ಮಂಗಳವಾರ, ಸೆಪ್ಟೆಂಬರ್ 22, 2020
22 °C
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯ ಹೊಸ ಪ್ರಯೋಗ

ಹೊಸ ಪ್ರಯೋಗ: ವಿದ್ಯಾರ್ಥಿ ವೇತನ ಅರ್ಜಿ ಭರ್ತಿಗೆ ಸಂಚಾರಿ ವಾಹನ

ಬಸವರಾಜ ಭೋಗಾವತಿ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ (ರಾಯಚೂರು): ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ನೆರವಾಗಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಕಚೇರಿಯ ಸಿಬ್ಬಂದಿ ಸಂಚಾರಿ ವಾಹನದ ಮೂಲಕ ಆರಂಭಿಸಿರುವ ಅರ್ಜಿ ಭರ್ತಿ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ.

ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರ ಮೆಟ್ರಿಕ್‌ ನಂತರದ ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ ನೂತನ ಎಸ್‌ಎಸ್‌ಪಿ ಆನ್‌ಲೈನ್‌ ಪೋರ್ಟಲ್‌ ವ್ಯವಸ್ಥೆ ಜಾರಿಗೊಳಿಸಿದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗಾಗಿ ಖಾಸಗಿ ಕಂಪ್ಯೂಟರ್‌ ಸೇವಾ ಕೇಂದ್ರಗಳ ಮೊರೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಹೊಸ ಉಚಿತ ವ್ಯವಸ್ಥೆಯಿಂದ ಅನುಕೂಲವಾಗಿದೆ. ಪ್ರತಿ ಅರ್ಜಿ ಸಲ್ಲಿಕೆಗೆ ₹ 50 ರಿಂದ ₹ 100 ಖರ್ಚು ಮಾಡುವುದು ತಪ್ಪಿಸಿದಂತಾಗಿದೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಕಚೇರಿಯ ಸಿಬ್ಬಂದಿ ರಾಜ್ಯದ‌ಲ್ಲೇ ವಿನೂತನ ಪ್ರಯತ್ನವಾಗಿ ಅರ್ಜಿಗಳ ಭರ್ತಿಗೆ ಖುದ್ದಾಗಿ ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಂದ ದಾಖಲಾತಿಗಳನ್ನು ಪಡೆದು ಸ್ಥಳದಲ್ಲಿಯೇ ಉಚಿತವಾಗಿ ಅರ್ಜಿಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದಾರೆ.


ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ಅರ್ಜಿ ಭರ್ತಿಯ ಸಂಚಾರಿ ವಾಹನ

ಸ್ಥಳೀಯ ಶಾಸಕ ರಾಜಾ ವೆಂಕಟಪ್ಪ ನಾಯಕ ನ.25ರಂದು ಮಾನ್ವಿ ಪಟ್ಟಣದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದರು. ಸಂಚಾರಿ ವಾಹನದಲ್ಲಿ ಲ್ಯಾಪ್‌ಟಾಪ್‌ ಕಂಪ್ಯೂಟರ್‌, ಇಂಟರ್‌ನೆಟ್‌ ವ್ಯವಸ್ಥೆ ಸೇರಿ ಅಗತ್ಯ ಸಾಮಾಗ್ರಿಗಳ ಸಮೇತ ಕಾಲೇಜುಗಳಿಗೆ ಭೇಟಿ ನೀಡುವ ಸಿಬ್ಬಂದಿ ಸ್ಥಳದಲ್ಲಿಯೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ.

ವಿದ್ಯುತ್‌ ಹಾಗೂ ಸರ್ವರ್‌ ಸಮಸ್ಯೆ, ದಾಖಲಾತಿಗಳ ಮಾಹಿತಿ ಕೊರತೆಯಿಂದ ನಿಗದಿತ ಸಮಯಕ್ಕೆ ಅರ್ಜಿ ಸಲ್ಲಿಸದೆ ವಂಚಿತರಾಗುತ್ತಿದ್ದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಹೊಸ ವ್ಯವಸ್ಥೆಯಿಂದ ಅನುಕೂಲವಾಗಿದೆ.

ಮಾನ್ವಿ ಪಟ್ಟಣ, ಸಿರವಾರ, ಕವಿತಾಳದ 10ಕ್ಕೂ ಅಧಿಕ ಕಾಲೇಜುಗಳಿಗೆ ತೆರಳಿರುವ ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ಸಿಬ್ಬಂದಿ ಈವರೆಗೆ ಪರಿಶಿಷ್ಟ ವರ್ಗಕ್ಕೆ ಸೇರಿದ 650ಕ್ಕೂ ಅಧಿಕ ವಿದ್ಯಾರ್ಥಿಗಳ ಅರ್ಜಿ ಭರ್ತಿ ಮಾಡಿದ್ದಾರೆ.

ಸಂಚಾರಿ ವಾಹನದ ಭೇಟಿಯ ವಿವರದ ಕುರಿತು ಕಾಲೇಜುಗಳಿಗೆ ಮುಂಚಿತವಾಗಿ ಮಾಹಿತಿ ನೀಡುವ ಇಲಾಖೆಯ ಸಿಬ್ಬಂದಿ ನಿಗದಿತ ದಿನಾಂಕದಂದು ತೆರಳಿ ವಿದ್ಯಾರ್ಥಿ ವೇತನದ ಅರ್ಜಿಗಳನ್ನು ಭರ್ತಿ ಮಾಡುತ್ತಿದ್ದಾರೆ.

‘ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳ ಜತೆಗೆ ಇತರೇ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಕೂಡ ಎಸ್‌ಎಸ್‌ಪಿ ಪೋರ್ಟಲ್‌ ಮೂಲಕ ವಿದ್ಯಾರ್ಥಿ ವೇತನ ಅರ್ಜಿ ಭರ್ತಿಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಕೆ ಅವಧಿಯನ್ನು ಡಿ.31ರವರೆಗೆ ವಿಸ್ತರಿಸಲಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅರ್ಜಿ ಸಲ್ಲಿಕೆ ಪ್ರಮಾಣ ಹೆಚ್ಚಾಗಲಿದೆ’ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು