ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು ರೈಲ್ವೆ ನಿಲ್ದಾಣದ 152ನೇ ವಾರ್ಷಿಕೋತ್ಸವ

Published 6 ಜನವರಿ 2024, 15:32 IST
Last Updated 6 ಜನವರಿ 2024, 15:32 IST
ಅಕ್ಷರ ಗಾತ್ರ

ರಾಯಚೂರು: ‘ರಾಯಚೂರು ರೈಲ್ವೆ ನಿಲ್ದಾಣ ಸ್ವಾತಂತ್ರ್ಯ ಹೋರಾಟಕ್ಕೆ ಈ ಭಾಗದ ಜನರಿಗೆ ಸ್ಪೂರ್ತಿಯಾಗಿತ್ತು. ಮಹಾತ್ಮಗಾಂಧಿ ಅವರು ಈ ಭಾಗದ ಜನರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದ್ದರು’ ಎಂದು ಸ್ವಾತಂತ್ರ್ಯ ಹೋರಾಟಗಾರ ಡಿ. ಪಂಪಣ್ಣ ತಿಳಿಸಿದರು.

ನಗರದ ಕೇಂದ್ರ ರೈಲ್ವೆ ನಿಲ್ದಾಣದ 152ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮಗಾಂಧಿ ಅವರು, ‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪ್ರಯಾಣಿಸುವಾಗ ಇಲ್ಲಿ ಕೆಲ ಕಾಲ ಕಳೆದಿದ್ದರು’ ಎಂದು ಹೇಳಿದರು.

‘ಗುಂಪು‌ಗುಂಪಾಗಿ ಸೇರಿದರೆ ಬ್ರಿಟಿಷರು ದಂಡಿಸುತ್ತಿದ್ದರು. ಇಂತಹ ಸಂದರ್ಭದಲ್ಲಿಯೂ ಗಾಂಧೀಜಿ ಬರುವ ಸುದ್ಧಿ ಕೇಳಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ನನಗೆ ಕನಿಷ್ಠ 10 ಜನರನ್ನು ಕರೆತರುವ ಸೂಚನೆಯಿತ್ತು. 200 ಜನರನ್ನು ಕರೆ ತಂದಿದ್ದೆ’ ಎಂದು ಮೆಲಕು ಹಾಕಿದರು.

‘ಹಿರಿಯರು ಮೂಲ‌ಸ್ತಂಭ. ಅವರಿಗೆ ಗೌರವ ನೀಡಬೇಕು. ಅವರು ಬಂಗಾರದ ಗಣಿ. ಅದರ ಫಲ ನಿಮಗೆ ಸಿಗುತ್ತದೆ. ಅಪಾರ ಅನುಭವ ಪಡೆದಿರುತ್ತಾರೆ. ಅವರ‌ ವಿಚಾರ ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಗುಂತಕಲ್ ವಿಭಾಗೀಯ ಹಿರಿಯ ಎಂಜಿನಿಯರ್ ಕಿಷ್ಟಪ್ಪ ಮಾತನಾಡಿ, ‘ರೈಲ್ವೆ ಪ್ರವಾಸ ಅನೇಕ ಕುಟುಂಬಗಳನ್ನು ಒಗ್ಗೂಡಿಸುತ್ತದೆ. ರೈಲು ಅನೇಕರಿಗೆ‌‌ ಉದ್ಯೋಗ, ಜೀವನದ ಭದ್ರತೆ ನೀಡಿದೆ. ಪ್ರಯಾಣಿಕರು ಸ್ವಚ್ಛತೆ ಕಾಪಾಡಿ ಜವಾಬ್ದಾರಿಯುತ ನಾಗರಿಕರಾಗಬೇಕು’ ಎಂದು ಮನವಿ ಮಾಡಿದರು.

ರೈಲ್ವೆ ಬೋರ್ಡ್ ಮಾಜಿ ಸದಸ್ಯ ಬಾಬುರಾವ್ ಮಾತನಾಡಿ, ‘ಜಿಲ್ಲೆಯಲ್ಲಿ ಅನೇಕ ಅಕ್ಕಿ, ಹತ್ತಿ ಗಿರಣಿಗಳು ಅನೇಕ ಕೈಗಾರಿಕೆಗಳು ಇವೆ. ಸರ್ಕಾರಕ್ಕೆ ಹೆಚ್ಚು ತೆರಿಗೆ ಸಂಗ್ರಹವಾಗುತ್ತದೆ. ರೈಲ್ವೆ ನಿಲ್ದಾಣಕ್ಕೆ ಆಧುನಿಕ ಸೌಲಭ್ಯ ನೀಡಬೇಕು. ಇಲ್ಲಿ ಅನೇಕ ಕಾಮಗಾರಿಗಳು ಬಾಕಿ ಇದೆ ಶೀಘ್ರವೇ ಪೂರ್ಣಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ರೈಲಿನಲ್ಲಿ ಬಡವರು ಮಧ್ಯಮ, ವರ್ಗದವರು ಹೆಚ್ಚು ಪ್ರಯಾಣ ಮಾಡುತ್ತಾರೆ. ಆಧುನಿಕ ಸೌಕರ್ಯ ಕಲ್ಪಿಸಬೇಕು. ಕೇವಲ 3 ಪ್ಲಾಟ್ ಫಾರ್ಮ್ ಇದ್ದು 4, 5 ಪ್ಲಾಟ್ ಫಾರ್ಮ್ ನಿರ್ಮಿಸಬೇಕು. ರಾಯಚೂರು ಹಿಂದುಳಿದ ಜಿಲ್ಲೆಯಾಗಿದ್ದು, ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು’ ಎಂದು ಒತ್ತಾಯಿಸಿದರು.

ಸ್ಟೇಶನ್ ಮ್ಯಾನೇಜರ್ ಅಶೋಕ ಮೇನಾ, ಕಮರ್ಷಿಯಲ್ ‌ಮ್ಯಾನೇಜರ್ ಎಸ್‌.ಜಿ. ಚೌಹಾಣ್, ರಾಯಚೂರು ನಿಲ್ಲಾಣ ಸಲಹಾ ಸಮಿತಿ ಸದಸ್ಯ ಜಂಬಣ್ಣ, ,ಎ. ಚಂದ್ರಶೇಖರ, ಎಂ. ಡಿ ಹನೀಫ್ ಶೇಖ, ಕೆ. ಮಹೇಶ, ಅಫ್ರುದ್ದೀನ್, ವಿ.ಎನ್ ಕೊಂಡ, ಎಂ. ಮಾರೆಪ್ಪ, ಸಂಜೀವ, ಶ್ರೀಧರ ಬಾಬು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT