ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶುದ್ಧ ನೀರು: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ

ರಾಯಚೂರು ನಗರಸಭೆಯ ತುರ್ತು ಸಾಮಾನ್ಯ ಸಭೆಯಲ್ಲಿ ತೀರ್ಮಾನ
Last Updated 7 ಜೂನ್ 2022, 13:35 IST
ಅಕ್ಷರ ಗಾತ್ರ

ರಾಯಚೂರು: ನಗರದಲ್ಲಿ ಅಶುದ್ಧ ನೀರು ಸೇವಿಸಿ ಮೃತಪಟ್ಟವರ ಪ್ರತಿ ಕುಟುಂಬಕ್ಕೆ ₹10 ಲಕ್ಷ ಪರಿಹಾರ ಮತ್ತು ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ ₹20 ಸಾವಿರ ವೈದ್ಯಕೀಯ ವೆಚ್ಚ ನೀಡುವುದಕ್ಕೆ ರಾಯಚೂರು ನಗರಸಭೆಯಲ್ಲಿ ಮಂಗಳವಾರ ನಡೆಸಿದ ತುರ್ತು ಸಾಮಾನ್ಯಸಭೆಯಲ್ಲಿ ಸರ್ವಸದಸ್ಯರು ತೀರ್ಮಾನಿಸಿದರು.

ಶುದ್ಧ ನೀರು ಪೂರೈಸುವುದಕ್ಕೆ ರಾಂಪೂರ ಶುದ್ಧೀಕರಣ ಘಟಕ ಮತ್ತು ಚಿಕ್ಕಸುಗೂರು ಶುದ್ಧೀಕರಣ ಘಟಕಗಳಲ್ಲಿ ಅಳವಡಿಸಬೇಕಾದ ಯಂತ್ರಗಳು ಮತ್ತು ದುರಸ್ತಿಗೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಎಂಜಿನಿಯರುಗಳು ಸಲ್ಲಿಸುವ ಅಂದಾಜು ವೆಚ್ಚಕ್ಕೂ ಸಭೆ ಒಪ್ಪಿಗೆ ಸೂಚಿಸಿತು.

ನಗರಸಭೆ ಅಧ್ಯಕ್ಷೆ ಲಲಿತಾ ಆಂಜಿನೇಯ್ಯ ಕಡಗೋಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರಂಭದಲ್ಲಿಯೇ ವಿರೋಧ ಪಕ್ಷದ ಸದಸ್ಯರು ಪೌರಾಯುಕ್ತ ಗುರುಲಿಂಗಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. ಕಲುಷಿತ ನೀರಿನಿಂದ ಮೃತಪಟ್ಟ ಘಟನೆ ನಡೆದಾಗಲೇ ಸಭೆ ಕರೆಯಬೇಕಾಗಿತ್ತು. ಒಂದು ವಾರ ಏಕೆ ತಡಮಾಡಿದೀರಿ ಎಂದು ಎನ್‌.ಶ್ರೀನಿವಾಸರೆಡ್ಡಿ, ದರೂರು ಬಸವರಾಜ ಮತ್ತಿತರರು ಮಾತನಾಡಿದರು.

ಘಟನೆ ಕುರಿತು ಸಭೆಗೆ ಮಾಹಿತಿ ನೀಡಿದ ಪೌರಾಯುಕ್ತರು, ಕಳೆದ ಮೇ 22 ರಿಂದ ಕಾಲುವೆಯಿಂದ ಕೆರೆಗೆ ನೀರು ತುಂಬಲಾಗಿದ್ದು, ಯಾವುದೇ ಸಂಸ್ಕರಣೆ ಇಲ್ಲದೆ ನೀರು ಪೂರೈಸಿರುವುದು ಈ ಘಟನೆ ನಡೆಯಲು ಕಾರಣ. ಶುದ್ಧೀಕರಣ ಕೈಗೊಳ್ಳುವ ಕುರಿತು ಯಾವುದೇ ಸೂಚನೆ ಕೊಟ್ಟಿಲ್ಲ ಎಂಬುದನ್ನು ಅಲ್ಲಿರುವ ಸಿಬ್ಬಂದಿಯೂ ತಿಳಿಸಿದ್ದಾರೆ. ಶುದ್ಧೀಕರಣ ಘಟಕದ ಅವ್ಯವಸ್ಥೆ ಕುರಿತು ತಾಂತ್ರಿಕ ಅಧಿಕಾರಿಯು ಅಧ್ಯಕ್ಷರ, ಪೌರಾಯುಕ್ತರ ಗಮನಕ್ಕೆ ತಂದಿಲ್ಲ. ವಾಂತಿ ಭೇದಿ ಪ್ರಕರಣಗಳು ನಡೆದಾಗಲೇ ಶುದ್ಧೀಕರಣ ಘಟಕದ ಅವ್ಯವಸ್ಥೆ ನಗರಸಭೆ ಗಮನಕ್ಕೆ‌ ಬಂದಿದೆ ಎಂದರು.

ಹಿರಿಯ ಸದಸ್ಯ ಜಯಣ್ಣ ಮಾತನಾಡಿ, ನಗರಸಭೆ ಇತಿಹಾಸದಲ್ಲಿ ಕರಾಳ‌ ದಿನಗಳನ್ನು ಎದುರಿಸುವ ಸಂದರ್ಭ ಇದು. ಈ‌ ಹಿಂದೆ ಆಡಳಿತಾತ್ಮಕ ಸಂಕಷ್ಟಗಳು ಬಂದಿದ್ದವು.‌ ಆದರೆ ಇಂಥ ಘಟನೆಗಳು ನಡೆದಿಲ್ಲ. 2014-15 ರಲ್ಲಿ ಮ್ಯಾಕ್ರೋ ಅನುದಾನದಲ್ಲಿ ರಾಂಪೂರದಲ್ಲಿ ಹೊಸ ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗಿದೆ. ಹೊಸ ಘಟಕ 2018ರಲ್ಲಿ ಉದ್ಘಾಟನೆಯೂ ಆಗಿದೆ.. ಮೂರು ತಿಂಗಳು ಪ್ರಯೋಗಿಕವಾಗಿ ನಿರ್ವಹಣೆ ಮಾಡಿದ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯು, ಹಸ್ತಾಂತರ ಮಾಡಿಕೊಳ್ಳುವಂತೆ ರಾಯಚೂರು ನಗರಸಭೆಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ 21 ತಿಂಗಳುಗಳ ಬಳಿಕ ಮಂಡಳಿಗೆ ನಗರಸಭೆ ಪೌರಾಯುಕ್ತರು ಪತ್ರ ಬರೆದು, ಅದರಲ್ಲಿ ತಾಂತ್ರಿಕ ಲೋಪಗಳನ್ನು ಉಲ್ಲೇಖಿಸಿದ್ದಾರೆ. ಈಗಾಗಲೇ ಸಾಕಷ್ಟು ಸಮಯ ಕಳೆದಿದ್ದು,. ತಾಂತ್ರಿಕ ಸಮಸ್ಯೆ ಸರಿಪಡಿಸಲು ₹58 ಲಕ್ಷ ಅನುದಾನ ಅಗತ್ಯ ಎಂದು ಮಂಡಳಿಯು ಬೇಡಿಕೆ‌ ಇಟ್ಟಿತ್ತು. ಈ ವಿಷಯವನ್ನು ನಗರಸಭೆ ಅಧಿಕಾರಿಗಳು ಇದುವರೆಗೂ ಸಭೆಗೆ ತಂದಿಲ್ಲ ಎಂದರು.

ಹೊಸ‌ ಶುದ್ಧೀಕರಣ ಘಟಕ ಬಳಕೆ ಮಾಡದಿರುವುದು ಈ‌ ಘಟನೆ ನಡೆಯುವುದಕ್ಕೆ ಕಾರಣ. ನೀರಿನ ವಿಷಯದಲ್ಲಿ ರಾಜಕಾರಣ ಮಾಡಬಾರದು.‌ಇನ್ನೊಬ್ಬರನ್ನು ತುಳಿಯುವ ರಾಜಕಾರಣ ಮಾಡಬಾರದು. ನಗರಸಭೆ ಆಡಳಿತದಲ್ಲಿ ಬೇರೆಯವರು ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು. ಮೃತ ಕುಟುಂಬಗಳಿಗೆ ನಗರಸಭೆಯಿಂದಲೂ ಪರಿಹಾರ ಕೊಡಬೇಕು. ವೈದ್ಯಕೀಯ ವೆಚ್ಚ ಭರಿಸಬೇಕು ಎಂದು ಒತ್ತಾಯಿಸಿದರು.

ಸದಸ್ಯ ಎನ್‌.ಕೆ.ನಾಗರಾಜ ಮಾತನಾಡಿ, ಇಂಥ ಘಟನೆ ನಡೆದಿರುವುದು ಇಡೀ ನಗರಸಭೆ ವ್ಯವಸ್ಥೆ ತಲೆತಗ್ಗಿಸುವಂತಾಗಿದೆ. ನಗರದಲ್ಲಿ ನಿರ್ಮಾಣವಾಗಿರುವ ಓವರ್‌ಹೆಡ್‌ ಟ್ಯಾಂಕ್‌ಗಳನ್ನು ದಶಕಗಳಿಂದಲೂ ಸ್ವಚ್ಛತೆ ಮಾಡಿಲ್ಲ. ಶುದ್ಧೀಕರಣ ಘಟಕದಲ್ಲಿ ನುರಿತ ಸಿಬ್ಬಂದಿ ಇಲ್ಲ. ಇನ್ನು ಮೇಲಾದರೂ ವ್ಯವಸ್ಥೆ ಸುಧಾರಿಸಬೇಕಿದೆ ಎಂದರು.

ಸದಸ್ಯ ಶಶಿರಾಜ ಮಾತನಾಡಿ, ರಾಂಪೂರ ಹಳೇ ಶುದ್ಧೀಕರಣ ಘಟಕದಲ್ಲಿ 10 ಅಡಿ ಹೂಳು ತುಂಬಿಕೊಂಡಿರುವುದು ಈಗ ಗೊತ್ತಾಗಿದೆ. ಇದರ ನಿರ್ವಹಣೆಗೆ ಅಗತ್ಯ ಅನುದಾನ ಕೊಡಬೇಕು ಎಂದರು.

ಶರಣಬಸವ ಬಲ್ಲಟಗಿ ಮಾತನಾಡಿ, ನಗರದಲ್ಲಿ ಓವರ್‌ಹೆಡ್‌ ಟ್ಯಾಂಕ್‌ ನಿರ್ವಹಣೆಗೆ ಸಿಬ್ಬಂದಿಯಿಲ್ಲ. ಅವುಗಳಿಗೆ ಏಣಿಗಳಿಲ್ಲ. ಸುಮಾರು 15 ವರ್ಷಗಳಿಂದ ಸ್ವಚ್ಛ ಮಾಡಿಲ್ಲ ಎಂದರು.

ರಾಜು ಸಂಗಟಿ ಮಾತನಾಡಿ, ಕೃಷ್ಣಾನದಿಯಿಂದಲೂ ಕಲುಷಿತ ನೀರು ಪೂರೈಕೆ ಆಗುತ್ತಿದ್ದು, ಹರಿಜನವಾಡದಲ್ಲಿ ಪ್ರತಿದಿನವೂ ಒಬ್ಬರು ಸಾಯುತ್ತಿದ್ದಾರೆ. ಈ ಸಾವಿಗೆ ಕಲುಷಿತ ನೀರು ಕಾರಣ ಇರಬಹುದು ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿ.ರಮೇಶ, ಶ್ರೀನಿರಾಸರೆಡ್ಡಿ, ಜಿಂದಪ್ಪ ಸೇರಿದಂತೆ ಹಲವು ಸದಸ್ಯರು ಈ ರೀತಿ ಹೇಳಬಾರದು. ನೀರಿನ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದರು.

ಕಲುಷಿತ ನೀರಿನಿಂದ ಮೃತಪಟ್ಟ ಕುಟುಂಬಕ್ಕೆ ಎಷ್ಟು ಪರಿಹಾರ ಘೋಷಿಸಬೇಕು ಎನ್ನುವ ಬಗ್ಗೆ ಸದಸ್ಯ ಎನ್‌.ಶ್ರೀನಿವಾಸರೆಡ್ಡಿ ಅವರು ನೀಡಿದ ಸಲಹೆಗೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.

ಜಯಣ್ಣ ಮಾತನಾಡಿ, ಮೃತರ ಕುಟುಂಬಕ್ಕೆ ₹25 ಲಕ್ಷ ನೀಡಬೇಕು ಮತ್ತು ಉದ್ಯೋಗ ಕೊಡಬೇಕು ಎನ್ನುವ ಬೇಡಿಕೆಯನ್ನು ಹೋರಾಟಗಾರರು ಮುಂದಿಟ್ಟಿದ್ದಾರೆ. ಸಭೆಯಲ್ಲಿ ತೀರ್ಮಾನಿಸಿದಷ್ಟೇ ಪರಿಹಾರ ನೀಡಲಾಗುವುದು ಮತ್ತು ಉದ್ಯೋಗ ಒದಗಿಸುವುದು ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಕೊಡಬೇಕು ಎಂದರು.

ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದ ಬಳಿಕ ಸಭೆ ಮುಕ್ತಾಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT