ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಬಯಲಲ್ಲೇ ಊಟ: ಅವ್ಯವಸ್ಥೆಯ ಆಗರವಾದ ಮುದಗಲ್‌ನ ಇಂದಿರಾ ಗಾಂಧಿ ವಸತಿ ಶಾಲೆ

Published 18 ಡಿಸೆಂಬರ್ 2023, 5:21 IST
Last Updated 18 ಡಿಸೆಂಬರ್ 2023, 5:21 IST
ಅಕ್ಷರ ಗಾತ್ರ

ಮುದಗಲ್: ಇಲ್ಲಿನ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಊಟದ ಕೊಠಡಿ ಇಲ್ಲದ ಕಾರಣ ವಿದ್ಯಾರ್ಥಿಗಳು ಬಯಲಿನಲ್ಲಿ ಕುಳಿತು ಊಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿವರೆಗಿನ 255 ವಿದ್ಯಾರ್ಥಿಗಳಿದ್ದಾರೆ.

ಊಟ ಮಾಡಲು ಪ್ರತ್ಯೇಕ ಕೊಠಡಿ ಇಲ್ಲ. ಮಕ್ಕಳು ಶಾಲೆಯ ಉಪನ್ಯಾಸ ಕೊಠಡಿಗಳು, ಕಚೇರಿ ಮುಂಭಾಗದಲ್ಲಿ ಕುಳಿತು ಊಟ ಮಾಡುತ್ತಾರೆ. ಶಾಲೆಗೆ ಸಾರ್ವಜನಿಕರು ಭೇಟಿ ನೀಡಿದಾಗ ವಿದ್ಯಾರ್ಥಿಗಳು ಮುಜುಗರಪಟ್ಟುಕೊಂಡು ಊಟ ಮಾಡುತ್ತಾರೆ.

ಬಯಲಿನಲ್ಲಿ ಕುಳಿತು ಊಟ ಮಾಡುವ ಮಕ್ಕಳು ಆಹಾರ ಹಾಕಿಸಿಕೊಳ್ಳಲು ಎದ್ದು ಹೋಗಿ ಬರುತ್ತಾರೆ. ಆಗ ಕಾಲಿಗೆ ಅಂಟಿದ ಮರಳು ಊಟದ ತಟ್ಟೆಯಲ್ಲಿ ಬೀಳುತ್ತದೆ.

ಅಲ್ಲದೆ, ಶಾಲೆಯಲ್ಲಿ ಪ್ರತ್ಯೇಕ ತರಗತಿ ಕೊಠಡಿಗಳಿಲ್ಲ. ಪಾಠ ಮಾಡುವ ಕೊಠಡಿಗಳಲ್ಲಿಯೇ ಮಕ್ಕಳು ವಾಸ ಮಾಡುತ್ತಾರೆ.

ಸುಸಜ್ಜಿತ ಪ್ರಯೋಗಾಲಯ, ಕಾಯಂ ವಿಜ್ಞಾನ ಶಿಕ್ಷಕರಿಲ್ಲ. ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ ಇಲ್ಲ. ವಿಜ್ಞಾನ ಶಿಕ್ಷಕ, ವಸತಿ ನಿಲಯದ ಮೇಲ್ವಿಚಾರಕ ಹಾಗೂ ಸ್ಟಾಫ್‌ ನರ್ಸ್ ಹುದ್ದೆಗಳು ಖಾಲಿ ಇವೆ.

ಈ ಶಾಲೆ 2017ರಲ್ಲಿ ಆರಂಭವಾಗಿದೆ. ಆರಂಭದಲ್ಲಿ ಲಿಂಗಸುಗೂರು ಹೋಬಳಿಯ ಕೆ.ಅಡವಿಭಾವಿಯ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ತರಗತಿಗಳನ್ನು ನಡೆಸಲಾಯಿತು. ನಂತರ ಮುದಗಲ್ ಜನರ ಒತ್ತಾಯದ ಮೇರೆಗೆ ಪಟ್ಟಣದ ನಾಗರಾಳ ಕ್ರಾಸ್ ಬಳಿ ಇರುವ ಖಾಸಗಿ ಕಟ್ಟಡದಲ್ಲಿ ಶಾಲೆ ನಡೆಸಲಾಗುತ್ತಿದೆ. ಶಾಲೆಯಲ್ಲಿ 9 ಕೊಠಡಿಗಳಿವೆ. 9 ಕೊಠಡಿಗಳ ಕೊರತೆ ಇದೆ.

ಕೊಠಡಿ ಸಮಸ್ಯೆಗಳಿಂದ ಶಾಲೆಯಲ್ಲಿ ಅಭ್ಯಾಸ ಮಾಡಲು ತೊಂದರೆಯಾಗುತ್ತಿದೆ.

ಕೆಲ ಕೊಠಡಿಗಳಿಗೆ ತಗಡು ಹಾಕಲಾಗಿದೆ. ಬೇಸಿಗೆ ವೇಳೆ ಸೆಕೆ ಹೆಚ್ಚಾಗುತ್ತದೆ.

ಸಮೀಪದ ಆಮದಿಹಾಳ ಗ್ರಾಮದಲ್ಲಿ ವಸತಿ ಶಾಲೆಯ ನೂತನ ಕಟ್ಟಡ ಕಾಮಗಾರಿ ನಡೆಯುತ್ತಿದೆ. ₹19 ಕೋಟಿ ವೆಚ್ಚದಲ್ಲಿ 9 ಎಕರೆ 20 ಗುಂಟೆ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಕಟ್ಟಡ ಕಾಮಗಾರಿ ಮಂದಗತಿಯಲ್ಲಿ ನಡೆದಿದೆ. ಹೀಗಾಗಿ ಮುದಗಲ್ ಪಟ್ಟಣದ ಹೊರ ವಲಯದ ಖಾಸಗಿ ವ್ಯಕ್ತಿಯ ಹೊಲದಲ್ಲಿ ನಿರ್ಮಾಣ ಗೊಂಡ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ.

ವಸತಿ ಶಾಲೆಗೆ ಸ್ವಂತ ಕಟ್ಟಡ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಾಡಿಗೆ ನೀಡಿದ ವ್ಯಕ್ತಿ ಭೂ ಪರಿವರ್ತನೆ ಮಾಡಿಸಿಕೊಳ್ಳದೆ ಕಟ್ಟಡ ನಿರ್ಮಿಸಿಕೊಂಡಿದ್ದರಿಂದ ಕಟ್ಟಡದ ಬಾಡಿಗೆ ನೀಡಲು ತಾಂತ್ರಿಕ ಸಮಸ್ಯೆಯಾಗಿದೆ. ಅವರಿಗೆ ಇಲ್ಲಿಯವರೆಗೂ ಬಾಡಿಗೆ ನೀಡಿಲ್ಲ ಎನ್ನುತ್ತಾರೆ ಪ್ರಾಂಶುಪಾಲ ಚನ್ನಬಸವ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT