ಶನಿವಾರ, ಫೆಬ್ರವರಿ 27, 2021
28 °C
ಎನ್ಆರ್‌ಬಿಸಿ ಕಾಲುವೆಗೆ ನೀರು ಸ್ಥಗಿತ

ಬಾಡುತ್ತಿರುವ ಬೆಳೆ: ರೈತರಿಗೆ ಆತಂಕ

ವೆಂಕಟೇಶ ಪಾಟೀಲ Updated:

ಅಕ್ಷರ ಗಾತ್ರ : | |

Deccan Herald

ದೇವದುರ್ಗ: ತಾಲ್ಲೂಕಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ನಂತರ ಶೇ 80ರಷ್ಟು ರೈತರು ನಾರಾಯಣಪುರ ಬಲದಂಡೆ ಕಾಲುವೆ ನೀರನ್ನು ನಂಬಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅಣೆಕಟ್ಟೆಯಲ್ಲಿ ನೀರಿನ ಕೊರತೆಯಾದ ಕಾರಣ ಕಾಲುವೆಗೆ ನೀರು ಹರಿಸುವುದು ಸ್ಥಗಿತಗೊಳಿಸಲಾಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಬಾಡುತ್ತಿದ್ದು, ರೈತರಲ್ಲಿ ಆತಂಕ ಹೆಚ್ಚಿದೆ.

ಬಲದಂಡೆ ಯೋಜನೆ ಪ್ರಕಾರ, ದೇವದುರ್ಗ ತಾಲ್ಲೂಕಿನ ಶೇ 90ರಷ್ಟು ಪ್ರದೇಶ ನೀರಾವರಿಗೆ ಒಳಪಟ್ಟರೆ, ಲಿಂಗಸೂಗೂರು ಮತ್ತು ರಾಯಚೂರು ತಾಲ್ಲೂಕುಗಳು ಕಡಿಮೆ ಪ್ರದೇಶ ಹೊಂದಿದೆ.ನೀರಾವರಿ ಪ್ರದೇಶ ಅಧ್ಯಾಯನದ ನಂತರ ಮುಖ್ಯ ಕಾಲುವೆ ನಿರ್ಮಿಸಲಾಗಿದ್ದು, 3600 ಕ್ಯುಸೆಕ್‌ ಸಾಮರ್ಥ್ಯ ಹೊಂದಿದೆ. ಲಿಂಗಸೂಗೂರು ತಾಲ್ಲೂಕು 1ರಿಂದ 8 ರವರೆಗೆ ಉಪ ಕಾಲುವೆ, ದೇವದುರ್ಗ ತಾಲ್ಲೂಕಿನಲ್ಲಿ 9ರಿಂದ 18ರವರೆಗೂ ಉಪ ಕಾಲುವೆ ಇದೆ.

‘ಪ್ರತಿ ವರ್ಷ ಜುಲೈನಿಂದ ನವೆಂಬರ್‌ವರೆಗೆ ವಾರಬಂದಿಯಂತೆ ಕಾಲುವೆಗೆ ನೀರು ಹರಿಸದರೆ ರೈತರಿಗೆ ತೃಪ್ತಿಯಾಗಿ ನೀರು ಕೊಡಬಹುದು. ಆದರೆ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದ ಅಣೆಕಟ್ಟೆಯಿಂದ ಹರಿಯುವ ನೀರು ನದಿಗೆ ಸೇರಿ ಆಂಧ್ರ ಪ್ರದೇಶದ ಪಾಲಾಗುತ್ತಿದೆ. ಅಧಿಕಾರಿಗಳು ಕಾಲುವೆಗೆ ನೀರು ಹರಿಸುವುದು ಸ್ಥಗಿತಗೊಳಿಸಿದ್ದರಿಂದ ರೈತರಿಗೆ ನಷ್ಟವಾಗಿದೆ’ ಎಂದು ರೈತ ಸಂಘದ ಅಧ್ಯಕ್ಷ ಬೂದಯ್ಯಸ್ವಾಮಿ ಗಬ್ಬೂರು ಆರೋಪಿಸಿದರು.

‘ನೀರಾವರಿಗೆ ಒಳಪಟ್ಟ ನಂತರ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿದ್ದು ಮೆಣಸಿನಕಾಯಿಯಂಥ ಬೆಳಗಳನ್ನೆ ಬೆಳೆಯಬೇಕಾದ ಅನಿವಾರ್ಯತೆ ರೈತರಿಗಿದೆ. ಸೂರ್ಯಕಾಂತಿ, ಶೇಂಗ ಮತ್ತು ಸಜ್ಜೆಯಂಥ ಬೆಳೆಗಳಿಗೆ ಇಳುವರಿ ಬರುತ್ತಿಲ್ಲ. ಈ ಬೆಳೆಗಳಿಗೆ ಕನಿಷ್ಟ ಫೆಬ್ರುವರಿವರೆಗೂ ನೀರಿನ ಅವಶ್ಯಕತೆ ಇದೆ.ಇದನ್ನು ಮನಗಂಡು ರೈತರು ನೀರು ಹರಿಸಬೇಕು’ ಎಂದು ಹೇಳಿದರು.

ಬೆಳೆಗಳನ್ನು ಉಳಿಸಿಕೊಳ್ಳಲು ಕೆಲ ರೈತರು ದುಬಾರಿ ಹಣ ಖರ್ಚು ಮಾಡಿ ಟ್ಯಾಂಕರ್ ಮೂಲಕ ಬೆಳೆಗಳಿಗೆ ನೀರು ಹರಿಸಲು ಆರಂಭಿಸಿದ್ದಾರೆ. ಆದರೆ ಅದು ಎಲ್ಲ ರೈತರಿಗೆ ಸಾಧ್ಯವಾಗಲ್ಲ. ಒಂದು ದಿನಕ್ಕೆ ಟ್ರ್ಯಾಕ್ಟರ್ ಬಾಡಿಗೆ ₹ 700, ಟ್ಯಾಂಕರ್ ಬಾಡಿಗೆ ₹ 500 ಇದೆ’ ರೈತ ಸಂಘದ ಮುಖಂಡ ಪ್ರಭಾಕರ ಪಾಟೀಲ ಇಂಗಳದಾಳ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.