ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ | ಕುಡಿಯುವ ನೀರು ಅಸುರಕ್ಷಿತ: ಜನರಲ್ಲಿ ಆತಂಕ

ಮಂಜುನಾಥ ಎನ್ ಬಳ್ಳಾರಿ
Published 6 ಮೇ 2024, 5:54 IST
Last Updated 6 ಮೇ 2024, 5:54 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಪೂರೈಸುವ ಕುಡಿಯುವ ನೀರು ಅಶುದ್ಧವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎನ್ನುವ ವರದಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಪಟ್ಟಣದ ವಾರ್ಡ್‌ ಸಂಖ್ಯೆ 3,8,9,14 ಮತ್ತು 16 ರಲ್ಲಿ ಪೂರೈಕೆಯಾಗುವ ನೀರು ಅಸುರಕ್ಷಿತ ಎಂದು ಪ್ರಯೋಗಾಲಯದ ವರದಿಯಿಂದ ಬಹಿರಂಗವಾಗಿದೆ.

ತುಂಗಭದ್ರಾ ಎಡದಂಡೆ ಕಾಲುವೆಯಿಂದ ಇಲ್ಲಿನ 16 ವಾರ್ಡ್‌ಗಳಿಗೆ ಶುದ್ಧ ನೀರು ಪೂರೈಕೆಗೆ ಲಕ್ಷ್ಮೀ ನಾರಾಯಣ ಕ್ಯಾಂಪ್ ಹತ್ತಿರ ಕೆರೆ ನಿರ್ಮಿಸಲಾಗಿದೆ. 1, 13 ಮತ್ತು 15ನೇ ವಾರ್ಡ್‌ಗಳಿಗೆ ಕೊಳವೆಬಾವಿ ನೀರು ಪೂರೈಸಲಾಗುತ್ತಿದೆ. ಉಳಿದ 13 ವಾರ್ಡ್‌ಗಳಿಗೆ ಕೆರೆಯ ನೀರನ್ನು ಪೂರೈಸಲಾಗುತ್ತಿದೆ.

ಕೆರೆ ನೀರು ಕಲುಷಿತಗೊಂಡಿದೆ. ಹಸಿರು ಬಣ್ಣದಿಂದ ಕೂಡಿದೆ ಮತ್ತು ನೀರಿನಲ್ಲಿ ಕಸ–ಕಡ್ಡಿ, ಹುಳುಗಳು ಬರುತ್ತಿವೆ. ದುರ್ನಾತ ಬೀರುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಪ್ರಯೋಗಾಲಯದಲ್ಲಿ ಎಚ್2ಎಸ್ ಮೈಕ್ರೊಬಯೊಲಾಜಿಕಲ್ ಮಾದರಿಯಲ್ಲಿ ನೀರಿನ ಪರೀಕ್ಷೆ ಮಾಡಲಾಗಿದೆ. 3,8,9,14 ಮತ್ತು 16ನೇ ವಾರ್ಡ್‌ಗೆ ಪೂರೈಕೆಯಾಗುವ ನೀರು ಅಶುದ್ಧವಾಗಿದೆ. ಕುಡಿಯಲು ಯೋಗ್ಯವಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನೀರು ಅಥವಾ ಕಾಯಿಸಿ ಆರಿಸಿದ ನೀರು ಸೇವಿಸುವುದು. ನೀರು ಸಂಗ್ರಹ ತೊಟ್ಟಿಗಳನ್ನು ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಛಗೊಳಿಸುವುದು. ತೊಟ್ಟಿಗಳ ಸುತ್ತಲೂ ನೀರು ನಿಲ್ಲದಂತೆ ಸುತ್ತಮುತ್ತಲಿನ ತಿಪ್ಪೆ ಗುಂಡಿ ಹಾಗೂ ಕಸದ ತೊಟ್ಟಿಗಳನ್ನು ತೆರವುಗೊಳಿಸಬೇಕು ಎಂದು ವೈದ್ಯಾಧಿಕಾರಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.

‘ಕೆಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಬೇಸಿಗೆಯ ಆರಂಭದಿಂದಲೂ ಮೂರು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಕೆರೆಯಿಂದ ಪೂರೈಸುವ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಕಲುಷಿತಗೊಂಡಿದೆ ಎಂದು ಹಲವು ಬಾರಿ ಮಾಹಿತಿ ನೀಡಿದ್ದರೂ ಕೆರೆ ನೀರನ್ನು ಶುದ್ಧೀಕರಿಸಿ ಪೂರೈಸುವ ಬಗ್ಗೆ ಅಧಿಕಾರಿಗಳು ಗಮನಹರಿಸಿಲ್ಲ. ಈಗ ನೀರು ಅಸುರಕ್ಷಿತ ಎನ್ನುವ ವರದಿ ವಾರ್ಡ್ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಈಚೆಗೆ ಮೇಲ್ತೊಟ್ಟಿ ಸ್ವಚ್ಛಗೊಳಿಸಿದಾಗ ಅದರಲ್ಲಿ ವಿಪರೀತ ಕಸಕಡ್ಡಿ, ಗಲೀಜು ಹೊರಬಂತು. ನೀರು ದುರ್ವಾಸನೆಯಿಂದ ಕೂಡಿತ್ತು’ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮೌನೇಶ ಹಿರೇಕುರಬರ ಆರೋಪಿಸಿದರು.

ರಮೇಶ ನಗನೂರು
ರಮೇಶ ನಗನೂರು
ಕೆ.ದುರುಗಣ್ಣ
ಕೆ.ದುರುಗಣ್ಣ

ಕೆರೆ ನೀರು ಕಲುಷಿತಗೊಂಡಿದೆ. ಈ ಬಗ್ಗೆ ಮಾಹಿತಿ ನೀಡಿದರೂ ಸ್ವಚ್ಛತೆಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಕೆರೆ ನೀರಿನ ಪರೀಕ್ಷೆ ಮಾಡಿದರೆ ಸತ್ಯಾಂಶ ತಿಳಿಯುತ್ತದೆ

-ರಮೇಶ ನಗನೂರು ಪಟ್ಟಣ ಪಂಚಾಯಿತಿ ಸದಸ್ಯ

ಎಲ್ಲ ವಾರ್ಡ್‌ಗಳಿಗೂ ಕೆರೆ ನೀರು ಪೂರೈಸಲಾಗುತ್ತಿದೆ. ಕೆಲವು ವಾರ್ಡ್‌ಗಳಿಗೆ ಪೂರೈಸುವ ನೀರು ಅಸುರಕ್ಷಿತ ಎಂಬ ವರದಿ ಬಂದಿದೆ. ಈ ಕುರಿತು ಗಮನಹರಿಸಲಾಗುವುದು. ವೈದ್ಯರ ಶಿಫಾರಸಿನಂತೆ ಕ್ರಮ ಜರುಗಿಸಲಾಗುವುದು

-ಕೆ.ದುರುಗಣ್ಣ ಪ್ರಭಾರ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT