ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿವಯಸ್ಸಿನಲ್ಲೂ ಜಿ.ಡೇವಿಡ್ ಕ್ರೀಡಾ ಸಾಧನೆ

ಕರಾಟೆ, ದೇಹದಾರ್ಢ್ಯ, ಕುಸ್ತಿಗೂ ಸೈ ಎನ್ನುತ್ತಿರುವ ನಿವೃತ್ತ ನೌಕರ
Last Updated 29 ಡಿಸೆಂಬರ್ 2018, 12:52 IST
ಅಕ್ಷರ ಗಾತ್ರ

ರಾಯಚೂರು: ನಿವೃತ್ತ ನೌಕರರೆಂದರೆ ಪಿಂಚಣಿ ಪಡೆದು ಆರಾಮವಾಗಿ ಜೀವನ ಸಾಗಿಸುವುದು ಸಾಮಾನ್ಯ ಸಂಗತಿ. ಆದರೆ, ಇಲ್ಲೊಬ್ಬ ಕಂದಾಯ ಇಲಾಖೆಯ ನಿವೃತ್ತ ನೌಕರ ಜಿ.ಡೇವಿಡ್‌ ಅವರು 73 ರಲ್ಲೂ 23 ರ ಪ್ರಾಯದವರಂತೆ ಕ್ರೀಡೆಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡುತ್ತಿದ್ದಾರೆ.

ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಎಲ್ಲಿಯೇ ಕ್ರೀಡೆಗಳು ನಡೆದರೂ, ಪಿಂಚಣಿ ಹಣದಲ್ಲಿ ಅಲ್ಲಿಗೆ ಹೋಗಿ ಕ್ರೀಡೆಯಲ್ಲಿ ಪಾಲ್ಗೊಂಡು ಇನ್ನೂ ಸಾಧನೆ ಮಾಡುತ್ತಿದ್ದಾರೆ. 1968ರಿಂದಲೂ ಕ್ರೀಡಾ ಸ್ಪರ್ಧೆಗಳಲ್ಲಿ ತೊಡಗಿಸಿಕೊಂಡಿರುವ ಇವರು 2004 ಡಿಸೆಂಬರ್ 31ಕ್ಕೆ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿ ನಂತರ ಮಾದರಿ ಜೀವನ ನಡೆಸುತ್ತಿದ್ದಾರೆ.

ನಗರದ ಕೊಳೆಗೇರಿ ಪ್ರದೇಶ ಇಂದಿರಾನಗರ ಬಡಾವಣೆಯಲ್ಲಿ ಚಿಕ್ಕದೊಂದು ಮನೆ ಹೊಂದಿರುವ ಡೇವಿಡ್‌ ಅವರು, ಕ್ರೀಡೆಗಳಲ್ಲಿ ಸಾಧನೆಗಳನ್ನು ಮಾಡಬೇಕು ಎನ್ನುವ ಅತೀವ ಹಂಬಲದಿಂದ ನಿತ್ಯವೂ ಅಭ್ಯಾಸದಲ್ಲಿ ತೊಡಗುತ್ತಾರೆ. ಇವರ ಸಾಧನೆಯನ್ನು ಹಲವು ಸಂಘ– ಸಂಸ್ಥೆಗಳು ಗುರುತಿಸಿ ಸತ್ಕರಿಸಿವೆ. ಆದರೆ, ಸ್ಥಳೀಯ ಆಡಳಿತ ಹಾಗೂ ಸರ್ಕಾರದಿಂದ ಮಾತ್ರ ಯಾವುದೇ ಬೆಂಬಲ ದೊರೆತಿಲ್ಲ.

ಕರಾಟೆ, ದೇಹದಾರ್ಢ್ಯ, ಕುಸ್ತಿ, ಓಟ, ಚಕ್ರ ಎಸೆತ, ಗುಂಡು ಎಸೆತ, ಉದ್ದ ಜಿಗಿತ ಹಾಗೂ ಭಾರ ಎತ್ತುವ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಶಸ್ತಿಗಳನ್ನು ಪಡೆದಿದ್ದಾರೆ. ಶಿವಮೊಗ್ಗದಲ್ಲಿ 2016 ಹಾಗೂ 2018ರಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ರಾಜ್ಯ ಹಾಗೂ ರಾಷ್ಟ್ರ ಮಟ್ಟ ಸೇರಿದಂತೆ ವಿವಿಧ ಹಂತದ 20 ಕ್ಕೂ ಅಧಿಕ ಕರಾಟೆ ಸ್ಪರ್ಧೆಗಳಲ್ಲಿ ಪ್ರದರ್ಶನ ನೀಡಿ, 19 ಬಾರಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. 100 ಮೀಟರ್‌ ಓಟದಿಂದ 3000 ಮೀಟರ್ ವರೆಗಿನ ವಿವಿಧ ಸ್ಪರ್ಧೆಗಳಲ್ಲಿ 13 ಬಾರಿ ಪ್ರಶಸ್ತಿ ಗಳಿಸಿದ್ದಾರೆ.

ದೇಹದಾರ್ಢ್ಯ ಸ್ಪರ್ಧೆಗಳಲ್ಲಿ 9 ಬಾರಿ ಪಾಲ್ಗೊಂಡು 9 ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕುಸ್ತಿ ಸ್ಪರ್ಧೆಗಳಲ್ಲಿ 13 ಬಾರಿ ಭಾಗವಹಿಸಿ 9 ಪ್ರಶಸ್ತಿಗಳನ್ನು ಪಡೆದಿದ್ದಾರೆ. ಚಕ್ರ ಎಸೆತದಲ್ಲಿ 3ಬಾರಿ, ಗುಂಡು ಎಸೆತದಲ್ಲಿ 2ಬಾರಿ ಪ್ರಶಸ್ತಿ ಗಳಿಸಿದ್ದಾರೆ. ಉದ್ದ ಜಿಗಿತ ಹಾಗೂ ಭಾರ ಎತ್ತುವಲ್ಲಿಯೂ ತಲಾ ಒಂದು ಬಾರಿ ಪ್ರಶಸ್ತಿ ಗಳಿಸಿದ್ದಾರೆ. ಒಟ್ಟಾರೆ 57 ಬಾರಿ ಪ್ರಶಸ್ತಿಗಳನ್ನು ಪಡೆದಿದ್ದು, 34 ಬಾರಿ ಪ್ರಥಮ ಸ್ಥಾನ ಗಳಿಸುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾರೆ.

ಕೆಳ ಹಂತದ ನೌಕರನಾಗಿ ಕೆಲಸ ಮಾಡಿದ ಡೇವಿಡ್‌ ಹಲವು ಪ್ರಶಸ್ತಿಗಳನ್ನು ಗಳಿಸುವ ಮೂಲಕ ಸಾಧನೆಯ ಶಿಖರ ನಿರ್ಮಿಸಿದ್ದಾರೆ. ಈ ಹಿರಿಯ ನಾಗರಿಕನ ಸಾಧನೆಯನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಗುರುತಿಸಿ ಪ್ರೋತ್ಸಾಹಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT