ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಖಿರಾತ್‌ಗೆ ರಂಜಾನ್‌ದಲ್ಲಿ ವಿಶೇಷ ಮಾನ್ಯತೆ

ತಾಲ್ಲೂಕಿನಾದ್ಯಂತ ರಂಜಾನ್‌ ಆಚರಣೆಯ ಸಂಭ್ರಮ
ಅಕ್ಷರ ಗಾತ್ರ

ಲಿಂಗಸುಗೂರು: ಇಸ್ಮಾಂನ ಪವಿತ್ರ ಕುರಾನ ಪ್ರಕಾರ ವರ್ಷದ ಒಂದು ತಿಂಗಳು ರಂಜಾನ್‌ ಉಪವಾಸ ವೃತ ಆಚರಿಸುವುದು ಕಡ್ಡಾಯ. ಈ ಸಂದರ್ಭದಲ್ಲಿ ತಾಖಿರಾತ್‌ (ಐದು ಜಾಗರಣೆ) ಮೂಲಕ ಕುರಾನ್‌ ಮತ್ತು ಧರ್ಮ ಜಾಗೃತಿ ಮೂಡಿಸುವುದಕ್ಕೆ ವಿಶೇಷ ಮಾನ್ಯತೆ ನೀಡಲಾಗುತ್ತದೆ.

ದೇವರು ಒಬ್ಬನಿದ್ದಾನೆ, ನಮಾಜ, ಜಖಾತ(ದಾನ), ಉಪವಾಸ(ರಂಜಾನ್‌), ಹಜ್‌ಯಾತ್ರೆ ಮುಸ್ಲಿಂ ಧರ್ಮದ ಭದ್ರ ಬುನಾದಿಗಳು ಎಂದು ಹೇಳಲಾಗುತ್ತದೆ. ಪ್ರತಿಯೋರ್ವ ಮುಸ್ಲಿಂರು ಈ ಐದು ಆಚರಣೆಗಳನ್ನು ತಮ್ಮ ಜೀವಿತ ಅವಧಿಯಲ್ಲಿ ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಈ ಪೈಕಿ ರಂಜಾನ್‌ ಒಂದು ತಿಂಗಳು ಉಪವಾಸ ಆಚರಣೆ ಮಾಡಲಾಗುತ್ತದೆ.

ರಂಜಾನ್‌ ಆಚರಣೆ ಸಂದರ್ಭದಲ್ಲಿ ಸೂರ್ಯೋದಯ ಮುಂಚೆ ಮತ್ತು ಸೂರ್ಯೋದಯ ನಂತರದಲ್ಲಿಯೆ ಆಹಾರ ಸೇವನೆ ಮಾಡಬೇಕು. ಹಗಲು ವೇಳೆ ಹನಿ ನೀರು ಸ್ವೀಕರಿಸುವಂತಿಲ್ಲ. ಈ ಸಂದರ್ಭದಲ್ಲಿ ಐದು ಹೊತ್ತು ನಮಾಜ ಮಾಡುವುದು ಕಡ್ಡಾಯಗೊಳಿಸಲಾಗಿದೆ. ಈ ಪೈಕಿ ರಾತ್ರಿ 8–30ರ ಸುಮಾರಿಗೆ ತರಾಬೆ(ಕುರಾನ) ಪಠಣ 20ಹಂತದಲ್ಲಿ (ಬೀಸ್‌ ರಕಾತ್‌) ಮೂಲಕ ಹೇಳಿಕೊಡುವುದು ಮತ್ತೊಂದು ವಿಶೇಷ.

ರಂಜಾನ್‌ ಆಚರಣೆಯ ಒಂದು ತಿಂಗಳ ಅವಧಿಯಲ್ಲಿ ಒಟ್ಟು ಐದು ತಾಖಿರಾತ್‌ (ಜಾಗರಣೆ) ಬರುತ್ತವೆ. ಈ ಸಂದರ್ಭದಲ್ಲಿ ಬೇರೆ ಕಡೆಯ ಧರ್ಮ ಗುರುಗಳನ್ನು ಆಹ್ವಾನಿಸಿ ಧರ್ಮದ ಕುರಿತು ಉಪನ್ಯಾಸ ನಡೆಸುವುದು ವಾಡಿಕೆ. ರೋಜ ಬಿಡುವಾಗ ಮೊಹ್ಮದ ಪೈಗಂಬರರ ಸುನ್ನತ ತರಿಖಾ ಪ್ರಕಾರ ಖರ್ಜುರ ಸೇವನೆ ಮಾಡುವುದು ಕಡ್ಡಾಯ ಆಗಿದ್ದರಿಂದ ಸಾಮಾನ್ಯವಾಗಿ ಖರ್ಜೂರ ಬಳಸಲಾಗುತ್ತದೆ.

ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ 12 ಮೀಸಿದಿಗಳಿವೆ. ತಾಲ್ಲೂಕಿನಲ್ಲಿ 90ಕ್ಕೂ ಹೆಚ್ಚು ಮಸೀದಿಗಳಿದ್ದು ನಿತ್ಯ ಮಸೀದಿಗಳಲ್ಲಿ ನಮಾಜ ಮಾಡಲಾಗುತ್ತದೆ. ರಂಜಾನ್‌ ಕೊನೆಯ ದಿನ ಆಯಾ ಗ್ರಾಮಗಳ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಬಾಂಧವರು ತಮ್ಮ ದುಡಿಮೆಯ ಶೇ 2.5ರಷ್ಟು ದಾನ ಮಾಡುವುದು ಕಡ್ಡಾಯವಾಗಿದೆ ಎಂಬುದು ಧರ್ಮಿಯರ ಅಂಬೋಣ.

ಪ್ರತಿಯೊಂದ ಮೀಸಿದ ಅಕ್ಕಪಕ್ಕದಲ್ಲಿ ಹಣ್ಣು ಹಂಪಲು ಅಂಗಡಿಗಳು, ಹಲಿಮಾ ವ್ಯಾಪಾರ, ಚಹಾ ಮಾರಾಟ ಬಹುತೇಕ ಕಡಿಮೆ ದರದಲ್ಲಿ ಮಾಡುತ್ತಿರುವುದು ಎಲ್ಲೆಡೆ ಕಾಣಸಿಗುತ್ತದೆ. ರೋಜ ಇದ್ದವರು ಹಲಿಮಾ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ ಎಂಬ ನಂಬಿಕೆ. ವಿವಿಧ ಭಾಗಗಳಿಂದ ಹಣ್ಣು ಹಂಪಲು ಮಾರುಕಟ್ಟೆಗೆ ಬಂದಿದ್ದು ಸ್ವಲ್ಪ ಬೆಲೆ ಏರಿಕೆ ಬಿಸಿ ತಟ್ಟಿದೆ.

ರಂಜಾನ್‌ ಕೊನೆಯ ಹಂತಕ್ಕೆ ಬಂದಿರುವ ಮುಸ್ಲಿಂ ಬಾಂಧವರು ಕುಟುಂಬಸ್ಥರಿಗೆ ಹೊಸ ಬಟ್ಟೆ ಖರೀದಿ, ಮಹಿಳೆಯರು ಮೆಹಂದಿ, ಬಳೆ ಹಾಕಿಸಿಕೊಳ್ಳುವ ಸಂಭ್ರಮದಲ್ಲಿದ್ದಾರೆ. ಮನೆಗಳನ್ನು ಧೂಳಿನಿಂದ ಮುಕ್ತಿ ನೀಡುತ್ತಿರುವ ಚಿತ್ರಣ ಸಾಮಾನ್ಯವಾಗಿದೆ. ಮಸೀದಿಗಳು ವಿದ್ಯುತ್‌ ದ್ವೀಪಗಳಿಂದ ಅಲಂಕಾರಗೊಂಡಿದ್ದರೆ ಈದ್ಗಾ ಮೈದಾನಗಳಲ್ಲಿ ಪೂರ್ವಭಾವಿ ಸಿದ್ಧತೆ ನಡೆದಿವೆ.

ಹೈದರಬಾದ್‌ ಹಲೀಮ್‌ಗೆ ಭಾರಿ ಬೇಡಿಕೆ
ಹಲೀಮ್‌ ಮಾಡುವ 5–6ತಾಸು ಮುಂಚೆ ನುಚ್ಚುಗೋಧಿ, ಸಾಬುದಾನಿ ನೆನೆ ಹಾಕಬೇಕು. ಬೋನಲೆಸ್‌ ಮಟನ್‌ ಜೊತೆ ತೊಗರಿ ಬೇಳೆ, ಕಡಲೆ ಬೇಳೆ, ಶುಂಠಿ, ಬೆಳ್ಳೊಳ್ಳಿ ಪೇಸ್ಟ್‌, ಉಪ್ಪು, ಖಾರದಪುಡಿ, ಗೋಡಂಬಿ, ಕಾಳು ಮೆಣಸು, ಗರಂ ಮಸಾಲ ಪುಡಿ, ಅರಿಶಿಣ, ಪದಿನಾ, ಈರುಳ್ಳಿ, ಕೋತಂಬರಿ ಸೊಪ್ಪು ಹದಕ್ಕೆ ತಕ್ಕಷ್ಟು ಹಾಕಿ ಕುದಿಸಿ ಕುಟ್ಟಿ ಪುಡಿ ಮಾಡಲಾಗುವುದು.

ಕುದಿಯುವ ನೀರಿನಲ್ಲಿ ಹದಕ್ಕೆ ತಕ್ಕಷ್ಟು ಎಣ್ಣೆ, ತುಪ್ಪ ಹಾಕಿ ಸಿದ್ಧಪಡಿಸಿಕೊಂಡ ಮಟನ್‌ ಮತ್ತು ನುಚ್ಚು ಗೋಧಿ ಮಿಶ್ರಣಗಳನ್ನು ಸೇರಿಸಿ ಗೋಟಾದಿಂದ (ಸುತ್ತಿಗೆ ಆಕಾರದ ತಿರಗಿಸುವ ಸಾಧನ) ಹದಕ್ಕೆ ಬರುವ ವರೆಗೆ ತಿರುಗಿಸಿ ಮಿಶ್ರಣ ಮಾಡಲಾಗುತ್ತದೆ. ಹದಕ್ಕೆ ಬಂದ ಅಡುಗೆಯನ್ನು ಅರಳಲು ಬಿಟ್ಟಾಗ ಹಲೀಮ್‌ ಸಿದ್ಧಗೊಳ್ಳುತ್ತದೆ ಎಂದು ಹಲೀಮಾ ಮಾರಾಟಗಾರರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT