ಶುಕ್ರವಾರ, ಮೇ 27, 2022
21 °C

ರಾಯಚೂರು ಅಭಿವೃದ್ಧಿ ತೋರಿಸಿ: ಎಸ್‌.ಆರ್‌.ರೆಡ್ಡಿ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಾಯಚೂರು ನಗರ ಕ್ಷೇತ್ರದಲ್ಲಿ ಕಳೆದ ಒಂಭತ್ತು ವರ್ಷಗಳಲ್ಲಿ ಯಾವ ಅಭಿವೃದ್ಧಿ ಆಗಿದೆ ಎಂಬುದನ್ನು ಕ್ಷೇತ್ರದ ಶಾಸಕರು ತೋರಿಸಲಿ. ನಗರವು ತಿಪ್ಪೆಯಾಗಿ ಮಾರ್ಪಟ್ಟಿದ್ದು, ಮಾವಿನಕೆರೆ ದುರ್ನಾತ ಬೀರುತ್ತಿದೆ. ಕ್ಷೇತ್ರದ ಅಭಿವೃದ್ಧಿ ಹೇಗೆ ಮಾಡಬೇಕು ಎಂಬುದನ್ನು ಪಕ್ಕದ ತೆಲಂಗಾಣ ರಾಜ್ಯದ ನಾರಾಯಣಪೇಟ್‌ ಕ್ಷೇತ್ರಕ್ಕೆ ಬಂದರೆ ಮಾಧ್ಯಮಗಳ ಎದುರಿನಲ್ಲಿಯೇ ತೋರಿಸುತ್ತೇನೆ ಎಂದು ನಾರಾಯಣಪೇಟ್‌ ಶಾಸಕ ಎಸ್‌.ಆರ್‌.ರೆಡ್ಡಿ ಸವಾಲು ಹಾಕಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾರಾಯಣಪೇಟ್‌ ಕ್ಷೇತ್ರಕ್ಕೆ ಬಂದಿದ್ದ ರಾಯಚೂರು ಶಾಸಕರು ನನ್ನನ್ನು ಸೋಲಿಸುವ ವಿಚಾರ ಮಾತನಾಡಿದ್ದಾರೆ. ಅಲ್ಲಿ ಬಿಜೆಪಿಯಿಂದ ಪಾದಯಾತ್ರೆ ನಡೆಸಿದ್ದ ಬಿಜೆಪಿ ಅಧ್ಯಕ್ಷರು ನನ್ನ ವಿರುದ್ಧ ಯಾವುದೇ ಮಾತನಾಡಿಲ್ಲ. ಆದರೆ ರಾಯಚೂರು ನಗರ ಶಾಸಕರು ಮಾತ್ರ ನನ್ನ ವಿರುದ್ಧ ವೈಯಕ್ತಿಕವಾಗಿ ಸವಾಲು ಹಾಕಿದ್ದಾರೆ. ಜನರು ಇವರನ್ನು ಯಾವುದಕ್ಕೆ ಗೆಲ್ಲಿಸಿದ್ದಾರೆ. ಪಕ್ಕದ ರಾಜ್ಯದ ಶಾಸಕರೊಂದಿಗೆ ದ್ವೇಷ ಸಾಧಿಸಲು ಆಯ್ಕೆ ಮಾಡಿದ್ದಾರೆಯೇ? ಅಭಿವೃದ್ಧಿ ವಿಷಯದಲ್ಲಿ ಸ್ಪರ್ಧೆ ಮಾಡುವುದಕ್ಕೆ ಸ್ವಾಗತಿಸುತ್ತೇನೆ. ವೈಯಕ್ತಿಕವಾಗಿ ಸವಾಲು ಹಾಕುವುದು ಸರಿಯಲ್ಲ ಎನ್ನುವ ಸೂಚನೆಯನ್ನು ಈ ಮೂಲಕ ನೀಡುತ್ತಿದ್ದೇನೆ‘ ಎಂದರು.

’ರಾಯಚೂರಿನಲ್ಲಿ ವಿಮಾನ ನಿಲ್ದಾಣ ಆಗಿದೆ, ಟೆಕ್ಸ್‌ಟೈಲ್‌ ಪಾರ್ಕ್‌ ಆಗಿದೆ ಹಾಗೂ ಪ್ರತಿದಿನ ನೀರು ಕೊಡುತ್ತೇವೆ ಎಂದು ನಾರಾಯಣಪೇಟ್‌ ಜನರಿಗೆ ಹೇಳಿದ್ದಾರೆ. ರಾಯಚೂರಿನ ವಾಸ್ತವತೆ ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ. ರಾಯಚೂರಿನಲ್ಲಿ ವಿಮಾನ ನಿಲ್ದಾಣಕ್ಕೆ ಭೂಮಿಪೂಜೆ ಆಗಿದೆಯೇ? ಎಷ್ಟು ದಿನಗಳಲ್ಲಿ ವಿಮಾನ ಬರುತ್ತದೆ? ಒಂದು ಸಾವಿರ ಎಕರೆಯಲ್ಲಿ ಟೆಕ್ಸ್ ಟೈಲ್ ಪಾರ್ಕ್ ಎಲ್ಲಿ ಮಾಡಿದ್ದಾರೆ ಎಂಬುದನ್ನು ತೋರಿಸಲಿ. ರಾಯಚೂರು ಜನರಿಗೆ ಪ್ರತಿದಿನ ನೀರು ಕೊಡುತ್ತೇವೆ ಎಂದು ಹೇಳಿದ್ದಾರೆ. ನಾನು ರಾಯಚೂರಿನಲ್ಲಿ ನಾನು ಮನೆ ಕಟ್ಟಿ 20 ವರ್ಷಗಾಗಿವೆ. ಇದುವರೆಗೂ ನಮ್ಮ ಬಡಾವಣೆಯಲ್ಲಿ ನೀರಿನ ಪೈಪ್ ಲೈನ್ ಹಾಕಿಲ್ಲ‘ ಎಂದರು.

ಶೇ‌ 40 ಕಮಿಷನ್ ತೆಗೆದುಕೊಳ್ಳುವವರು ಏನು ಕಮಿಷನ್ ಇಲ್ಲದೆ ಕೆಲಸ ಮಾಡುತ್ತಿದ್ದವರ ಬಗ್ಗೆ ಬಂದು ಮಾತನಾಡುವುದು ಸರಿಯೇ. ಯಾವುದೇ ಶಾಸಕರು ಬಾದಷಹಗಳಲ್ಲ. ಜನ ಸೇವಕರು ಎಂಬುದನ್ನು ಮರೆಯಬಾರದು. ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಎಂದು ಹೇಳುವ ಮೂಲಕ ತಮ್ಮ ಸರ್ಕಾರಕ್ಕೂ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು