ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಾಂತಿಕಾರಿ ಹಾಡಿನೊಂದಿಗೆ 11ರಂದು ಗದ್ದರ್‌ಗೆ ನುಡಿನಮನ

Published 7 ಆಗಸ್ಟ್ 2023, 14:31 IST
Last Updated 7 ಆಗಸ್ಟ್ 2023, 14:31 IST
ಅಕ್ಷರ ಗಾತ್ರ

ಸಿಂಧನೂರು: ಶ್ರಮಶಕ್ತಿಯ ವಿಮೋಚನಾ ಆಂದೋಲನಕ್ಕೆ ಸಾಹಿತ್ಯ, ಸಂಗೀತದ ವಿರಾಟ ರೂಪ ನೀಡಿದ್ದ ತೆಲುಗು ಸಾಂಸ್ಕೃತಿಕ ಸೇನಾನಿ ಗದ್ದರ್ ಅವರು ನಿಧನರಾದ ಹಿನ್ನೆಲೆಯಲ್ಲಿ ಹೋರಾಟದ ಕೊಂಡಿಯೊಂದು ಕಳಚಿದಂತಾಗಿದೆ. ಹೀಗಾಗಿ ಆ.11 ರಂದು ಸಿಂಧನೂರಿನಲ್ಲಿ ಕ್ರಾಂತಿಕಾರಿ ಹಾಡುಗಳೊಂದಿಗೆ ಗದ್ದರ್ ಅವರಿಗೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯ ರಾಜ್ಯ ಘಟಕದ ಸಂಯೋಜಕ ಎಂ.ಗಂಗಧರ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಜನ ನಾಟ್ಯ ಮಂಡಳಿ ಎಂಬ ಬಹುದೊಡ್ಡ ಸಾಂಸ್ಕೃತಿಕ ಸಂಘಟನೆ ಕಟ್ಟಿ, ಮೂರು ದಶಕಗಳ ಕಾಲ ರೈತ, ಆದಿವಾಸಿ, ವಿದ್ಯಾರ್ಥಿಗಳ ಕ್ರಾಂತಿಕಾರಿ ಸಂಘರ್ಷದ ಕಲಾ ರಾಯಭಾರಿಯಾಗಿ ಮೊಳಗಿದ ಧ್ವನಿ ಕಾಮ್ರೇಡ್ ಗದ್ದರ್. ಮಾರ್ಕ್ಸ್‌ವಾದಿ–ಲೆನಿನ್‍ವಾದಿ ಕ್ರಾಂತಿಕಾರಿ ರಾಜಕೀಯ ಶಿಕ್ಷಣ ಬಿತ್ತರಿಸಲು ಕೈಕೋಲು, ಕೆಂಭಾವುಟ, ಬರಿಮೈ, ಕಾಲ್ಗೆಜ್ಜೆ ತೊಟ್ಟು ಧಣಿವರೆಯದೇ ದುಡಿದ ಜಾಗೃತ ದನಿ ಗದ್ದರ್. ಕಲೆಗಾಗಿ ಕಲೆಯಲ್ಲ, ಬದುಕಿನ ಬದಲಾವಣೆಗಾಗಿ ಕಲೆ ಎಂದ ಕ್ರಾಂತಿಕಾರಿ ವಿಚಾರಧಾರೆಯನ್ನು ಸಾಕಾರಗೊಳಿಸಿ, ಹೋರಾಟದ ಕಲಾ ಮಂಡಳಿ ಎಂಬ ಹೊಸ ಪರಂಪರೆ ಆರಂಭಿಸಿದ ಅಪ್ರತಿಮ ಹೋರಾಟಗಾರ ಗದ್ದರ್’ ಎಂದು ಹೇಳಿದರು.

‘ಗದ್ದರ್ ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ. ನಾಡು ಹಾಗೂ ಹಾಡು ಇರುವ ತನಕ ನಮ್ಮೊಂದಿಗೆ, ನಮ್ಮ ಮುಂದಿನ ಪೀಳಿಗೆಯೊಂದಿಗೆ ಅಜರಾಮರವಾಗಿ ಇರಲಿದ್ದಾರೆ. ಕ್ರಾಂತಿಕಾರಿ ಚಳವಳಿಯೊಂದಿಗೆ ದುಡಿದು ಮಡಿದ ಕಾಮ್ರೇಡ್ ಗದ್ದರ್ ಅವರಿಗೆ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ, ಮನುಮಮತ ಬಳಗ ಹಾಗೂ ಸಮುದಾಯ ಸಂಘಟನೆ ಸಂಯುಕ್ತಾಶ್ರಯದಲ್ಲಿ ‘ಮೃತ್ಯುಂಜಯಗೆ ಲಾಲ್ ಸಲಾಮ್’ ಎಂಬ ಹೆಸರಿನಲ್ಲಿ ಕ್ರಾಂತಿಕಾರಿ ಹಾಡುಗಳನ್ನು ಹಾಡುವ ಮೂಲಕ ನುಡಿನಮನ ಕಾರ್ಯಕ್ರಮವನ್ನು ಆ.11 ರಂದು ಸಿಂಧನೂರಿನ ರಂಗಮಂದಿರ ಅಥವಾ ಸ್ತ್ರೀಶಕ್ತಿ ಭವನದಲ್ಲಿ ಏರ್ಪಡಿಸಲಾಗುವುದು. ಈ ಕಾರ್ಯಕ್ರಮಕ್ಕೆ ಎಡಶಕ್ತಿಗಳು, ಕ್ರಾಂತಿಕಾರಿ ಹಾಡುಗಾರರು, ದಲಿತ ಕಲಾ ಮಂಡಳಿಯವರು, ಬಂಡಾಯ ಹಾಡುಗಾರರು, ಜನ ಕಲಾವಿದರು, ಸಾಹಿತಿಗಳು, ಕವಿಗಳು ಹಾಗೂ ಎಲ್ಲಾ ಬಗೆಯ ದಲಿತ, ರೈತ, ಕಾರ್ಮಿಕ, ಅಲ್ಪಸಂಖ್ಯಾತ, ವಿದ್ಯಾರ್ಥಿ-ಯುವಜನ, ಮಹಿಳಾ ಮತ್ತು ಜನಪರ ಚಳವಳಿಯ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

ಗದ್ದರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನಾಚರಣೆ ನಡೆಸಿ, ಲಾಲ್ ಸಲಾಂ, ಲಾಲ್ ಸಲಾಂ ಮೃತ್ಯುಂಜಯಗೆ ಲಾಲ್ ಸಲಾಂ, ಜನರ ದನಿಗೆ ಲಾಲ್ ಸಲಾಂ’ ಹಾಡು ಹಾಡುವ ಮೂಲಕ ಸಾಂಕೇತಿಕವಾಗಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಜಾತಿ ನಿರ್ಮೂಲನಾ ಚಳವಳಿಯ ಸಂಚಾಲಕ ಎಚ್.ಎನ್.ಬಡಿಗೇರ್, ಬಸವರಾಜ ಬಾದರ್ಲಿ, ಮನುಮಮತ ಬಳಗದ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾದರ್ಲಿ ಮಾತನಾಡಿದರು.

ಕಾರ್ಮಿಕ ಮುಖಂಡ ವೆಂಕನಗೌಡ ಗದ್ರಟಗಿ, ವೇದಿಕೆಯ ಎಚ್.ಆರ್.ಹೊಸಮನಿ, ಮಾಬುಸಾಬ ಬೆಳ್ಳಟ್ಟಿ, ಯಲ್ಲಪ್ಪ ಜವಳಗೇರಾ, ಮೌನೇಶ ಜಾಲವಾಡ್ಗಿ, ಅಶೋಕ ಜಾಲವಾಡ್ಗಿ, ಹನುಮಂತಪ್ಪ ಗೊಡ್ಯಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT