ಶನಿವಾರ, ಡಿಸೆಂಬರ್ 5, 2020
25 °C

ದಣಿವರಿಯದ ನಾಯಕ ಮಾನ್ಪಡೆ: ಆರ್.ಎಸ್.ಬಸವರಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮಾರುತಿ ಮಾನ್ಪಡೆ ಅವರು ಕಾರ್ಮಿಕ, ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮರಧೀರರಾಗಿದ್ದರು. ಸಂಘಟಿತ ಚಳವಳಿ ರೂಪಿಸಿ ನ್ಯಾಯ ಒದಗಿಸುವ ಕೆಲಸ ಮಾಡುತ್ತಾ ಬಂದಿರುವುದು ಮಾದರಿಯಾಗಿದೆ ಎಂದು ಪಂಚಾಯಿತಿ ನೌಕರರ ಸಂಘದ ರಾಜ್ಯ ಮುಖಂಡ ಆರ್.ಎಸ್.ಬಸವರಾಜ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಸಿಯುಟಿಐ ಸಂಯೋಜಿತ ಜಿಲ್ಲಾ ಪಂಚಾಯಿತಿ ನೌಕರರ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮಾನ್ಪಡೆ ಅವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನ್ಪಡೆ ಅವರು ರಾಜ್ಯದ ಹಿರಿಯ ಕಾರ್ಮಿಕ ನಾಯಕರಾಗಿದ್ದರು. ಅವರು ದಣಿವರಿಯದ ನಾಯಕ, ರೈತ, ಕಾರ್ಮಿಕ ಇನ್ನಿತರ ಸಾಮಾಜಿಕ ಚಳವಳಿಗಳನ್ನು ರಾಜ್ಯದಲ್ಲಿ ಬಲಿಷ್ಠವಾಗಿ ಕಟ್ಟಿರುವ ಕೀರ್ತಿ ಅವರದ್ದು. ಇಂತಹ ನಾಯಕರನ್ನು ಕಳೆದುಕೊಂಡಿರುವದು ಕಾರ್ಮಿಕ ರೈತ ಚಳವಳಿಗೆ ತುಂಬಲಾರದ ನಷ್ಟವಾಗಿದೆ. ಮಾರುತಿ ಮಾನ್ಪಡೆಯವರ ಮುಂದಿನ ಹೋರಾಟ ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಚಳವಳಿ ರೂಪಿಸಬೇಕು. ಅಂದಾಗ ಮಾತ್ರ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದರು .

ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಶರಣಬಸವ ಮಾತನಾಡಿ, ಮಾರುತಿ ಮಾನ್ಪಡೆಯವರು ರೈತ ಮತ್ತು ಕಾರ್ಮಿಕರಲ್ಲದೆ ದಲಿತ ಮಹಿಳೆಯರ, ವಿದ್ಯಾರ್ಥಿಗಳ ಚಳವಳಿಯನ್ನು ಕಟ್ಟುವ ಮೂಲಕ ಮಾರ್ಗದರ್ಶನ ನೀಡುತ್ತಿದ್ದರು. ಸಿ.ಪಿ.ಎಂ. ಪಕ್ಷದ ನಾಯಕರಾಗಿ  ಪಕ್ಷವನ್ನು ಬೆಳೆಸುವಲ್ಲಿ ತುಂಬಾ ಶ್ರಮವಹಿಸಿದ್ದರು. ಅವರು ಯಾವುದೇ ಚಳವಳಿಯನ್ನು ರೂಪಿಸಿದರೆ ಅದು ನಿರ್ಣಾಯಕ ಹಂತ ಮುಟ್ಟುವ ತನಕ ಹೋರಾಟ ಮುಂದುವರೆಯುತಿತ್ತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದೇವದಾಸಿ ಮಹಿಳಾ ಪುನರ್ವಸತಿ ನಿಗಮದ ಅಧಿಕಾರಿ ಗೋಪಾಲ ನಾಯಕ , ವಿಮಾ ನೌಕರರ ಸಂಘದ ಮುಖಂಡ ಎಂ.ರವಿ, ಕೃಷಿ ಕೂಲಿಕಾರರ ಸಂಘದ ಮುಖಂಡ ಕರಿಯಪ್ಪ ಅಚ್ಚಳ್ಳಿ, ಸಿ.ಐ.ಟಿ.ಯು ಜಿಲ್ಲಾಧ್ಯಕ್ಷೆ ವರಲಕ್ಷ್ಮಿ, ಕೆ.ಜಿ.ವೀರೇಶ, ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮರೇಶ ಕನ್ನಾಳ , ಎಚ್.ಪದ್ಮಾ , ಮಹಾದೇವಪ್ಪ ಜಂಬಲದಿನ್ನಿ ಶ್ರೀಧರ್ , ಶ್ರೀರಾಮಲು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.