ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022-23ರ ವಾರ್ಷಿಕ ಸಾಲ ಕ್ರಿಯಾಯೋಜನೆ ಬಿಡುಗಡೆ

₹8,900 ಕೋಟಿ ಸಾಲ ನೀಡುವುದಕ್ಕೆ ವಿವಿಧ ಬ್ಯಾಂಕುಗಳ ಯೋಜನೆ
Last Updated 11 ಏಪ್ರಿಲ್ 2022, 14:31 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ₹8,900 ಕೋಟಿಯ 2022-23ನೇ ವಾರ್ಷಿಕ ಸಾಲ ಕ್ರಿಯಾಯೋಜನೆ ವಿವರವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೂರಜಹಾರ್ ಖಾನಂ ಸೋಮವಾರ ಬಿಡುಗಡೆಗೊಳಿಸಿದರು.

ಜಿಲ್ಲಾ ಪಂಚಾಯಿತಿ ಜಲ ನಿರ್ಮಲ ಸಭಾಂಗಣದಲ್ಲಿ ಲೀಡ್ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಹಿಂದಿನ ವರ್ಷಕ್ಕಿಂತ ವಾರ್ಷಿಕ ಸಾಲ ಕ್ರಿಯಾ ಯೋಜನೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಹೆಚ್ಚಿನ ವಹಿವಾಟಿನ ಗುರಿಯನ್ನು ಹೊಂದಿದ್ದು, ಈ ಬಾರಿ ಉತ್ತಮವಾಗಿ ಸಾಲ ಕ್ರಿಯಾ ಯೋಜನೆಯಲ್ಲಿ ಪ್ರಗತಿ ಸಾಧಿಸುವ ನಿರೀಕ್ಷೆ ಇದೆ. ಎಲ್ಲ ಬ್ಯಾಂಕ್‌ಗಳು ಸಹಕಾರದಿಂದ ಕಾರ್ಯನಿರ್ವಹಿಸಿ, ಸೂಕ್ತ ದಾಖಲೆಗಳನ್ನು ಪಡೆದುಕೊಂಡು ಮೂಲ ಹಂತದಿಂದ ಕಾರ್ಯನಿರ್ವಹಿಸುವ ಬ್ಯಾಂಕ್‌ಗಳ ಕಾರ್ಯಚಟುವಟಿಕೆ ಜವಬ್ದಾರಿಯನ್ನು ಲೀಡ್ ಬ್ಯಾಂಕ್‌ನ ಜಿಲ್ಲಾ ವ್ಯವಸ್ಥಾಪಕರಿಗೆ ವಹಿಸಲಾಗಿದೆ. ಜಿಲ್ಲೆಯಲ್ಲಿ ವಾರ್ಷಿಕ ಸಾಲ ಕ್ರಿಯಾ ಯೋಜನೆಯಲ್ಲಿ ಪ್ರಗತಿ ಸಾಧಿಸುವಂತೆ ತಿಳಿಸಿದರು.

ಇದಕ್ಕೂ ಮೊದಲು ಲೀಡ್ ಬ್ಯಾಂಕ್‌ನ ಅಧಿಕಾರಿಗಳು ಕ್ರಿಯಾ ಯೋಜನೆಯ ಬಗ್ಗೆ ಮಾಹಿತಿ ನೀಡಿ, ವಾರ್ಷಿಕ ಕ್ರೆಡಿಟ್ ಯೋಜನೆ 2022-23ರ ಲೀಡ್ ಬ್ಯಾಂಕ್ ಸಂಭಾವ್ಯ ಲಿಂಕ್ಡ್ ಯೋಜನೆಯನ್ನು ಆಧರಿಸಿ ವಾರ್ಷಿಕ ಕ್ರೆಡಿಟ್ ಯೋಜನೆ ಸಂಗ್ರಹಿಸಲಾಗಿದೆ. 2022-23 ನೇ ಸಾಲಿನಲ್ಲಿ ನಬಾರ್ಡ್ ಆದ್ಯತಾ ವಲಯಕ್ಕೆ ₹6,810.00ಕೋಟಿ ಇದ್ದು, ರಾಯಚೂರು ಜಿಲ್ಲೆಗೆ 2022-23ನೇ ಸಾಲಿನಲ್ಲಿ ಹಣಕಾಸು ವರ್ಷಕ್ಕೆ ಸಾಲ ಯೋಜನೆಯು ₹8,900 ಕೋಟಿಯಿದೆ. ₹6,900 ಕೋಟಿಗಳ ಆದ್ಯತಾ ವಲಯದ ಮುಂಗಡಗಳನ್ನು ಮತ್ತು ₹2,000 ಕೋಟಿ ಆದ್ಯತೆಯಿಲ್ಲದ್ದಕ್ಕೆ ಮುಂಗಡ ನೀಡಲಾಗುವುದು. ಹಿಂದಿನ ವರ್ಷದ ಯೋಜನೆಗಿಂತ ಶೇ 10 ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಬು ಬಳಗಾನೂರ, ನಬಾರ್ಡ್ ಬ್ಯಾಂಕ್ ಡಿ.ಡಿ.ಎಂ. ಎನ್.ಕಲಾವತಿ, ಕೆನರಾ ಬ್ಯಾಂಕ್ ಆರ್.ಎಂ. ಮಂಜುನಾಥ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಿರಿಯ ವ್ಯವಸ್ಥಾಪಕ ಸುರೇಶ ಕುಮಾರ್, ಬಸವರಾಜ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT