ತಂತ್ರಜ್ಞಾನ ಈ ತಲೆಮಾರಿಗೆ ಅನುಕೂಲವಾಗಿದೆಯೆ?: ಪ್ರಭಾಕರ್‌ ಹಮಿಗಿ

7
ತುಂಗಭದ್ರಾ ಯೋಜನೆ–ಕಾಡಾ ಆಡಳಿತಾಧಿಕಾರಿ ಪ್ರಶ್ನೆ

ತಂತ್ರಜ್ಞಾನ ಈ ತಲೆಮಾರಿಗೆ ಅನುಕೂಲವಾಗಿದೆಯೆ?: ಪ್ರಭಾಕರ್‌ ಹಮಿಗಿ

Published:
Updated:
Deccan Herald

ರಾಯಚೂರು: ‘ತಂತ್ರಜ್ಞಾನಾಧಾರಿತ ಸಾಧನಗಳು ಲಭ್ಯವಾಗದಿರುವುದು ಒಳ್ಳೆಯದಾಯಿತು ಎಂದು ಹಿಂದಿನ ತಲೆಮಾರಿನ ಜನರು ಹೇಳುತ್ತಿದ್ದಾರೆ. ಹಾಗಾದರೆ, ತಂತ್ರಜ್ಞಾನದಿಂದ ಎಷ್ಟು ಅನುಕೂಲವಾಗಿದೆ ಎಂದು ಈ ತಲೆಮಾರಿನ ಯುವಜನಾಂಗ ಉತ್ತರಿಸಬೇಕು’ ಎಂದು ತುಂಗಭದ್ರಾ ಯೋಜನೆ–ಕಾಡಾ ಆಡಳಿತಾಧಿಕಾರಿ ಪ್ರಭಾಕರ್‌ ಹಮಿಗಿ ಪ್ರಶ್ನಿಸಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಶನಿವಾರ ಏರ್ಪಡಿಸಿದ್ದ ‘ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ, ಕನ್ನಡ ಸಂಘ ಹಾಗೂ ಎಂಜಿನಿಯರುಗಳ ಸಂಘಗಳ ಉದ್ಘಾಟನೆ ಮತ್ತು ಎಂಜಿನಿಯರುಗಳ ದಿನಾಚರಣೆ’ ಸಮಾರಂಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

‘ಮಾಹಿತಿ, ತಂತ್ರಜ್ಞಾನದ ಲಭ್ಯತೆ ಸುಲಭ ಇಲ್ಲದ ಕಾರಣಕ್ಕಾಗಿ ಹಿಂದಿನ ಜನರೆಲ್ಲ ಕ್ರಿಯಾಶೀಲರಾಗಿದ್ದರು. ಇಂದಿನ ಯುವಜನಾಂಗಕ್ಕೆ ಬೆರಳಿನ ತುದಿಯಲ್ಲಿಯೇ ಅಗಾಧ ಮಾಹಿತಿ ಲಭ್ಯ ಇರುವುದರಿಂದ ಆಲಸಿಗಳಾಗಿದ್ದಾರೆ. ಮೊಬೈಲ್‌ ಎನ್ನುವುದು ಪಿಶಾಚಿಯಾಗಿ ಎಲ್ಲರ ಕೈಯಲ್ಲೂ ಬಳಕೆಯಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ತಂತ್ರಜ್ಞಾನ ಎನ್ನುವ ಪಿಶಾಚಿಯನ್ನು ನಿಯಂತ್ರಣ ಮಾಡಿಕೊಳ್ಳದವರನ್ನು ಅದು ತಿಂದು ಮುಗಿಸುತ್ತದೆ. ಉತ್ತಮ ಬದುಕು ರೂಪಿಸಿಕೊಳ್ಳಲು ಮೊಬೈಲ್‌ ಬಳಸಿಕೊಳ್ಳುತ್ತಿದ್ದೇವೆಯೇ ಎಂಬುದನ್ನು ಯುವಜನಾಂಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಮೂಲಕ ಸಿಗುವ ಅಗಾಧ ಮಾಹಿತಿಯನ್ನು ಜೀವನ ರೂಪಿಸಿಕೊಳ್ಳಲು ಬಳಸಿಕೊಂಡರೆ ಮಾತ್ರ ಅದು ಬದುಕಿಗೆ ಪೂರಕ’ ಎಂದು ಮಾರ್ಮಿಕವಾಗಿ ವಿವರಿಸಿದರು.

‘ಅನಗತ್ಯ ವಿಷಯಗಳಿಗೆ ಮೊಬೈಲ್‌ ಬಳಕೆ ಮಾಡುತ್ತಿರುವುದರಿಂದ ಸಂಬಂಧಗಳನ್ನು ಸಹ ಕಳೆದುಕೊಳ್ಳುವ ಪ್ರಸಂಗಗಳು ನಡೆಯುತ್ತಿವೆ. ಗೆಳೆತನ, ಕುಟುಂಬದಲ್ಲಿನ ನೆಮ್ಮದಿ ಸಡಿಲವಾಗುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು. ತಂತ್ರಜ್ಞಾನವನ್ನು ಜ್ಞಾನವೃದ್ಧಿಗಾಗಿ ಬಳಸಿಕೊಳ್ಳಬೇಕು. ಬೆರಳಿನ ತುದಿಯಲ್ಲಿ ಸಿಗುವ ಮಾಹಿತಿ ಕಣಜದಿಂದ ಕುಳಿತಲ್ಲಿಯೇ ಇಡೀ ಜಗತ್ತನ್ನು ತಿಳಿದುಕೊಂಡು, ಬದುಕು ರೂಪಿಸಿಕೊಳ್ಳಬೇಕು. ವಿಷಯ ಪಾಂಡಿತ್ಯ ಸಂಪಾದನೆ ಮಾಡಬೇಕು’ ಎಂದು ಸಲಹೆ ನೀಡಿದರು.

ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ, ಸಾಂಸ್ಕೃತಿಕ ಕಾರ್ಯದರ್ಶಿ ಪವನಕುಮಾರ ಬಿ. ಕೇತನಕರ, ಕನ್ನಡ ಸಂಘದ ಕಾರ್ಯಕಾರಿ ಸಮಿತಿ ಅಧ್ಯಕ್ಷ ದೇವಪ್ಪ, ಅಭಿಯಂತರರ ಸಂಘದ ಕಾರ್ಯದರ್ಶಿ ಸಚಿನ ಹಾಲೇಶ ಮುದ್ದಿ ಅವರು ಸಂಘಗಳ ಕ್ರಿಯಾಯೋಜನೆಗಳನ್ನು ಕುರಿತು ತಿಳಿಸಿದರು.

ಕೃಷಿ ತಾಂತ್ರಿಕ ಮಹಾವಿದ್ಯಾಲಯದ ನಿವೃತ್ತ ಡೀನ್‌ ಡಾ. ಎಂ. ಅನಂತಾಚಾರ್‌, ಶ್ರೀ ಬಸವ ಅಗ್ರಿಟೆಕ್‌ ಕಲಬುರ್ಗಿಯ ಸಾಬು ರಡ್ಡೆರಟ್ಟಿ, ಸಂಘಗಳಿಗೆ ಸಲಹೆಗಾರ ಶಿಕ್ಷಕರಾದ ಡಾ. ಬಿ.ಎಸ್‌. ಪೊಲೀಸಗೌಡರ, ಎಂ.ಎಸ್‌.ಅಯ್ಯನಗೌಡರ, ಡಾ.ಜಿ.ವಿ. ಶ್ರೀನಿವಾಸರೆಡ್ಡಿ, ವೀಣಾ ಟಿ., ಡಾ.ಯು.ಆರ್‌. ನಿಡೋಣಿ, ಡಾ. ಶರಣಗೌಡ ಹಿರೇಗೌಡರ, ಡಾ.ಸುಶಿಲೇಂದ್ರ ಇದ್ದರು.

ವಿದ್ಯಾರ್ಥಿಗಳಾದ ಯಶ್ವಂತ ಜಿ.ಎಂ., ಸುಪ್ರಿಯಾ ನಿರೂಪಿಸಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !