ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ ಜಿಲ್ಲೆ ರಚನೆಗೆ ಒಕ್ಕೊರಲ ಆಗ್ರಹ

Last Updated 24 ಫೆಬ್ರುವರಿ 2018, 8:42 IST
ಅಕ್ಷರ ಗಾತ್ರ

ಚಿಕ್ಕೋಡಿ: ಪ್ರತ್ಯೇಕ ಜಿಲ್ಲೆ ಘೋಷಣೆ ಮಾಡುವಂತೆ ಆಗ್ರಹಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಕರೆ ನೀಡಿದ್ದ ‘ಚಿಕ್ಕೋಡಿ ಬಂದ್’ ಸಂಪೂರ್ಣ ಯಶಸ್ವಿಯಾಯಿತು.

ಪಟ್ಟಣದ ಎಲ್ಲ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗ್ಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದರು. ವಾಯವ್ಯ ಕರ್ನಾಟಕ
ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳ ಸೇವೆ ಸ್ಥಗಿತಗೊಂಡಿತ್ತು. ಇದರಿಂದ ಪ್ರಯಾಣಿಕರು ಪ್ರಯಾಸ ಪಡಬೇಕಾಯಿತು. ಆಟೊ ಸಂಚಾರವೂ ಸ್ಥಗಿತಗೊಂಡಿತು. ಮುಂಜಾಗ್ರತಾ ಕ್ರಮವಾಗಿ ಚಿಕ್ಕೋಡಿ ನಗರ ವ್ಯಾಪ್ತಿಯ ಸರ್ಕಾರಿ, ಖಾಸಗಿ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಪತಿ ಅವರು ರಜೆ ಘೋಷಿಸಿದ್ದರು.

ಬೆಳಿಗ್ಗೆ ಮಿನಿ ವಿಧಾನಸೌಧದ ಎದುರಿನ ಪ್ರತಿಭಟನಾ ಸ್ಥಳದಿಂದ ರ‍್ಯಾಲಿ ಆರಂಭಗೊಂಡು ನಿಪ್ಪಾಣಿ–ಮುಧೋಳ ರಸ್ತೆ ಮೂಲಕ ಮಹಾವೀರ ವೃತ್ತ, ಕಿತ್ತೂರು ಚನ್ನಮ್ಮ ರಸ್ತೆ, ಗಣಪತಿ ಪೇಠ, ಸೋಮವಾರ ಪೇಠಗಳ ಮೂಲಕ ಸಂಚರಿಸಿ ಬಸವವೃತ್ತ ತಲುಪಿತು. ಅಲ್ಲಿ ಕೆಲಹೊತ್ತು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.

ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಮುಖಂಡ ಬಿ.ಆರ್.ಸಂಗಪ್ಪಗೋಳ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಬಸವಪ್ರಸಾದ ಜೊಲ್ಲೆ ಇದ್ದರು.

‘ಪಟ್ಟಣದಲ್ಲಿ ಶೈಕ್ಷಣಿಕ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಕಚೇರಿಗಳಿವೆ. ಪ್ರತ್ಯೇಕ ಜಿಲ್ಲೆಯಾಗಲು ಎಲ್ಲ ಯೋಗ್ಯತೆಯೂ ಚಿಕ್ಕೋಡಿಗಿದೆ. ಹಾಗಾಗಿ ಸರ್ಕಾರ ಕೂಡಲೇ ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು’ ಎಂದು ಮಾಜಿ ಸಂಸದ ರಮೇಶ್ ಕತ್ತಿ ಒತ್ತಾಯಿಸಿದರು.

ಕರವೇ ತಾಲ್ಲೂಕು ಅಧ್ಯಕ್ಷ ನಾಗೇಶ ಮಾಳಿ ಮಾತನಾಡಿ,‘ ಚಿಕ್ಕೋಡಿ ಭಾಗದಲ್ಲಿ ಬೆಂಕಿ ಹೊತ್ತಿಕೊಳ್ಳುವ ಮುನ್ನ ಸರ್ಕಾರ ಹೊಸ ಜಿಲ್ಲೆ ಘೋಷಣೆ ಮಾಡಬೇಕು’ ಎಂದು ಆಗ್ರಹಿಸಿದರು.

ಹೋರಾಟದ ಮುಖಂಡ ಬಿ.ಆರ್.ಸಂಗಪ್ಪಗೋಳ, ಚಿಕ್ಕೋಡಿ ವಕೀಲರ ಸಂಘದ ಅಧ್ಯಕ್ಷ ಕಲ್ಮೇಶ ಕಿವಡ, ನಿಪ್ಪಾಣಿ ಟಿಎಪಿಎಂಸ್ ಅಧ್ಯಕ್ಷ ಜಗದೀಶ ಕವಟಗಿಮಠ, ಅಂಜುಮನ್–ಇ–ಇಸ್ಲಾಂ ಕಮಿಟಿ ಅಧ್ಯಕ್ಷ ಮೊಹಮ್ಮದ್‌ ಇಸಾ ನಾಯಿಕವಾಡಿ, ಬಸವಜ್ಯೋತಿ ಯೂತ್‌ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ರೈತ ಮುಖಂಡ ತ್ಯಾಗರಾಜ್ ಕದಂ, ದಲಿತ ಮುಖಂಡ ಬಸವರಾಜ್ ಢಾಕೆ, ಪ್ರಕಾಶ ಅನ್ವೇಕರ, ರಮೇಶ ಕರನೂರೆ, ಚಂದ್ರಕಾಂತ ಹುಕ್ಕೇರಿ, ರಾಮಾ ಮಾನೆ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು.

ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಂ.ಸಂಗ್ರೋಳೆ, ಪ್ರೊ.ಎಸ್‌.ವೈ.ಹಂಜಿ, ಸಂಜು ಬಡಿಗೇರ್, ವಿಜಯಭಾಸ್ಕರಗೌಡ ಇಟಗೋನಿ, ಶಾಮ ರೇವಡೆ, ರಾಘವೇಂದ್ರ ಸನದಿ, ಸುರೇಶ ಬ್ಯಾಕುಡೆ, ತುಕಾರಾಂ ಕೋಳಿ, ಕಲ್ಲಪ್ಪ ಜಾಧವ, ಎಂ.ಆರ್.ಮುನ್ನೊಳಿಕರ, ಪ್ರೊ.ಬಿ.ಎ.ಪೂಜಾರಿ, ದುಂಡಪ್ಪ ಬೆಂಡವಾಡೆ, ಶಿವಾನಂದ ಮರ್‍ಯಾಯಿ ಸೇರಿದಂತೆ ಚಿಕ್ಕೋಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಶಾಲೆ–ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಚಿಕ್ಕೋಡಿ ಜಿಲ್ಲೆ ಘೋಷಣೆಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT