ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣ ಕಾಮಗಾರಿ ಶಂಕುಸ್ಥಾಪನೆಗೆ ಕ್ರಮ: ಡಾ.ಶೈಲೇಂದ್ರ

ವಿಮಾನ ನಿಲ್ದಾಣ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ
Last Updated 8 ಜುಲೈ 2022, 13:53 IST
ಅಕ್ಷರ ಗಾತ್ರ

ರಾಯಚೂರು: ವಿವಿಧ ಅಧಿಕಾರಿಗಳ ಸಹಕಾರದೊಂದಿಗೆ ಅತಿ ಶೀಘ್ರದಲ್ಲಿ ವಿಮಾನ ನಿಲ್ದಾಣ ಕಾಮಗಾರಿಯ ಶಂಕುಸ್ಥಾಪನೆಗೆ ಕ್ರಮ ವಹಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಡಾ.ಶೈಲೇಂದ್ರ ಕೆ.ಬಿಲ್ದಾಳೆ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಮಾನ ನಿಲ್ದಾಣ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ರಾಯಚೂರು ಜಿಲ್ಲೆಗೆ ತನ್ನದೆಯಾದ ಒಂದು ಸಾಂಸ್ಕೃತಿಕ ಮತ್ತು ಭಾವನಾತ್ಮಕ ಇತಿಹಾಸವಿದೆ. ಭತ್ತದ ನಾಡು ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಇಂತಹ ಜಿಲ್ಲೆಗೆ ವಿಮಾನ ನಿಲ್ದಾಣ ಮಾಡುವುದು ನಮ್ಮ ಸರಕಾರದ ಕನಸು ಕೂಡ ಆಗಿದೆ ಎಂದರು.

ತಾಲ್ಲೂಕಿನ ಏಗನೂರು, ಯರಮರಸ್ ಹಾಗೂ ದಂಡು ಗ್ರಾಮದ ಗ್ರಾಮಸ್ಥರೆಲ್ಲರನ್ನು ಕರೆಸಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಮನವೋಲಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ವಿಮಾನ ನಿಲ್ದಾಣದ ಸರಹದ್ದಿನ (ಬಾರ್ಡರ್) ಒಳಗಡೆ ಇರುವಂತ ಗ್ರಾಮಗಳ ಸ್ಥಳಾಂತರಕ್ಕೆ ಮುಂದಾಗಬೇಕು. ಸರ್ಕಾರ ರೈತರಿಗೆ ಮತ್ತು ಬಡವರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಸ್ಪಂದಿಸಿ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಜೆಸ್ಕಾಂ ಅಧಿಕಾರಿಗಳು ವಿಮಾನ ನಿಲ್ದಾಣ ಜಾಗದ ಒಳ ಹಾದು ಹೋಗಿರುವ ವಿದ್ಯುತ್ ಲೈನ್‌ಗಳನ್ನು ಕೂಡಲೇ ಬೇರೆ ಮಾರ್ಗದ ಮೂಲಕ ಸ್ಥಳಾಂತರಿಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಯಾವುದೇ ರೀತಿಯ ವಿದ್ಯುತ್ ಅಡಚಣೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಮಾನ ನಿಲ್ದಾಣದಲ್ಲಿ ದಿನದ 24ಗಂಟೆ ವಿದ್ಯುತ್ ಹಾಗೂ ನೀರು ಬೇಕಾಗಿರುತ್ತದೆ. ಹಾಗಾಗಿ ಜೆಸ್ಕಾಂ ಮತ್ತು ನಗರಸಭೆ ಅಧಿಕಾರಿಗಳು ಈಗಿನಿಂದಲೇ ವಿದ್ಯುತ್ ಮತ್ತು ನೀರಿನ ಪೂರೈಕೆ ಕಡಿಮೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.

ಸಾಮಾನ್ಯ ವ್ಯಕ್ತಿಯು ವಿಮಾನದಲ್ಲಿ ಹಾರುವ ಕನಸು ನನಸಾಗಿಸಲು ರಾಯಚೂರು ಜಿಲ್ಲೆಗೆ ವಿಮಾನ ನಿಲ್ದಾಣದ ಕನಸು ನನಸು ಮಾಡಲು ರಾಜ್ಯ ಸರ್ಕಾರ ಸದಾ ಸಿದ್ದವಿದ್ದು, ಜಾಗ ಒತ್ತುವರಿ ಸಮಸ್ಯೆ ಬಿಟ್ಟರೆ ಬೇರೆ ಯಾವ ಸಮಸ್ಯೆ ಇಲ್ಲ ಕೂಡಲೇ ಎಲ್ಲವನ್ನು ಇತ್ಯಾರ್ಥ ಮಾಡಿ ಟೆಂಡರ್ ಕರೆದು ಒಂದು ತಿಂಗಳ ಒಳಗಾಗಿ ವಿಮಾನ ನಿಲ್ದಾಣ ಕಾಮಗಾರಿಯನ್ನು ರಾಜ್ಯದ ಮುಖ್ಯಮಂತ್ರಿ ಅವರನ್ನು ಕರೆಸಿ ಅಡಿಗಲ್ಲು ಮಾಡಲು ಪ್ರಯತ್ನಿಸುತ್ತೇವೆ. ಇದಕ್ಕೆ ಸ್ಥಳೀಯ ಜನ ಪ್ರತಿನಿಧಿಗಳು, ಸಂಘ, ಸಂಸ್ಥೆಗಳು, ಅಧಿಕಾರಿಗಳು ಸಹಕಾರ ಅಗತ್ಯವಾಗಿದೆ. ಇನ್ನು ಒಂದುವರೆ ವರ್ಷದಲ್ಲಿ ವಿಮಾನ ನಿಲ್ದಾಣ ಸಿದ್ದತೆಯಲ್ಲಿ ಇರಲಿದೆ ಎಂದರು.

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತದ ಎಂ.ಡಿ ಡಾ.ಎಂ.ಆರ್.ರವಿ, ಬ್ರೀಗೆಡಿಯರ್ ಪೂರ್ವಿಮಠ, ರಾಯಚೂರು ಉಪ ವಿಭಾಗಾಧಿಕಾರಿ ರಜನಿಕಾಂತ್, ಜಿಲ್ಲಾ ಭೂದಾಖಲೆಗಳ ಇಲಾಖೆಯ ಉಪ ನಿರ್ದೇಶಕಿ ರೇಷ್ಮಾ ಪಾಟೀಲ, ಕೃಷಿ ಇಲಾಖೆ ಅಧಿಕಾರಿ ನಹಿಂ ಉದೀನ್, ಜಿಲ್ಲಾ ವಾಣಿಜ್ಯೋದ್ಯಮ ಮಂಡಳಿಯ ಅಧ್ಯಕ್ಷ ತ್ರಿವಿಕ್ರಂ ಜ್ಯೋಷಿ, ಲೋಕೋಪ‍ಯೋಗಿ ಇಲಾಖೆ ಮಹೇಶ, ರಾಯಚೂರು ತಾಲ್ಲೂಕು ತಹಶೀಲ್ದಾರ್ ರಾಜಶೇಖರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT