ್ಡ್‌ ಅನ್ನು ಮುಂದಿಟ್ಟಿದ್ದು, ಸಾಂಪ್ರದಾಯಿಕ ಮತಗಳ ಜತೆಗೆ ಯುವ ಮತದಾರರನ್ನು ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ.

ಹಾಲಿ ಶಾಸಕ ವಸಂತ ಬಂಗೇರರು 1983 ರಿಂದ ಸತತ 8 ಬಾರಿ ಸ್ಪರ್ಧಿಸಿದ್ದು, ಇದು 9 ನೇ ಸ್ಪರ್ಧೆಯಾಗಿದೆ. ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ನಿಂದ ಐದು ಬಾರಿ ಶಾಸಕರಾಗಿರುವ ಬಂಗೇರ, 3 ಬಾರಿ ಸೋಲು ಅನುಭವಿಸಿದ್ದಾರೆ. ಅಪಾರ ರಾಜಕೀಯ ಅನುಭವವನ್ನು ಹೊಂದಿರುವ ಅವರು, ಈ ಬಾರಿಯೂ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸುವ ಇರಾದೆಯಲ್ಲಿದ್ದಾರೆ.

ಗೌಡರ ಪ್ರವೇಶ: ಬಿಜೆಪಿಯಲ್ಲಿ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಕೆ. ಗಂಗಾಧರ ಗೌಡರು ಈಗ ಕಾಂಗ್ರೆಸ್‌ಗೆ ಮತ್ತೆ ಮರಳಿದ್ದಾರೆ. ಗೌಡರ ಈ ನಿರ್ಧಾರದಿಂದ ಕಾಂಗ್ರೆಸ್‌ ಗೆ ಬಲ ಬಂದಂತಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಕಾಂಗ್ರೆಸ್‌ಗೆ ಗರಿಷ್ಠ ಲಾಭವಾಗಲಿದೆ ಎಂಬ ಲೆಕ್ಕಾಚಾರಗಳೂ ನಡೆದಿವೆ.

ಜಾತಿವಾರು ಲೆಕ್ಕಾಚಾರದಲ್ಲಿ ಬಿಲ್ಲವರು ಅಧಿಕ ಸಂಖ್ಯೆಯಲ್ಲಿದ್ದು, ಉಳಿದಂತೆ ಒಕ್ಕಲಿಗ ಗೌಡ ಸಮುದಾಯ, ಇತರ ಸಮುದಾಯಗಳು ತಾಲ್ಲೂಕಿನಲ್ಲಿವೆ. ಜಾತಿವಾರು ಗೆದ್ದವರಲ್ಲಿ 1972ರಿಂದ ಬಿಲ್ಲವರು ಹಾಗೂ ಗೌಡ ಸಮುದಾಯದವರದೇ ಪಾರಮ್ಯ. ಹೀಗಾಗಿ ಬಂಟ ಸಮುದಾಯದ ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜಾ ಯಾವ ರೀತಿ ತಂತ್ರಗಾರಿಕೆ ನಡೆಸಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.

ಅಭಿವೃದ್ಧಿಯೇ ಆಧಾರ: ಶಾಸಕ ವಸಂತ ಬಂಗೇರ ಅವರ ಅವಧಿಯಲ್ಲಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಆಗಿರುವ ಜನಪರ ಕಾರ್ಯಗಳನ್ನು ಮುಂದಿಟ್ಟು ಕಾಂಗ್ರೆಸ್‌ ಮತಯಾಚನೆಗೆ ಮುಂದಾಗಿದೆ. ಈಗಾಗಲೇ ಶಾಸಕ ವಸಂತ ಬಂಗೇರ ಹಾಗೂ ಕಾಂಗ್ರೆಸ್‌ ಮುಖಂಡರು ಸಮಾವೇಶ ಸಂಘಟಿಸಿ, ಕಾರ್ಯಕರ್ತರೊಂದಿಗೆ ಮನೆ, ಮನೆ ಮತಯಾಚನೆ ನಡೆಸುತ್ತಿದ್ದಾರೆ.

ತಾಲ್ಲೂಕಿಗೆ ₹1 ಸಾವಿರ ಕೋಟಿಗೂ ಅಧಿಕ ಹೆಚ್ಚಿನ ಅನುದಾನವನ್ನು ತರಲಾಗಿದೆ. ಕುಗ್ರಾಮಗಳಿಗೂ ವಿದ್ಯುತ್‌, ರಸ್ತೆ ಮೊದಲಾದ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದು, ರಾಜ್ಯ ಸರ್ಕಾರವೂ ತನ್ನ ಪ್ರಣಾಳಿಕೆಯ ಎಲ್ಲ ಅಂಶಗಳನ್ನೂ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಈ ಬಾರಿಯೂ ಕಾಂಗ್ರೆಸ್‌ ಗೆಲುವು ನಿಶ್ಚಿತ ಎನ್ನುವುದು ಕಾರ್ಯಕರ್ತರ ವಿಶ್ವಾಸ.

ಬದಲಾವಣೆಯೇ ಬಿಜೆಪಿ ಘೋಷವಾಕ್ಯ: ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜಾ ಕೂಡ ಯುವಪಡೆಯನ್ನು ಕಟ್ಟಿಕೊಂಡು ಗ್ರಾಮಗಳಿಗೆ ತೆರಳಿ ಪ್ರಚಾರ ಕಾರ್ಯ ನಡೆಸುವಲ್ಲಿ ನಿರತರಾಗಿದ್ದಾರೆ.

ತಾಲ್ಲೂಕಿನ ಆಭಿವೃದ್ಧಿಗಾಗಿ ಬಿಜೆಪಿ ಎಂಬುದು ಅವರ ಘೋಷವಾಕ್ಯ. ಪ್ರಧಾನಿ ಮೋದಿ ಅವರ ಸಾಧನೆಗಳನ್ನು ಪ್ರಚುರಪಡಿಸುವುದು ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ತಿಳಿಸುವ ಮೂಲಕ ಮತಯಾಚನೆ ನಡೆಸುತ್ತಿದ್ದಾರೆ. ಇದರ ಜತೆಗೆ ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ.

ಪ್ರಧಾನಿ ಮೋದಿ ಅವರು ಸ್ಟಾರ್ಟ್‌ ಅಪ್‌, ಸ್ಟ್ಯಾಂಡ್ ಅಪ್‌, ಮುದ್ರಾ ಸಾಲ ಯೋಜನೆ, ಪ್ರಧಾನಿ ಫಸಲ್‌ ಬಿಮಾ ಯೋಜನೆಗಳು ಜನರನ್ನು ತಲುಪಿವೆ. ಪ್ರಧಾನಿ ಮೋದಿ ಅವರ ಕಾರ್ಯವನ್ನು ನೋಡಿಯೇ ಮತದಾರರು ಈ ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿಸಲಿದ್ದಾರೆ ಎನ್ನುವ ಮಾತು ಬಿಜೆಪಿ ಕಾರ್ಯಕರ್ತರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT