ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿ, ಹಿಂದುತ್ವ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗಿಲ್ಲ’

ಕವಿತಾಳ: ನಮೋ ಭಾರತ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ
Published 18 ಜನವರಿ 2024, 13:52 IST
Last Updated 18 ಜನವರಿ 2024, 13:52 IST
ಅಕ್ಷರ ಗಾತ್ರ

ಸಿರವಾರ: ‘ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜಕಾರಣಿ ಹೇಗಿರಬೇಕು ಎನ್ನುವುದಕ್ಕೆ ಮೇಲ್ಪಂಕ್ತಿ ಹಾಕಿದ್ದಾರೆ’ ಎಂದು ನಮೋ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ನಮೋ ಬ್ರಿಗೇಡ್‌ನಿಂದ ಬುಧವಾರ ಹಮ್ಮಿಕೊಂಡಿದ್ದ ‘ನಮೋ ಭಾರತ, ಈಗ ಶುರುವಾಗಿದೆ ಭಾರತದ ಕಾಲ' ಕಾರ್ಯಕ್ರಮದಲ್ಲಿ ಮಾತನಾಡಿದರು.

‘26 ಜನ ವಕೀಲರನ್ನು ನೇಮಿಸಿ ರಾಮಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರಸ್‌ನವರು ಇದೀಗ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಬಗ್ಗೆ ಅಪಸ್ವರ ಎತ್ತುವ ಮೂಲಕ ತಮ್ಮ ಹಿಂದೂ ವಿರೋಧಿ ನಿಲುವನ್ನು ಮತ್ತೊಮ್ಮೆ ಬಹಿರಂಗ ಪಡಿಸಿದ್ದಾರೆ. ಮೋದಿ ಮತ್ತು ಹಿಂದುತ್ವದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಅವರಿಗೆ ಇಲ್ಲ. ನಾಲ್ಕು ದಿನ ಪಾದಯಾತ್ರೆ ನಡೆಸಿ ಮಸಾಜ್ ಮಾಡಿಸಿಕೊಳ್ಳಲು ಥಾಯ್ಲೆಂಡಿಗೆ ಹೋಗುವವರಿಂದ ನೈತಿಕತೆಯ ಪಾಠ ಬೇಡ’ ಎಂದು  ಹರಿಹಾಯ್ದರು.

‘ಕಾಂಗ್ರೆಸ್ ಮುಖಂಡ ಚಿದಂಬರಂ, ದೇಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರು ವಿದೇಶದ ಕೋವಿಡ್‌–19 ಲಸಿಕೆ ಬಗ್ಗೆ ಒಲವು ತೋರಿದ್ದರು. ರಕ್ಷಣಾ ಮಾಫಿಯಾ, ಡ್ರಗ್ ಮಾಫಿಯಾ, ನಕಲಿ ನೋಟು ಮತ್ತಿತರ ಮಾಫಿಯಾಗಳು ಪ್ರಧಾನಿ ಮೋದಿಯನ್ನು ಸೋಲಿಸಲು ಒಂದಾಗಿವೆ. ದೇಶದ ಜನರಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಮೋದಿ ಗೆಲುವಿಗೆ ಜನ ಸಾಮಾನ್ಯರು ಪಣ ತೊಡಬೇಕು’ ಎಂದು ಹೇಳಿದರು.

‘ರಾಜ್ಯದಲ್ಲಿ ಬಿಟ್ಟಿ ಭಾಗ್ಯಗಳ ಜಾರಿಗಾಗಿ ದಲಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕ ಬಳಸಬೇಕಾದ ಹಣ ಬಳಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ. ರೈಲು, ವಿಮಾನಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವದಾಗಿ ಭರವಸೆ ನೀಡಿದರೂ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸುವ ತರುಣ ವರ್ಗವನ್ನು ಸೃಷ್ಟಿ ಮಾಡುವುದು ನಮ್ಮ ಉದ್ದೇಶ’ ಎಂದ ಅವರು, ಹೆದ್ದಾರಿ ನಿರ್ಮಾಣ ವಿಚಾರದಲ್ಲಿ ದೇಶ ಸಾಧಿಸುತ್ತಿರುವ ನಿರಂತರ ಪ್ರಗತಿ ಕುರಿತು ಮಾಹಿತಿ ನೀಡಿದರು.

ಜೆ.ಶಿವರಾಮರೆಡ್ಡಿ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ನಮೋ ಬ್ರಿಗೇಡ್ ಸಂಚಾಲಕ ಎಚ್.ವಿ.ಪವಾರ್, ತಾಲ್ಲೂಕು ಸಂಚಾಲಕ ಪ್ರಕಾಶ ರೆಡ್ಡಿ, ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್, ಜೆ.ಶರಣಪ್ಪಗೌಡ, ನರಸಿಂಹರಾವ್ ಕುಲಕರ್ಣಿ ಸೇರಿದಂತೆ ಮಹಿಳೆಯರು, ಯುವಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT