ಏಳು ಅಭ್ಯರ್ಥಿಗಳಿಂದ ಉಮೇದುವಾರಿಕೆ

ಭಾನುವಾರ, ಏಪ್ರಿಲ್ 21, 2019
26 °C
ನಾಮಪತ್ರ ಸಲ್ಲಿಕೆ ಮುಕ್ತಾಯ, ಪರಿಶೀಲನೆ ಇಂದಿನಿಂದ ಆರಂಭ

ಏಳು ಅಭ್ಯರ್ಥಿಗಳಿಂದ ಉಮೇದುವಾರಿಕೆ

Published:
Updated:
Prajavani

ರಾಯಚೂರು: ಎರಡನೇ ಹಂತದಲ್ಲಿ ನಡೆಯುತ್ತಿರುವ ರಾಯಚೂರು ಲೋಕಸಭೆ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರಗಳ ಸಲ್ಲಿಕೆ ಗುರುವಾರ ಮುಕ್ತವಾಯವಾಗಿದ್ದು, ಒಟ್ಟು ಏಳು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿವೆ.

ಕಾಂಗ್ರೆಸ್‌ ಅಭ್ಯರ್ಥಿ ಭಗವಂತ ವಿ. ನಾಯಕ ಅವರು ಎರಡನೇ ಬಾರಿಗೆ ನಾಮಪತ್ರ ಸಲ್ಲಿಸಿದರು. ಈ ಮೊದಲು ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಆಸ್ತಿ ವಿವರ ಸಲ್ಲಿಸಿರಲಿಲ್ಲ.

ಬಿಜೆಪಿ ಅಭ್ಯರ್ಥಿ ಅಮರೇಶ್ವರ ನಾಯಕ ಗುರುವಾರ ಮತ್ತೆ ಮೂರು ಸಲ ನಾಮಪತ್ರ ಸಲ್ಲಿಸಿ ಗಮನ ಸೆಳೆದರು. ಗಂಜ್‌ ಕಲ್ಯಾಣ ಪಂಟಪದಿಂದ ಅದ್ಧೂರಿ ಮೆರವಣಿಗೆ ಬರುವ ಪೂರ್ವದಲ್ಲಿಯೇ ಶಾಸಕ ಶ್ರೀರಾಮುಲು, ಮುಖಂಡರಾದ ಮಾಲೀಕಯ್ಯ ಗುತ್ತೇದಾರ್‌, ಬಾಬುರಾವ್‌ ಚಿಂಚನಸೂರ ಜೊತೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು. ಆನಂತರ ಮೆರವಣಿಗೆ ಮೂಲಕ ಬಂದಾಗೊಮ್ಮೆ ನಾಮಪತ್ರ ಸಲ್ಲಿಸಿದರು. ಎರಡು ದಿನಗಳ ಹಿಂದೆಯೇ ನಾಮಪತ್ರ ಸಲ್ಲಿಸಿರುವುದು ಸೇರಿ ಒಟ್ಟು ನಾಲ್ಕು ಬಾರಿ ಜಿಲ್ಲಾ ಚುನಾವಣಾಧಿಕಾರಿಗೆ ದಾಖಲೆಗಳನ್ನು ಒದಗಿಸಿದರು.

ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ ಉಮೇದುವಾರಿಕೆ ಸಲ್ಲಿಸಿರುವ ಮಾಜಿ ಸಂಸದ ರಾಜಾ ರಂಗಪ್ಪ ನಾಯಕ ಸ್ಪರ್ಧಿಸುತ್ತಿರುವುದು ಖಚಿತ ಎಂದು ಹೇಳಿ ಕುತೂಹಲ ಮೂಡಿಸಿದ್ದಾರೆ. ಸುರಪುರ ಕ್ಷೇತ್ರ ಸೇರಿದಂತೆ ವಿವಿಧೆಡೆ ತಮ್ಮದೇ ಆದ ಪ್ರಭಾವ ಹೊಂದಿರುವ ರಂಗಪ್ಪ ನಾಯಕ ಅವರು ಮತಗಳ ವಿಭಜನೆಗೆ ಕಾರಣರಾಗಬಹುದು. ಅವರು ಚುನಾವಣೆಗೆ ಸ್ಪರ್ಧಿಸಿದರೆ ಯಾವ ಪಕ್ಷಕ್ಕೆ ಅನುಕೂಲ ಎನ್ನುವ ಲೆಕ್ಕಾಚಾರಗಳು ಆರಂಭವಾಗಿವೆ.

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ಅಭ್ಯರ್ಥಿಯಾಗಿ ದೇವದುರ್ಗ ತಾಲ್ಲೂಕು ಇರಬಗೇರಾ ಗ್ರಾಮದ ವೆಂಕನಗೌಡ ಅವರು ನಾಮಪತ್ರ ಸಲ್ಲಿಸಿದರು. ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್‌. ಭೇರಿ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೈ.ನರಸಪ್ಪ, ಶಿವಪ್ಪ ಬಲ್ಲಿದವ್‌ ಹಾಗೂ ಹಣಮಂತಪ್ಪ ಆತ್ಕೂರ್‌ ಅವರು ಜೊತೆಯಲ್ಲಿದ್ದರು.

ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ –ಕಮ್ಯುನಿಸ್ಟ್‌ (ಎಸ್‌ಯುಸಿಐ–ಸಿ) ಪಕ್ಷದ ಅಭ್ಯರ್ಥಿಯಾಗಿ ಕೆ. ಸೋಮಶೇಖರ್‌ ಯಾದಗಿರಿ ಅವರು ಎರಡನೇ ಸಲ ನಾಮಪತ್ರ ಸಲ್ಲಿಸಿದರು. ಪಕ್ಷದ ಮುಖಂಡರಾದ ಎನ್.ಎಸ್‌. ವಿರೇಶ, ಶರಣಪ್ಪ ಉದ್ಭಾಳ, ಮಹೇಶ ಚಿಕಲಪರ್ವಿ ಜೊತೆಯಲ್ಲಿದ್ದರು.

ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ–ಮಾರ್ಕ್ಸ್‌, ಲೆನಿನ್‌ (ಸಿಪಿಐ–ಎಂಎಲ್‌) ಅಭ್ಯರ್ಥಿಯಾಗಿ ಅಮರೇಶ ನಾಯಕ ನಾಮಪತ್ರ ಸಲ್ಲಿಸಿದರು. ಬೆಂಬಲಿಗರಾಗಿ ಚಿನ್ನಪ್ಪ ಕೊಟ್ರಕ್ಕಿ, ಜಿ.ಅಮರೇಶ, ನಾಗಲಿಂಗಸ್ವಾಮಿ, ವಿರೂಪಾಕ್ಷಿಗೌಡ ಇದ್ದರು.

ಏಳು ಅಭ್ಯರ್ಥಿಗಳು
ಬುಧವಾರ ನಾಮಪತ್ರ ಸಲ್ಲಿಸಿರುವ ‍ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ನಿರಂಜನ ನಾಯಕ ಸೇರಿ ಒಟ್ಟು ಏಳು ಅಭ್ಯರ್ಥಿಗಳು ರಾಯಚೂರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಉಮೇದಾರಿಕೆ ಸಲ್ಲಿಸಿದ್ದಾರೆ. ನಾಮಪತ್ರಗಳ ಪರಿಶೀಲನೆಯು ಏಪ್ರಿಲ್‌ 5 ರಿಂದ ಆರಂಭವಾಗಲಿದ್ದು, ನಾಮಪತ್ರ ಹಿಂಪಡೆಯಲು ಏಪ್ರಿಲ್‌ 8 ಕೊನೆಯ ದಿನ.

ಪೊಲೀಸ್‌ ಬಂದೋಬಸ್ತ್‌
ನಾಮಪತ್ರ ಸಲ್ಲಿಕೆಯ ಕೊನೆಯ ದಿನ ನಗರದಾದ್ಯಂತ ಪೊಲೀಸರು ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು. ರಾಜಕೀಯ ಪಕ್ಷಗಳ ಕಚೇರಿಗಳ ಸುತ್ತಮುತ್ತ, ಕಾರ್ಯಕರ್ತರ ಸಭೆಗಳನ್ನು ಆಯೋಜಿಸಿರುವ ಸ್ಥಳಗಳಲ್ಲಿ ಹಾಗೂ ಮೆರವಣಿಗೆಯುದ್ದಕ್ಕೂ ಪೊಲೀಸರು ಇದ್ದರು.

ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ನೂರು ಮೀಟರ್‌ ದೂರದಿಂದ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ನಾಮಪತ್ರ ಸಲ್ಲಿಸಲು ಬರುವ ಅಭ್ಯರ್ಥಿ ಹಾಗೂ ಜೊತೆಯಲ್ಲಿ ನಾಲ್ಕು ಜನ ಬೆಂಬಲಿಗರಿಗೆ ಮಾತ್ರ ಪೊಲೀಸರು ಪ್ರವೇಶ ನೀಡಿದರು. ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್‌ ಅಧಿಕಾರಿಗಳು ಮುನ್ನಚ್ಚರಿಕೆ ವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !