ಸೋಮವಾರ, ಸೆಪ್ಟೆಂಬರ್ 20, 2021
24 °C
ಮಾವಿನಕೆರೆ, ಗೊಲ್ಲನಕುಂಟೆ ಕೆರೆಗಳ ನಿರಂತರ ಅತಿಕ್ರಮಣ; ಕ್ರಮಕ್ಕೆ ಹಿಂದೇಟು

ರಾಯಚೂರು: ಕಾಲುವೆ ಒತ್ತುವರಿ, ತಗ್ಗು ಪ್ರದೇಶಕ್ಕೆ ನೀರು

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಪ್ರತಿವರ್ಷವೂ ಮಳೆ ಗಾಲದಲ್ಲಿ ಮಳೆನೀರಿನಿಂದ ಸಂಕಷ್ಟ ಸೃಷ್ಟಿಯಾಗುವ ನಗರದ ವಿವಿಧ ಬಡಾವಣೆಗಳ ತಗ್ಗುಪ್ರದೇಶಗಳಿಗೆ ನೀರು ನುಗ್ಗದಂತೆ ಪರಿಹಾರ ಒದಗಿಸುವ ಕೆಲಸವನ್ನು ನಗರಸಭೆ ಮಾಡುತ್ತಿಲ್ಲ.

ಸಿಯಾತಾಲಾಬ್‌, ಜಲಾಲ‌ನಗರ, ಕೈಲಾಸನಗರ, ಮಹಾದೇವನಗರ ಹಾಗೂ ನೀರಭಾವಿಕುಂಟಾದ ಕೊಳೆಗೇರಿ ನಿವಾಸಿಗಳ ಮನೆಗಳು ಜಲಾವೃತ್ತ ಆಗುತ್ತಿವೆ. ಸಮಸ್ಯೆ ವರ್ಷ ದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೂ ಇದ ಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸುವ ಕೆಲಸವನ್ನು ನಗರಸಭೆ ಅಧಿಕಾರಿಗಳು ಮಾಡುತ್ತಿಲ್ಲ.

ಮಳೆನೀರು ಸೂಕ್ತವಾಗಿ ಹರಿದುಹೋಗುವ ವ್ಯವಸ್ಥೆ ಇಲ್ಲ. ಸಮರ್ಪಕ ರಾಜಕಾಲುವೆ, ಚರಂಡಿಗಳು ನಿರ್ಮಾಣವಾಗಿಲ್ಲ. ರಾಜ ಕಾಲುವೆಯ ಸಂಪೂರ್ಣ ಅತಿಕ್ರಮಣ ತೆರವು ನಡೆಯುತ್ತಿಲ್ಲ.

ಈ ವರ್ಷ ರಾಜಕಾಲುವೆ ಹೂಳು ತೆಗೆಯುವ ಕೆಲಸ ನಡೆಯುತ್ತಿದೆ. ಆದರೆ, ಅದರ ವಿಸ್ತಾರವು ಬಡಾವಣೆಯಿಂದ ಬಡಾವಣೆಗೆ ವ್ಯತ್ಯಾಸವಿದೆ. ನಗರದ ಮಧ್ಯೆಭಾಗದಲ್ಲಿರುವ ಮಾವಿನಕೆರೆ ಹಾಗೂ ನಗರಕ್ಕೆ ಹೊಂದಿಕೊಂಡಿರುವ ಗೊಲ್ಲನಕುಂಟೆ ಕೆರೆಗಳಿಗೆ ಮಳೆನೀರು ಹರಿದುವ ಬರುವ ಜಾಗಗಳಲ್ಲಿ ಕಟ್ಟಡಗಳು ತಲೆ ಎತ್ತಿವೆ. ಅಲ್ಲದೆ, ಕೆರೆ ಭರ್ತಿಯಾದ ಬಳಿಕ ನೀರು ಹರಿದುಹೋಗುವ ಮಾರ್ಗಗಳು ಅತಿಕ್ರಮಣವಾಗಿವೆ.

ಮಳೆನೀರು ಹರಿದುಬರುವ ಮಾರ್ಗಗಳ ಬದಲಾವಣೆಯಿಂದಾಗಿ ಜನವಸತಿಗಳಿಗೆ ನೀರು ನುಗ್ಗುತ್ತಿದೆ. ಪ್ರತಿವರ್ಷ ಭರ್ತಿಯಾಗುತ್ತಿದ್ದ ಗೊಲ್ಲನಕುಂಟೆ ಕೆರೆಯು ಎಷ್ಟೇ ಮಳೆಯಾದರೂ ಎರಡು ವರ್ಷಗಳಿಂದ ನೀರು ಸಂಗ್ರಹ ಆಗುತ್ತಿಲ್ಲ. ಕೆರೆಗೆ ಬರಬೇಕಿದ್ದ ನೀರು ಕಾಲೋನಿಗಳಿಗೆ ನುಗ್ಗುತ್ತಿದೆ. ಪ್ರತಿದಿನವೂ ಕೆರೆಗಳಿಗೆ ಕಟ್ಟಡಗಳ ಅವಶೇಷಗಳನ್ನು ತಂದು ಸುರಿಯುತ್ತಿದ್ದಾರೆ. ಮಳೆಗಾಲಕ್ಕೆ ವರದಾನ ಬದಲು ಕೆರೆಯು ಖಾಲಿಖಾಲಿ ಕಾಣುತ್ತಿವೆ. ನೀರಿನ ಹರಿವುಗಳನ್ನು ಬೇರೆಡೆ ತಿರುಗಿಸಿದ್ದರಿಂದ ಬಡಾವಣೆ ಗಳಿಗೆ ನೀರು ನುಗ್ಗುತ್ತಿದೆ.

ಮನೆಗಳಲ್ಲಿದ್ದ ದವಸಧಾನ್ಯಗಳೆಲ್ಲರೂ ನೀರು ಪಾಲಾಗಿದ್ದವು. ಊಟ, ಉಪಹಾರವಿಲ್ಲದೆ ಸಂಕಷ್ಟದಲ್ಲಿದ್ದ ಜನರಿಗೆ ಶಾಸಕ ಡಾ.ಶಿವರಾಜ ಪಾಟೀಲ ಅವರು ಪರಿಹಾರ ಕೇಂದ್ರಗಳನ್ನು ತೆರೆದಿದ್ದರು. ರಾಯಚೂರು ನಗರದಲ್ಲಿ ಮೂರು ಕಡೆಗಳಲ್ಲಿ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿತ್ತು, ಆಹಾರ ತಯಾರಿಸಿ ಹಂಚುವ ಅನಿವಾರ್ಯತೆ ಎದುರಾಗಿತ್ತು.

ಗುಡ್ಡದ ಪಕ್ಕದಲ್ಲಿ ಸಮಸ್ಯೆ: ಗುಡ್ಡಗಳಿಗೆ ಹೊಂದಿಕೊಂಡು ಅಭಿವೃದ್ಧಿ ಮಾಡುತ್ತಿರುವ ನೂತನ ಬಡಾವಣೆಗಳಲ್ಲಿ ಮಳೆಗಾಲದಲ್ಲಿ ಸಂಕಷ್ಟ ತಪ್ಪುತ್ತಿಲ್ಲ. ಸಮರ್ಪಕ ಚರಂಡಿಗಳು ಇಲ್ಲ. ಚರಂಡಿಗಳಿದ್ದರೂ ಒಂದಕ್ಕೊಂದು ಸಂಪರ್ಕವಿಲ್ಲ. ಹೀಗಾಗಿ ಕಚ್ಚಾರಸ್ತೆಗಳು ಕೊಚ್ಚಿಹೋಗಿ ಸಂಚಾರ ಸಮಸ್ಯೆ ಪ್ರತಿವರ್ಷವೂ ಆಗುತ್ತಿದೆ.

ಶಾಶ್ವತ ಪರಿಹಾರ ಇಲ್ಲ: ಮಳೆನೀರು ಹರಿದುಹೋಗಲು ಶಾಶ್ವತ ಪರಿಹಾರ ಮಾಡುತ್ತಿಲ್ಲ. ರಾಜಕಾಲುವೆ ಹೂಳು ಎತ್ತುವ ಕಾರ್ಯ ಆರಂಭಿಸಲಾಗಿದೆ. ಆದರೆ, ಅದು ತಾತ್ಕಾಲಿಕ ಕೆಲಸ ವಾಗುತ್ತಿದೆ. ನಗರವು ಪ್ರತಿವರ್ಷ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಮೂಲಸೌಕರ್ಯಗಳ ಅಭಿವೃದ್ಧಿ ಆಗುತ್ತಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು