ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಟೋಬರ್‌ 1 ರಿಂದ ಟಿಡಿಎಸ್‌ ಕಡಿತ ಕಡ್ಡಾಯ

ಕಲಬುರ್ಗಿ ವಿಭಾಗದ ವಾಣಿಜ್ಯ ತೆರಿಗೆಗಳ ಉಪ ಆಯುಕ್ತೆ ಮೀರಾ ಪಂಡಿತ್‌ ಸಂವಾದ
Last Updated 28 ಸೆಪ್ಟೆಂಬರ್ 2018, 11:02 IST
ಅಕ್ಷರ ಗಾತ್ರ

ರಾಯಚೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು ಹಾಗೂ ಸರ್ಕಾರಿ ಸ್ಥಾಪಿತ ಇಲಾಖೆಗಳಲ್ಲಿ ಅಕ್ಟೋಬರ್‌ 1 ರಿಂದ ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್‌) ಮಾಡುವ ನೀತಿಯು ಕಡ್ಡಾಯವಾಗಿ ಜಾರಿಯಾಗುತ್ತದೆ ಎಂದು ಕಲಬುರ್ಗಿ ವಿಭಾಗದ ವಾಣಿಜ್ಯ ತೆರಿಗೆಗಳ ಉಪ ಆಯುಕ್ತೆ (ಜಾರಿ) ಮೀರಾ ಪಂಡಿತ್‌ ಹೇಳಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ವಾಣಿಜ್ಯ ತೆರಿಗೆಗಳ ಇಲಾಖೆ ಹಾಗೂ ಜಿಲ್ಲಾ ಖಜಾನೆಯಿಂದ ಶುಕ್ರವಾರ ಏರ್ಪಡಿಸಿದ್ದ ‘ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017 ರ ಅನ್ವಯ ಟಿಡಿಎಸ್‌ ಪ್ರಾಧಿಕಾರಿ ಹಾಗೂ ಬಟವಾಡೆ ಅಧಿಕಾರಿಗಳ ನೋಂದಣಿ, ಕಟಾವಣೆ, ರಿಟರ್ನ್ಸ್‌ ಸಲ್ಲಿಕೆ ಮತ್ತು ಕೆ2 ತರಬೇತಿ ಕಾರ್ಯಾಗಾರ’ದಲ್ಲಿ ಸಂವಾದ ನಡೆಸಿದರು.

ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಎಸ್‌ಟಿ) ಜಾರಿಯಾದ 14 ತಿಂಗಳುಗಳ ಬಳಿಕ ಟಿಡಿಎಸ್‌ ಜಾರಿ ಮಾಡಲಾಗುತ್ತಿದೆ. ರಾಜ್ಯದೊಳಗಿನ ಗುತ್ತಿಗೆದಾರ ಅಥವಾ ಮಾರಾಟಗಾರನಿಂದ ಪಡೆಯುವ ಯಾವುದೇ ಸರಕು ಅಥವಾ ಸೇವೆಗೆ ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ತೆರಿಗೆ ಕಟ್ಟಬೇಕು. ಹೊರರಾಜ್ಯದ ಗುತ್ತಿಗೆದಾರ ಅಥವಾ ಮಾರಾಟಗಾರನಿಂದ ಪಡೆಯುವ ಸರಕು ಅಥವಾ ಸೇವೆಗೆ ಐಜಿಎಸ್‌ಟಿ ಕಟ್ಟಬೇಕು ಎಂದು ಹೇಳಿದರು.

ಸರಕು ಅಥವಾ ಸೇವೆ ಪಡೆಯುವ ಮೂಲ ಒಪ್ಪಂದದ ಮೊತ್ತವು ₨ 2.5 ಲಕ್ಷಕ್ಕಿಂತ ಅಧಿಕ ಇದ್ದರೆ ಮಾತ್ರ ಬಟವಾಡೆ ಅಧಿಕಾರಿಯು ಸಿಜಿಎಸ್‌ಟಿ ಶೇ 1 ಮತ್ತು ಎಸ್‌ಜಿಎಸ್‌ಟಿ ಶೇ 1 ರಷ್ಟು ಟಿಡಿಎಸ್‌ ಕಡಿತ ಮಾಡಿಕೊಂಡು ವ್ಯಾಪಾರಿಗೆ ಹಣ ಸಂದಾಯ ಮಾಡಬೇಕು. ಗುತ್ತಿಗೆ ಅಥವಾ ಸೇವೆಗಾಗಿ ಒಬ್ಬರೇ ಗುತ್ತಿಗೆದಾರನಿಗೆ ₨ 2.5 ಲಕ್ಷಕ್ಕಿಂತ ಕಡಿಮೆ ಮೊತ್ತದ ಹಲವು ಗುತ್ತಿಗೆಗಳನ್ನು ವಹಿಸಿದ್ದರೂ ಟಿಡಿಎಸ್‌ ಮುರಿದುಕೊಳ್ಳುವ ಅಗತ್ಯ ಇರುವುದಿಲ್ಲ ಎಂದು ತಿಳಿಸಿದರು.

ಟಿಡಿಎಸ್‌ ಮುರಿದುಕೊಂಡ ತಿಂಗಳುಗಳಲ್ಲಿ ಮಾತ್ರ ಆನ್‌ಲೈನ್‌ ರಿಟರ್ನ್ಸ್‌ ಸಲ್ಲಿಕೆ ಮಾಡಬೇಕು. ಟಿಡಿಎಸ್‌ ಕಡಿತ ಮಾಡಿರುವ ಮುಂದಿನ ತಿಂಗಳಿನ 10 ರೊಳಗಾಗಿ ರಿಟರ್ನ್ಸ್‌ ಸಲ್ಲಿಕೆ ಮುಗಿಸಬೇಕು. ರಿಟರ್ನ್ಸ್‌ ಸಲ್ಲಿಕೆ ಮಾಡಿದ ಐದು ದಿನದೊಳಗೆ ಗುತ್ತಿಗೆದಾರನ ಪ್ರಮಾಣಪತ್ರವು ಆನ್‌ಲೈನ್‌ ಮೂಲಕವೇ ಡೌನ್‌ಲೋಡ್‌ಗೆ ಲಭ್ಯವಾಗುತ್ತದೆ. ಟಿಡಿಎಸ್‌ ಕಡಿತ ಮಾಡಿಕೊಂಡಿದ್ದರೂ ರಿಟರ್ನ್ಸ್‌ ಸಲ್ಲಿಸದಿರುವುದು, ಕಡಿಮೆ ಕಡಿತ ಮಾಡಿರುವುದು ಅಥವಾ ಟಿಡಿಎಸ್‌ ಕಡಿತ ಮಾಡದಿರುವುದಕ್ಕೆ ಬಟವಾಡೆ ಅಧಿಕಾರಿ ತನ್ನ ವೇತನದಿಂದ ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದರು.

ರಾಜ್ಯ ಸರ್ಕಾರಕ್ಕೆ ಬರುವ ಆದಾಯದಲ್ಲಿ ಶೇ 62 ರಷ್ಟು ವಾಣಿಜ್ಯ ತೆರಿಗೆಗಳ ಪರಿಶ್ರಮದ ಪಾಲು ಇದೆ. ಸರ್ಕಾರಿ ಅಧಿಕಾರಿಗಳು ಪಡೆಯುವ ವೇತನದಲ್ಲಿ ಶೇ 60 ರಷ್ಟು ವಾಣಿಜ್ಯ ತೆರಿಗೆ ಅಧಿಕಾರಿಗಳು ತೆರಿಗೆ ಸಂಗ್ರಹಿಸುವ ಶ್ರಮ ಇರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಕಾಲಕ್ಕೆ ಟಿಡಿಎಸ್‌ ಪಾವತಿಸಿದರೆ ಎಲ್ಲರೂ ನೆಮ್ಮದಿಯಿಂದ ಇರಬಹುದು. ವಿನಾಕಾರಣ ದಂಡ ಪಾವತಿಸುವ ಕ್ರಮಕ್ಕೆ ಮುಂದಾಗಬಾರದು ಎಂದು ಸಲಹೆ ನೀಡಿದರು.

ಆಯಾ ಇಲಾಖೆಗಳ ಬಟವಾಡೆ ಅಧಿಕಾರಿಗಳು (ಡಿಡಿಒ) ಸೆಪ್ಟೆಂಬರ್‌ 30 ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ಸರ್ಕಾರಕ್ಕೆ ತ್ವರಿತ ಆದಾಯ ಮತ್ತು ಸಂಬಂಧಿಸಿದ ವ್ಯಾಪಾರಿಗೆ ಲಾಭ ತಲುಪಲು ಟಿಡಿಎಸ್‌ ಕಡಿತ ಮಾಡಿಕೊಳ್ಳಲೇಬೇಕು. ₨2.5 ಲಕ್ಷ ಮೀರಿದ ಸರಕು ಅಥವಾ ಸೇವೆಗೆ ಅಕ್ಟೋಬರ್‌ ನಂತರ ಎಷ್ಟೇ ಹಣ ಪಾವತಿ ಮಾಡಿದರೂ ಟಿಡಿಎಸ್‌ ಕಡಿತ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಟಿಡಿಎಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಅಂತರ್ಜಾಲದಲ್ಲೂ ಪಡೆದುಕೊಳ್ಳಬಹುದು. http://gst.kar.nic.in ವೆಬ್‌ಸೈಟ್‌ ವಿಳಾಸ.
ಕಲಬುರ್ಗಿ ವಿಭಾಗದ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ (ಆಡಳಿತ) ಡಾ. ಎಸ್‌.ಎಂ. ಇನಾಮದಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ (ಜಾರಿ) ಪದ್ಮಾಕರ ಆರ್‌. ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು.

ಜಿಲ್ಲಾ ಖಜಾನೆ ಅಧಿಕಾರಿ ಮಹಾಲಿಂಗಪ್ಪ, ವಾಣಿಜ್ಯ ತೆರಿಗಳ ಜಂಟಿ ಆಯುಕ್ತ (ಮನವಿ) ಜಿ. ಅಮರೇಶ ಇದ್ದರು.

ಸಿಂಧನೂರಿನ ಪ್ರಭಾರಿ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಮೊಹ್ಮದ್ ನೂರಅಲಿ ನಿರೂಪಿಸಿದರು. ರಾಯಚೂರಿನ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ (ಎಲ್‌ಜಿಎಸ್‌ಟಿಒ) ರಾಜಾಸಾಬ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT