ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶಯಾಸ್ಪದ 10 ಜೈವಿಕ ಸಿಂಪರಣೆಗಳು ಪರೀಕ್ಷೆಗೆ: ಅನೂಪ್‌

Last Updated 29 ಆಗಸ್ಟ್ 2019, 10:38 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ವಿವಿಧೆಡೆ ಬೆಳೆ ಸಿಂಪರಣೆ ಔಷಧಿಗಳನ್ನು ಮಾರಾಟ ಮಾಡುವ 54 ಮಳಿಗೆಗಳನ್ನು 35 ಪರಿವೀಕ್ಷಕರ ತಂಡವು ಎರಡು ದಿನಗಳಿಂದ ಪರಿಶೀಲಿಸಿ ಸಂಶಯಾಸ್ಪದ 84 ನಮೂನೆಗಳನ್ನು ಸಂಗ್ರಹಿಸಿದೆ. ಅದರಲ್ಲಿ 10 ಜೈವಿಕ ಸಿಂಪರಣೆಗಳ ನಮೂನೆಗಳನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆಯ ಜಾಗೃತ ಕೋಶದ ನಿರ್ದೇಶಕ ಅನೂಪ್‌ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಒದಗಿಸುವ ಬೀಜಗಳು, ಗೊಬ್ಬರಗಳು ಹಾಗೂ ಸಿಂಪರಣೆಗಳ ಗುಣಮಟ್ಟ ಪರಿಶೀಲಿಸುವ ಕೆಲಸವನ್ನು ಕೃಷಿ ಇಲಾಖೆಯ ಜಾಗೃತ ಕೋಶವು ಪ್ರತಿವರ್ಷ ಮಾಡುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ‘ಬಯೋ’ (ಜೈವಿಕ) ಸಿಂಪರಣೆ ಹೆಸರಿನಲ್ಲಿ ನಕಲಿ ಪೀಡೆನಾಶಕಗಳು ಮಾರಾಟವಾಗುತ್ತಿರುವ ದೂರುಗಳು ಬಂದಿವೆ. ಇದೇ ಮೊದಲ ಬಾರಿ ಅತಿಹೆಚ್ಚಿನ ಪ್ರಮಾಣದ ನಮೂನೆಗಳನ್ನು ಸಂಗ್ರಹಿಸಲಾಗಿದೆ. ಜೈವಿಕ ಸಿಂಪರಣೆಯಲ್ಲಿ ಕ್ರಿಮಿನಾಶಕ ಕಂಡುಬಂದರೆ, ಮಾರಾಟ ಮಳಿಗೆದಾರರು ಮತ್ತು ಉತ್ಪಾದಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಂಶಯಾಸ್ಪದ ಸಿಂಪರಣೆಗಳನ್ನು ಮಾರಾಟ ಮಾಡದಂತೆ ಮಳಿಗೆದಾರರಿಗೆ ಸೂಚಿಸಲಾಗಿದೆ. ಪ್ರಯೋಗಾಲಯ ವರದಿ ಬರುವರೆಗೂ 1,576 ಲೀಟರ್‌ ಸಿಂಪರಣೆ ಮಾರಾಟವನ್ನು ತಡೆಲಾಗಿದೆ. ಸಿಂಧನೂರಿನಲ್ಲಿ ಕೃಷಿ ಸಿಂಪರಣೆ ಮಾರಾಟಗಾರರ ಸಭೆ ಆಯೋಜಿಸಲಾಗಿತ್ತು. ಯಾವುದಾದರೂ ಸಂಶಯಾಸ್ಪದ ಸಿಂಪರಣೆ ಕಂಡುಬಂದರೆ, ಕೂಡಲೇ ಅಧಿಕಾರಿಗಳ ಗಮನಕ್ಕೆ ತರುವಂತೆ ಕೋರಲಾಗಿದೆ. ಉತ್ಪಾದಕರಿಗೂ ಸಹ ಸೂಚನೆಕೊಟ್ಟು, ಪರವಾನಿಗೆ ಇಲ್ಲದವರಿಗೆ ಗೊಬ್ಬರ ಹಾಗೂ ಸಿಂಪರಣೆಗಳನ್ನು ಮಾರಾಟಕ್ಕೆ ಕೊಡಬಾರದು ಎಂದು ಕೇಳಿಕೊಂಡಿದ್ದೇವೆ ಎಂದರು.

ಇಲಾಖೆಯು ದೃಢೀಕರಿಸಿ ನೀಡಿದ ಪಟ್ಟಿಯಲ್ಲಿರುವ ಬೀಜ, ಗೊಬ್ಬರ ಹಾಗೂ ಸಿಂಪರಣೆಗಳನ್ನು ಮಾತ್ರ ಮಾರಾಟಕ್ಕೆ ಇಡುವಂತೆ ಮಳಿಗೆದಾರರಿಗೆ ತಿಳಿಸಲಾಗಿದೆ. ಆದರೆ, ಜೈವಿಕ ಸಿಂಪರಣೆ ಎಂದು ಹೇಳಿಕೊಳ್ಳುವ ಉತ್ಪನ್ನಗಳಿಗೆ ಇಲಾಖೆಯು ಪರವಾನಿಗೆ ನೀಡುವುದಿಲ್ಲ. ಇಂಥ ಜೈವಿಕ ಸಿಂಪರಣೆಗಳು ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಅದರಲ್ಲಿ ಕ್ರಿಮಿನಾಶಕ ಬೆರೆಸಿದರೆ ಮಾತ್ರ ಕಾನೂನು ಅನ್ವಯಿಸುತ್ತದೆ. ಹಿಂಗಾರಿ ಹಂಗಾಮು ಆರಂಭವಾಗುವ ವೇಳೆ ಮತ್ತೊಮ್ಮೆ ಮಳಿಗೆಗಳಿಗೆ ಭೇಟಿ ನೀಡಿ, ಬೀಜ, ಗೊಬ್ಬರ ಹಾಗೂ ಸಿಂಪರಣೆಗಳ ಗುಣಮಟ್ಟ ಪರಿಶೀಲಿಸಲಾಗುವುದು ಎಂದು ಹೇಳಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶರಾದ ಡಾ.ಚೇತನಾ ಪಾಟೀಲ, ಶಿವನಗೌಡ ಎಸ್‌.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT