ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿರಾಬಾದ್-ಮಹೆಬೂಬ್‍ನಗರ ರೈಲ್ವೆ ಯೋಜನೆ: ನನಸಾದ ಇಪ್ಪತ್ತಾರು ವರ್ಷದ ಕನಸು

Published 15 ಮಾರ್ಚ್ 2024, 5:48 IST
Last Updated 15 ಮಾರ್ಚ್ 2024, 5:48 IST
ಅಕ್ಷರ ಗಾತ್ರ

ಸಿಂಧನೂರು: ಮುನಿರಾಬಾದ್-ಮೆಹಬೂಬ್‍ನಗರ ಯೋಜನೆಗೆ ಚಾಲನೆ ದೊರೆತು 26 ವರ್ಷಗಳ ನಂತರ ಭತ್ತದ ಕಣಜ ಖ್ಯಾತಿಯ ಸಿಂಧನೂರು ತಾಲ್ಲೂಕಿನಲ್ಲಿ ಮಾ.15ರ ಶುಕ್ರವಾರದಿಂದ ರೈಲು ಸಂಚಾರ ಆರಂಭವಾಗಲಿದ್ದು, ಪ್ರಯಾಣಿಕರಲ್ಲಿ ಹರ್ಷ ಮತ್ತು ಸಂಭ್ರಮದ ವಾತಾವರಣ ಮೂಡಿದೆ.

ಈ ಯೋಜನೆ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲದೇ ಅಂತರರಾಜ್ಯದ ವಾಣಿಜ್ಯ ಕೇಂದ್ರಗಳನ್ನು ಬೆಸೆಯುವುದರಿಂದ ಬಹಳಷ್ಟು ಅನುಕೂಲವಾಗಲಿದೆ. ಈಗಾಗಲೇ ಗಂಗಾವತಿ, ಕಾರಟಗಿಯಿಂದ ಹುಬ್ಬಳ್ಳಿ, ಬೆಂಗಳೂರಿಗೆ ರೈಲು ಸಂಚಾರವಿದ್ದು, ಇನ್ಮುಂದೆ ಸಿಂಧನೂರಿನಿಂದ ಮಹಾನಗರಗಳಿಗೆ ರೈಲ್ವೆ ಸಂಪರ್ಕದ ಕೊಂಡಿ ಬೆಸೆದಂತಾಗಿದೆ ಎನ್ನುತ್ತಾರೆ ಎಪಿಎಂಸಿ ಗಂಜ್ ವರ್ತಕರ ಸಂಘದ ಅಧ್ಯಕ್ಷ ಮಲ್ಲನಗೌಡ ಕಾನಿಹಾಳ.

ಯೋಜನೆ ಸಾಗಿ ಬಂದ ಹಾದಿ: ವಾಣಿಜ್ಯ ಚಟುವಟಿಕೆಗೆ ಉತ್ತೇಜನ ನೀಡುವುದು ಸೇರಿದಂತೆ ಈ ಭಾಗದ ಪ್ರಯಾಣಿಕರಿಗೆ ರೈಲ್ವೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 1997-98ನೇ ಸಾಲಿನಲ್ಲಿ ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಕೇಂದ್ರ ಸರ್ಕಾರ ಈ ಯೋಜನೆಗೆ ಅಸ್ತು ನೀಡಿತ್ತು. ಪ್ರಧಾನಿ ದೇವೇಗೌಡ ಹಾಗೂ ಆಗಿನ ಕೊಪ್ಪಳ ಲೋಕಸಭಾ ಕ್ಷೇತ್ರದ ಜನತಾದಳದ ಎಂಪಿಯಾಗಿದ್ದ ಬಸವರಾಜ ರಾಯರೆಡ್ಡಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.

247 ಕಿ.ಮೀ ಅಂತರದ ಯೋಜನೆಗೆ ಆರಂಭದಲ್ಲಿ ₹1,723 ಕೋಟಿ ತೆಗೆದಿರಿಸಲಾಗಿತ್ತು. ತದನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಈ ಯೋಜನೆ ಅನುದಾನ ಕೊರತೆ, ಭೂಸ್ವಾಧೀನ, ರಾಜಕೀಯ ಇಚ್ಛಾಸಕ್ತಿಯ ಕಾರಣದಿಂದಾಗಿ ಆಮೆಗತಿಯಲ್ಲಿ ಸಾಗಿತ್ತು.

ಹಳಿಗೆ ಮರಳಿದ ರೈಲು: ಪ್ರಾರಂಭದಲ್ಲಿ ₹1723 ಕೋಟಿ ಅಂದಾಜು ವೆಚ್ಚದೊಂದಿಗೆ ಆರಂಭಗೊಂಡ ಕಾಮಗಾರಿ ತದನಂತರ ವೆಚ್ಚದ ಮಿತಿ ಹೆಚ್ಚಳಗೊಂಡಿದ್ದರಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ವರ್ಷದ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಒದಗಿಸದ ಕಾರಣ ನಿಧಾನಗತಿಯಲ್ಲಿ ಸಾಗಿತ್ತು.

ರಾಯರೆಡ್ಡಿ ಅವರ ನಂತರ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಕಾಂಗ್ರೆಸ್‍ನ ಎಚ್.ಜಿ.ರಾಮುಲು, ಕೆ.ವಿರೂಪಾಕ್ಷಪ್ಪ ಅವರು ಸಂಸದಾಗಿದ್ದ ಅವಧಿಯಲ್ಲಿ ರೈಲ್ವೆ ಮಾರ್ಗ ಪ್ರಾರಂಭವಾಗಿರಲಿಲ್ಲ. ಸರ್ವೆ ಕಾರ್ಯಕ್ಕೆ ಮಾತ್ರ ಚಾಲನೆ ಸಿಕ್ಕಿತ್ತು. ತದನಂತರ ಸಂಸದರಾಗಿದ್ದ ಶಿವರಾಮೇಗೌಡರ ಅವಧಿಯಲ್ಲಿ ರೈಲ್ವೆ ಮಾರ್ಗ ಕುಂಟುತ್ತಾ ಸಾಗಿತ್ತು. ಆದರೆ, ಸಂಗಣ್ಣ ಕರಡಿ ಅವರು ಎರಡು ಬಾರಿ ಸಂಸದರಾಗಿ ಈ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ರೈಲ್ವೆ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದಲ್ಲದೇ, ಕಾಮಗಾರಿಯು ಚುರುಕಿನಿಂದ ನಡೆದಿತ್ತು. ಹೀಗಾಗಿ ಕೊನೆಗೆ ಎರಡೂವರೆ ದಶಕಗಳ ನಂತರ ರೈಲ್ವೆ ಯೋಜನೆ ಹಳಿಗೆ ಮರಳಿದೆ ಎಂದೇ ಹೇಳಬಹುದು.

ವಾಣಿಜ್ಯ ಚಟುವಟಿಕೆಗಳಿಗೆ ಪೂರಕ: ರಾಯಚೂರು ಜಿಲ್ಲೆಯಲ್ಲೇ ಸಿಂಧನೂರು ನಗರ ಪ್ರಮುಖ ವ್ಯಾಪಾರ-ವಹಿವಾಟಿನ ಕೇಂದ್ರವಾಗಿದ್ದು, ರೈಲ್ವೆ ಸಂಚಾರದಿಂದ ಇನ್ನಷ್ಟು ವ್ಯಾಪಾರ ಚಟುವಟಿಕೆಗಳಿಗೆ ಅನುಕೂಲವಾಗಲಿದೆ, ಭತ್ತ ಸೇರಿದಂತೆ ಮನ್ನಿತರೆ ಕೃಷಿ ಉತ್ಪನ್ನಗಳನ್ನು ಬೇರೆಡೆ ಸಾಗಿಸುವುದು ಸೇರಿದಂತೆ ಪ್ರಯಾಣಿಕರು ಉದ್ದೇಶಿತ ಸ್ಥಳಗಳಿಗೆ ಹೋಗಿ-ಬರಲು ತುಂಬಾ ಸಹಾಯವಾಗಲಿದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಸಿಂಧನೂರಿನಿಂದ ರೈಲು ಸಂಚಾರ ಉದ್ಘಾಟನೆ ಇಂದು

ನೈಋತ್ಯ ರೈಲ್ವೆ ಆಡಳಿತ ವ್ಯಾಪ್ತಿಯಲ್ಲಿ ಬರುವ ಸಿಂಧನೂರು ರೈಲ್ವೆ ಸಂಚಾರಕ್ಕೆ ಮಾ.15 ರಂದು 10.30 ಗಂಟೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆನ್‍ಲೈನ್ ಮೂಲಕ ಹಸಿರು ನಿಶಾನೆ ತೋರಿಸಲಿದ್ದಾರೆ.

ರೈಲು ಸಂಖ್ಯೆ 16545 ಯಶವಂತಪುರ-ಕಾರಟಗಿ ಎಕ್ಸ್‍ಪ್ರೆಸ್ ಸಿಂಧನೂರುವರೆಗೆ ವಿಸ್ತರಣೆಯ ಉದ್ಘಾಟನಾ ಸಮಾರಂಭ ಸಿಂಧನೂರಿನ ನೂತನ ರೈಲ್ವೆ ಸ್ಟೇಷನ್ ಬಳಿ ನಡೆಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜ್, ಶಾಸಕ ಹಂಪನಗೌಡ ಬಾದರ್ಲಿ, ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಷಿ, ಡಾ.ಚಂದ್ರಶೇಖರ ಪಾಟೀಲ್, ಶರಣಗೌಡ ಪಾಟೀಲ್ ಬಯ್ಯಾಪುರ ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ತಿಳಿಸಿದ್ದಾರೆ.

ಸಿಂಧನೂರಿನ ರೈಲ್ವೆ ನಿಲ್ದಾಣಕ್ಕೆ ಸಿಆರ್‌ಎಸ್ ತಂಡ ಇತ್ತೀಚಿಗೆ ಭೇಟಿ ನೀಡಿ 150 ಕಿ.ಮೀ ವೇಗದಲ್ಲಿ ಕಾರಟಗಿವರೆಗೆ ರೈಲು ಸಂಚಾರ ನಡೆಸಿ ಪರೀಕ್ಷಿಸಿದ ದೃಶ್ಯ
ಸಿಂಧನೂರಿನ ರೈಲ್ವೆ ನಿಲ್ದಾಣಕ್ಕೆ ಸಿಆರ್‌ಎಸ್ ತಂಡ ಇತ್ತೀಚಿಗೆ ಭೇಟಿ ನೀಡಿ 150 ಕಿ.ಮೀ ವೇಗದಲ್ಲಿ ಕಾರಟಗಿವರೆಗೆ ರೈಲು ಸಂಚಾರ ನಡೆಸಿ ಪರೀಕ್ಷಿಸಿದ ದೃಶ್ಯ
2015ರಿಂದ ಕೇಂದ್ರ ಸರ್ಕಾರದ ಗಮನ ಸೆಳೆದು ಹಣ ಬಿಡುಗಡೆ ಮಾಡಿದ್ದರಿಂದ ಸಿಂಧನೂರುವರೆಗೆ ರೈಲ್ವೆ ಮಾರ್ಗ ಪೂರ್ಣಗೊಂಡಿದೆ. ನಿಗದಿತ ಸಮಯದಲ್ಲಿ ಯೋಜನೆ ಪೂರ್ಣಗೊಳ್ಳದಿರುವುದಕ್ಕೆ ವಿಷಾದವಿದೆ.
-ಸಂಗಣ್ಣ ಕರಡಿ, ಸಂಸದ ಕೊಪ್ಪಳ
ಸುಲಭ ದರದಲ್ಲಿ ಪ್ರಯಾಣ ಸಿಗುವದಲ್ಲದೇ, ಜನರು ಹುಬ್ಬಳ್ಳಿ, ಬೆಂಗಳೂರಿಗೆ ತೆರಳುವುದಕ್ಕೆ ಅನುಕೂಲವಾಗುತ್ತದೆ. ಕೇವಲ ₹70ದಲ್ಲಿ ಹುಬ್ಬಳ್ಳಿ ತಲುಪಬಹುದಾಗಿದೆ.
-ಗೌತಮ್ ಮೆಹ್ತಾ, ವ್ಯಾಪಾರಿ
ಶಂಕುಸ್ಥಾಪನೆಯಾಗಿ ಎರಡುವರೆ ದಶಕಗಳ ನಂತರ ಮುನಿರಾಬಾದ್‌–ಮೆಹಬೂಬ್‍ನಗರ ರೈಲ್ವೆ ಯೋಜನೆ ಪೂರ್ಣಗೊಂಡಿದೆ. ಇದರಿಂದ ಸಿಂಧನೂರು, ಲಿಂಗಸುಗೂರು, ಕುಷ್ಟಗಿ, ಮಸ್ಕಿ, ಮಾನ್ವಿ ತಾಲ್ಲೂಕಿನ ನಾಗರಿಕರಿಗೆ ಅತ್ಯಂತ ಉಪಯುಕ್ತವಾಗಲಿದ
-ವೀರಭದ್ರಪ್ಪ ಕುರಕುಂದಿ, ಜಿಲ್ಲಾ ಘಟಕದ ಅಧ್ಯಕ್ಷ ಬಸವಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT