ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರಾಗುತ್ತಿದೆ ಸಿಂಧನೂರು ನಗರ

ಸಿಎಸ್‍ಎಸ್‍ಆರ್ ಫೌಂಡೇಶನ್ ಸಂಕಲ್ಪ: ದೂಳಿನಿಂದ ಮುಕ್ತವಾಗುವ ಸಾಧ್ಯತೆ
Last Updated 25 ಜುಲೈ 2020, 7:38 IST
ಅಕ್ಷರ ಗಾತ್ರ

ಸಿಂಧನೂರು:‘ಹಸಿರೇ ಉಸಿರು’ ಎನ್ನುವ ಅರಣ್ಯ ಇಲಾಖೆಯ ಘೋಷಣೆಯನ್ನು ಸಿಂಧನೂರಿನ ಸಿಎಸ್‍ಎಸ್‍ಆರ್ ಫೌಂಡೇಶನ್ ಸಾಕಾರಗೊಳಿಸುವ ಸಂಕಲ್ಪದೊಂದಿಗೆ ಸಾಧನೆಯ ಹಾದಿಯತ್ತ ಸಾಗಿದೆ.

ಸದಾ ದೂಳು, ಕೊಳಚೆಯಿಂದ ಕೂಡಿದ ಸಿಂಧನೂರ ನಗರವನ್ನುಹಸಿರುಮಯ ಮಾಡುವ ಮಹದಿಚ್ಛೆಯಿಟ್ಟುಕೊಂಡು ಕ್ರಿಯಾಶೀಲವಾಗಿದೆ.

ಸಿಎಸ್‍ಎಸ್‍ಆರ್ ಫೌಂಡೇಶನ್ ಸಂಸ್ಥಾಪಕ ಸಿ.ರಾಂಬಾಬು ಈಗಾಗಲೇ ಅರ್ಧಕ್ಕಿಂತ ಹೆಚ್ಚು ದಾರಿಯನ್ನು ಸವೆಸಿದ್ದಾರೆ. ಎರಡು ವರ್ಷಗಳ ಹಿಂದೆ ಸ್ವಾತಂತ್ರ್ಯೋತ್ಸವದ ದಿನದಂದು ನಗರದ ಗಂಗಾವತಿ ಮತ್ತು ರಾಯಚೂರು ಮುಖ್ಯರಸ್ತೆಯ ಎರಡೂ ಬದಿಗಳಲ್ಲಿ 12 ಅಡಿ ಬೆಳೆದ ‘ಸೆಲೋಫಾರ್ಮಾ’ ಗಿಡಗಳನ್ನು ನೆಟ್ಟಿದ್ದರು. ಈಗ ಅವು ಮೈ ತುಂಬಿಕೊಂಡು ನೆರಳು ನೀಡತೊಡಗಿವೆ. ನಗರದ ಗಂಗಾವತಿ, ರಾಯಚೂರು ಹಾಗೂ ಕುಷ್ಟಗಿ ಮುಖ್ಯರಸ್ತೆಗಳು ಗಿಡಗಳಿಂದ ಹಸಿರು ಸೂಸ ತೊಡಗಿವೆ.

ಈಗಾಗಲೇ ನಗರದಲ್ಲಿ 3 ಸಾವಿರ ಮರಗಳನ್ನು ನೆಟ್ಟಿದ್ದು ಇನ್ನೂ 2 ಸಾವಿರ ಗಿಡ ನೆಟ್ಟರೆ ಸಿಂಧನೂರು ಸಂಪೂರ್ಣ ಹಸಿರಾಗುತ್ತದೆ. ಪ್ರತಿ ಸೋಮವಾರ 100 ಗಿಡಗಳನ್ನು ನಾಟಿಸುವ ನಿರ್ಧಾರ ಕೈಗೊಂಡು ದುದ್ದುಪೂಡಿ ಸಂಸ್ಥೆಯ ಆರ್.ಸಿ.ಪಾಟೀಲ್ ಸಹಕಾರದೊಂದಿಗೆ ವಿವಿಧ ವಾರ್ಡ್‍ಗಳಲ್ಲಿ ವನಮಹೋತ್ಸವ ಮಾಡಲಾಗುತ್ತಿದೆ. ನಗರವನ್ನು ಹಸಿರೀಕರಣ ಮಾಡುವ ಮಹತ್ವದ ಕಾರ್ಯ ಪ್ರಾರಂಭದಲ್ಲಿ ಖಾಸಗಿ ಶಾಲಾ ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟವು ಸಹಕಾರ ನೀಡಿದ್ದನ್ನು ಸಿಎಸ್‍ಎಸ್‍ಆರ್ ಫೌಂಡೇಶನ್ ಸಂಸ್ಥಾಪಕ ರಾಂಬಾಬು ಸ್ಮರಿಸುತ್ತಾರೆ.

‘ಸಿಎಸ್‍ಎಸ್‍ಆರ್ ಫೌಂಡೇಶನ್‍ನಿಂದ ಸಮಾಜಕ್ಕೆ ಒಳಿತಾಗುವ ಕೆಲಸ ಮಾಡಲಾಗುವುದು. ಪ್ರತಿವರ್ಷ ಪಿಯುಸಿ ಉತ್ತೀರ್ಣರಾಗಿ ಸಿಇಟಿ ಮತ್ತು ನೀಟ್ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಪಡೆದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಉನ್ನತ ಅಧ್ಯಯನ ಪೂರ್ಣಗೊಳ್ಳುವ ವೆಚ್ಚವನ್ನು ಬರಿಸಲಾಗುತ್ತಿದೆ. ಇದರಂತೆ 7 ವರ್ಷದಲ್ಲಿ 42 ಸಾವಿರ ವಿದ್ಯಾರ್ಥಿಗಳಿಗೆ ₹30 ಲಕ್ಷ ಹಣ ಖರ್ಚು ಮಾಡಲಾಗಿದೆ. ಇದರಿಂದ ಬಡ ಕುಟುಂಬದ ಹಲವಾರು ವಿದ್ಯಾರ್ಥಿಗಳು ವೈದ್ಯರು, ಎಂಜನಿಯರ್, ಬ್ಯಾಂಕ್ ಅಧಿಕಾರಿಗಳಾಗಿದ್ದಾರೆ. ಅದರಂತೆ ಸಸಿ ನೆಟ್ಟು ಬೆಳೆಸುವ ಮತ್ತು ನಾಯಿ ಸಾಕುವ ಹವ್ಯಾಸ ಬಾಲ್ಯದಿಂದಲೇ ಬೆಳೆದು ಬಂದಿದೆ. ಅದೇ ಪ್ರಭಾವದಿಂದಲೇ ಸಸಿ ನೆಡುವ ಕಾರ್ಯ ಕೈಗೊಂಡಿದ್ದೇನೆ’ ಎಂದು ರಾಂಬಾಬು ತಿಳಿಸಿದರು.

‘20 ವರ್ಷಗಳ ಹಿಂದೆ ಹೊಸಪೇಟೆಯ ವಿವೇಕಾನಂದ ನಗರದಲ್ಲಿ ಎಲ್ಲ ರಸ್ತೆಗಳಿಗೆ ಗಿಡಗಳನ್ನು ನೆಡಲಾಗಿದ್ದು, ಈಗ ಅವು ಹೆಮ್ಮರಗಳಾಗಿ ಬೆಳೆದಿವೆ. ಈ ಬಗ್ಗೆ ಯಾವ ಫಲಾಪೇಕ್ಷೆ ಮತ್ತು ಪ್ರಚಾರವೂ ತಮಗೆ ಅಗತ್ಯವಿಲ್ಲ’ ಎಂದು ಹೇಳಿದರು.

‘ಪರಿಸರ ಪ್ರೇಮಿ ರಾಂಬಾಬು ಅವರ ಕೆಲಸಕ್ಕೆ ಸಿಂಧನೂರು ನಾಗರಿಕರು ಸಹ ಕೈಜೋಡಿಸಿದರೆ ಮುಂದೊಂದು ದಿನ ಸಿಂಧನೂರು ಬೆಂಗಳೂರಿನ ರಾಜಾಜಿನಗರ ರೀತಿ ಆಗುವುದರಲ್ಲಿ ಅನುಮಾನವಿಲ್ಲ’ ಎನ್ನುತ್ತಾರೆ ನಿವೃತ್ತ ಶಿಕ್ಷಣಾಧಿಕಾರಿ ಎಚ್.ಜಿ.ಹಂಪಣ್ಣ.

ವನಸಿರಿ ಫೌಂಡೇಶನ್ ಅಮರೇಗೌಡ ಮಲ್ಲಾಪುರ, ಖಾಸಗಿ ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಒಕ್ಕೂಟ, ಮಕ್ಕಳ ತಜ್ಞ ಡಾ.ಕೆ.ಶಿವರಾಜ, ನೇತ್ರ ತಜ್ಞ ಡಾ.ಚೆನ್ನನಗೌಡ ಪಾಟೀಲ್ ಮತ್ತಿತರ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT