ಮಂಗಳವಾರ, ಜೂನ್ 28, 2022
21 °C
ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಮುಂಗಾರು ಬೀಜ ದಿನೋತ್ಸವ–2022

‘ಬೀಜಗ್ರಾಮ ಯೋಜನೆಯಿಂದ ಉತ್ಪಾದನೆಗೆ ಮಹತ್ವ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಬೀಜಗ್ರಾಮ ಯೋಜನೆ ಮೂಲಕ ಬೀಜೋತ್ಪಾದನೆ ಮಾಡುವುದಕ್ಕೆ ರೈತರಿಗೆ  ಹೆಚ್ಚು ಮಹತ್ವ ನೀಡಲಾಗಿದೆ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದದ ಬೀಜ ಘಟಕದ ವಿಶೇಷ ಅಧಿಕಾರಿ ಡಾ.ಅರುಣಕುಮಾರ ಹೊಸಮನಿ ಹೇಳಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಖಿಲ ಭಾರತ ಸಂಯೋಜಿತ ಸಂಶೋಧನೆ ಯೋಜನೆ (ಐಸಿಎಆರ್‌) ಬೀಜ ಘಟಕದ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ 2022ನೇ ಮುಂಗಾರು ಬೀಜ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದಲ್ಲಿ ಲಭ್ಯವಿರುವ ಸುಧಾರಿತ ಬೀಜಗಳ ಮಾಹಿತಿ, ತಾಂತ್ರಿಕತೆ ಹಾಗೂ ಬೀಜೋತ್ಪಾದನಾ ತಂತ್ರಜ್ಞಾನವನ್ನು ರೈತರಿಗೆ ಮುಟ್ಟಿಸುವ ಉದ್ದೇಶಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಳೆದ ವರ್ಷ ಬೀಜ ಘಟಕದಿಂದ ಕಡಲೆ ಮತ್ತು ತೊಗರಿಗೆ ಆದ್ಯತೆ ಕೊಡಲಾಗಿತ್ತು. ಈ ವರ್ಷದಿಂದ ಸೂರ್ಯಕಾಂತಿ (ಆರ್‌ಎಸ್‌ಎಫ್‌ಎಚ್‌ ತಳಿ), ಆರ್‌ಎಫ್‌ಎಚ್ 11887 ಸಂಕ್ರಣ ತಳಿಯೂ ಲಭ್ಯ ಇದೆ. ರೈತರಿಗೆ ಸೂರ್ಯಕಾಂತಿ ಬೀಜ ಲಭ್ಯವಿದೆ. ಇದರೊಂದಿಗೆ ಸೋಯಾಬಿನ್‌, ಹೆಸರು, ಗೋವಿನಜೋಳ, ಮೆಣಸಿನಕಾಯಿಯಲ್ಲಿ ಸಂಕ್ರಣ ತಳಿಗಳನ್ನು ಬೀಜೋತ್ಪಾದನಾ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಎನ್‌. ಕಟ್ಟಿಮನಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಎಲ್ಲ ರೈತರಿಗೆ ಬೀಜಗಳನ್ನು ಒದಗಿಸಲು ವಿಶ್ವವಿದ್ಯಾಲಯ ಸಿದ್ಧವಿದೆ. ರೈತರು ಏಕ ಬೆಳೆಯ ಬದಲು ಬಹುಬೆಳೆಯನ್ನು ಬೆಳೆಯಬೇಕು.

ಬೀಜ ಖರೀದಿಗೆ ಹೆಚ್ಚು ಗಮನ ಕೊಡಬೇಕು. ಸುಧಾರಿತ ಬೇಸಾಯ ಮಾಹಿತಿ ಪಡೆಯುವುದಕ್ಕಾಗಿ ವಿಶ್ವವಿದ್ತಾಲಯದ ತಜ್ಞರನ್ನು ಭೇಟಿ ಮಾಡಬೇಕು ಎಂದರು.

ದೇಶದ 726 ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಕಲಬುರ್ಗಿ ಕೃಷಿ ವಿಜ್ಞಾನ ಕೇಂದ್ರ ಎರಡನೇ ಸ್ಥಾನದಲ್ಲಿದೆ. ಇದಕ್ಕಾಗಿ ₹8 ಲಕ್ಷ ಬಹುಮಾನ ಪಡೆದಿದೆ. ಇದಕ್ಕೆ ರೈತರ ಸಹಭಾಗಿತ್ವವೇ ಕಾರಣ. ರೈತರು ಸ್ವಗ್ರಾಮ ಬೀಜೋತ್ಪಾದನೆಗೆ ಹೆಚ್ಚಿನ ಹರಿಸಬೇಕು. ರೈತರು ಸ್ವ ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಂಡಾಗ ಬೀಜದ ಖರ್ಚು ಉಳಿಯುತ್ತದೆ. ಬೀಜೋತ್ಪಾದನೆ ತಾಂತ್ರಿಕತೆಗಳನ್ನು ತಿಳಿಸುವುದಕ್ಕೆ ವಿಜ್ಞಾನಿಗಳು ಸಿದ್ಧರಿದ್ದಾರೆ. ರೈತರ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಗತಿಪರ ರೈತ ಎಫ್‌.ಎಂ.ಸಿದ್ದಾರೆಡ್ಡಿ, ಬೀಜೋತ್ಪಾದನೆಯಲ್ಲಿ ತೊಡಗಿದ ರೈತರಿಗೆ ವಿಶ್ವವಿದ್ಯಾಲಯವು 75 ದಿನಗಳಲ್ಲಿ ಹಣ ಸಂದಾಯ ಮಾಡಿದ್ದು ವಿಶೇಷ. ರಾಜ್ಯದಲ್ಲಿ ಈ ಮೊದಲು 20 ಲಕ್ಷ ಕ್ವಿಂಟಲ್‌ ಬೀಜೋತ್ಪಾದನೆ ಆಗುತ್ತಿತ್ತು. ಅದರ ಪ್ರಮಾಣ 8 ರಿಂದ 5 ಲಕ್ಷಕ್ಕೆ ಇಳಿಕೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಬೀಜೋತ್ಪಾದನೆಗೆ ಸರಿಯಾಗಿ ಪ್ರೋತ್ಸಾಹ ಸಿಗದಿರುವುದು ಬೀಜೋತ್ಪಾದನೆ ಹಿಂದುಳಿಯಲು ಕಾರಣ. ಬೀಜೋತ್ಪಾದನಾ ರೈತರು ಸಂಘಟಿತರಾಗಬೇಕು. ತೊಗರಿಯಲ್ಲಿ ಬೀಜೋತ್ಪಾದನೆಗೆ ಕನಿಷ್ಠ ಪ್ರತಿ ಕ್ವಿಂಟಲ್‌ಗೆ ₹8,500 ದರ ನಿಗದಿ ಮಾಡಬೇಕು. ಬೀಜೋತ್ಪಾದನಾ ರೈತರಿಗೆ ನಿಯಮಗಳನ್ನು ಸಡಿಲುಗೊಳಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಎಂ.ಜಿ. ಪಾಟೀಲ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ರಾಯಚೂರು ಕೃ ವಿವಿ ಸಂಶೋಧನೆಗೆ ಒಳಪಟ್ಟ ಏಳು ತಳಿಗಳು ನೋಂದಣಿಯಾಗಿವೆ. ಇದು ವಿಶ್ವವಿದ್ಯಾಲಯಕ್ಕೆ ಸಂದ ಗೌರವವಾಗಿದೆ. ತೊಗರಿಯಲ್ಲಿ ಜಿಆರ್‌ಜಿ811, ಸೂರ್ಯಕಾಂತಿ ಹೈಬ್ರಿಡ್‌ ತಳಿಗಳು ಇದರಲ್ಲಿವೆ. ಗ್ರಾಮೀಣ ಭಾಗದ ರೈತರು ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಂಡು ಅಧಿಕ ಲಾಭ ಪಡೆಯುವುದಕ್ಕೆ ಸಾಧ್ಯವಿದೆ ಎಂದು ತಿಳಿಸಿದರು.

ಅತಿಹೆಚ್ಚು ಬೀಜೋತ್ಪಾದನೆ ಮಾಡಿರುವ ಪ್ರಗತಿಪರ ರೈತರನ್ನು ಅಭಿನಂದಿಸಲಾಯಿತು.

ಸ್ನಾತಕೋತ್ತರ ಡೀನ್‌ ಡಾ.ಭೀಮಣ್ಣ, ವಿಸ್ತರಣಾ ನಿರ್ದೇಶಕ ಡಾ.ಡಿ.ಎಂ.ಚಂದರಗಿ, ಬೀಜ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಶಕುಂತಲಾ, ಕರ್ನಾಟಕ ಬೀಜ ನಿಗಮ ವ್ಯವಸ್ಥಾಪಕ ಪ್ರಭು ತುರಾಯಿ ಇದ್ದರು.

ಬೀಜ ವಿಜ್ಞಾನಿ ಡಾ.ಎಸ್‌.ಆರ್‌.ದೊಡ್ಡಗೌಡರ ಸ್ವಾಗತಿಸಿದರು. ಕೃಷಿ ವಿಜ್ಞಾನಿ ಡಾ.ಉಮೇಶ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.