ಸೋಮವಾರ, ಜುಲೈ 4, 2022
22 °C
₹1 ಕೋಟಿ ವೆಚ್ಚದಲ್ಲಿ ಬೀದಿ ದೀಪಗಳ ಅಳವಡಿಕೆ ಕಾಮಗಾರಿ

ಮಾನ್ವಿ | ಕ್ರಿಯಾ ಯೋಜನೆ ಲೋಪ: ಕಾಮಗಾರಿ ಸ್ಥಗಿತ

ಬಸವರಾಜ ಭೋಗಾವತಿ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ: ಸ್ಥಳೀಯ ಪುರಸಭೆಯ ಆಡಳಿತ ಮಂಡಳಿಯ ಗಮನಕ್ಕೆ ತರದೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಬೀದಿ ದೀಪಗಳ ಅಳವಡಿಕೆಯ ಕಾಮಗಾರಿ ಕೈಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಪುರಸಭೆಯ ಆಡಳಿತ ಮಂಡಳಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಐದು ದಿನಗಳಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹1ಕೊಟಿ ವೆಚ್ಚದಲ್ಲಿ ಪಟ್ಟಣದ ಸೂರ್ಯ ರೈಸ್ ಮಿಲ್ ನಿಂದ ಎಪಿಎಂಸಿ ವರೆಗೆ ಮುಖ್ಯ ರಸ್ತೆಯುದ್ದಕ್ಕೂ ವಿಭಜಕದ ಮೇಲೆ ವಿದ್ಯುತ್ ಕಂಬಗಳನ್ನು ಅಳವಡಿಸಿ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಲು ಉದ್ದೇಶ ಹೊಂದಲಾಗಿದೆ. ಅಧಿಕಾರಿಗಳು ಸದರಿ ಕಾಮಗಾರಿಯ ಕ್ರಿಯಾ ಯೋಜನೆ ಸಿದ್ಧಪಡಿಸುವಾಗ ಸ್ಥಳೀಯ ಪುರಸಭೆಯ ಆಡಳಿತ ಮಂಡಳಿಯ ಒಪ್ಪಿಗೆ ಪಡೆಯದಿರುವುದು ಈಗ ವಿವಾದಕ್ಕೆ ಮೂಲ ಕಾರಣವಾಗಿದೆ.

ಹಲವು ವರ್ಷಗಳ ಹಿಂದೆಯೇ ಪುರಸಭೆಯ ವತಿಯಿಂದ ಸದರಿ ರಸ್ತೆಯುದ್ದಕ್ಕೂ 56 ವಿದ್ಯುತ್ ಕಂಬ ಹಾಗೂ ದೀಪಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಈಗ ಸದರಿ ವಿದ್ಯುತ್ ಕಂಬಗಳ ಪಕ್ಕದಲ್ಲಿ 5 ಅಡಿ ಅಂತದಲ್ಲಿ ಹೊಸದಾಗಿ ವಿದ್ಯುತ್ ಕಂಬಗಳನ್ನು ಅಳವಡಿಸಲು ಕಾಮಗಾರಿ ಕೈಗೊಂಡಿರುವುದು ಸರ್ಕಾರದ ಅನುದಾನ ಪೋಲಾಗುವಂತೆ ಮಾಡಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪುರಸಭೆಯ ಅಧ್ಯಕ್ಷೆ ರಶೀದಾ ಬೇಗಂ ನೇತೃತ್ವದಲ್ಲಿ ಪುರಸಭೆಯ ಸದಸ್ಯರ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ದೂರು ಸಲ್ಲಿಸಿದ್ದು ಕಾಮಗಾರಿಗೆ ತಡೆ ನೀಡುವಂತೆ ಕೋರಿದ್ದಾರೆ. ಸದರಿ ಕಾಮಗಾರಿಯ ಕ್ರಿಯಾ ಯೋಜನೆಯಲ್ಲಿ ಮಾರ್ಪಾಟು ಮಾಡಬೇಕು. ಸೂರ್ಯ ರೈಸ್ ಮಿಲ್‌ನಿಂದ ಎಲ್‌ಐಸಿ ಕಚೇರವರೆಗೆ ಹಾಗೂ ಎಪಿಎಂಸಿಯಿಂದ ಧ್ಯಾನಮಂದಿರದವರೆಗೆ ಇರುವ ರಸ್ತೆಯಲ್ಲಿ ಬೀದಿ ದೀಪಗಳ ಅಳವಡಿಕೆಗೆ ₹1 ಕೋಟಿ ಅನುದಾನ ಬಳಸಬೇಕು ಎಂದು ಅವರು ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ.

ಮುಖ್ಯ ರಸ್ತೆಯಲ್ಲಿ ಈಗಾಗಲೇ ವಿದ್ಯುದ್ದೀಪಗಳ ವ್ಯವಸ್ಥೆ ಇದೆ. ಈಗ ಹೆಚ್ಚುವರಿಯಾಗಿ ವಿದ್ಯುದ್ದೀಪಗಳ ಅಳವಡಿಕೆಯಿಂದ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪುರಸಭೆಗೆ ಆರ್ಥಿಕವಾಗಿ ಹೊರೆಯಾಗಲಿದೆ ಎಂದು ತಿಳಿದು ಬಂದಿದೆ. ಸದ್ಯದ ಮಟ್ಟಿಗೆ ಸದರಿ ಕಾಮಗಾರಿ ಸ್ಥಗಿತಗೊಂಡಿದ್ದು , ಜಿಲ್ಲಾಧಿಕಾರಿಯ ಅಂತಿಮ ನಿರ್ಧಾರಕ್ಕಾಗಿ ಕಾಯಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು