ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಪುಷ್ಕರ: ಪುಣ್ಯ ನದಿಸ್ನಾನ ಇಂದಿನಿಂದ

ದೇಶದ ವಿವಿಧೆಡೆಯಿಂದ ಜನರು ಭಾಗಿಯಾಗುವ ನಿರೀಕ್ಷೆ
Last Updated 19 ನವೆಂಬರ್ 2020, 14:23 IST
ಅಕ್ಷರ ಗಾತ್ರ

ರಾಯಚೂರು: ತುಂಗಭದ್ರಾ ಪುಷ್ಕರ ಪುಣ್ಯಸ್ನಾನವು ನವೆಂಬರ್‌ 20 ರಿಂದ ಆರಂಭವಾಗಲಿದ್ದು, ಜಿಲ್ಲೆಯ ಸಿಂಧನೂರು ಮತ್ತು ಮಾನ್ವಿ ತಾಲ್ಲೂಕುಗಳಲ್ಲಿ ನದಿಪಕ್ಕದ ಪುಣ್ಯಕ್ಷೇತ್ರದ ಬಳಿ ಜನರು ಸ್ನಾನ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕೋವಿಡ್‌–19 ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ. ಹೀಗಾಗಿ ಜನದಟ್ಟಣೆ ಆಗದಂತೆ ಸ್ನಾನ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಸೂಚನೆ ನೀಡಲಾಗಿದೆ. ಸ್ನಾನಘಟ್ಟದ ಬದಲಾಗಿ ಸ್ನಾನಗೃಹಗಳನ್ನು ನಿರ್ಮಾಣ ಮಾಡುವಂತೆಯೂ ತಿಳಿಸಲಾಗಿದೆ. ಪಿಂಡ ಪ್ರದಾನ ಮಾಡುವುದು, ತರ್ಪಣ ಬಿಡುವುದಕ್ಕಾಗಿ ದೇಶದ ವಿವಿಧೆಡೆಯಿಂದ ಜನರು ಹರಿದು ಬರುವ ನಿರೀಕ್ಷೆ ಇದೆ.

ಸಿಂಧನೂರು ತಾಲ್ಲೂಕಿನ ದಢೇಸೂಗೂರು ಪಕ್ಕದ ತುಂಗಭದ್ರಾ ನದಿ ಶಿವದೇವಾಲಯ ಬಳಿ ತುಂಗಭದ್ರಾ ನದಿಯಲ್ಲಿ ಪುಷ್ಕರಸ್ನಾನಕ್ಕೆ ಅವಕಾಶ ಮಾಡಲಾಗಿದೆ. ಸ್ನಾನಘಟ್ಟ ನಿರ್ಮಾಣ ಮಾಡುವುದಕ್ಕೆ ಈ ಮೊದಲು ಯೋಜಿಸಲಾಗಿತ್ತು. ಆದರೆ, ಜನದಟ್ಟಣೆ ಆಗುವುದನ್ನು ತಪ್ಪಿಸುವುದಕ್ಕಾಗಿ ಈ ಯೋಜನೆ ಕೈಬಿಡಲಾಗಿದೆ. ಶಾಸಕ ವೆಂಕಟರಾವ್‌ ನಾಡಗೌಡ ಅವರ ನೇತೃತ್ವದಲ್ಲಿ ಈಚೆಗೆ ಸಭೆಯೊಂದನ್ನು ನಡೆಸಿ, ಪುಷ್ಕರದ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿತ್ತು. ಕೋವಿಡ್‌ ಮುನ್ನಚ್ಚೆರಿಕೆ ಅನುಸರಿಸಿಕೊಂಡು ಸರಳವಾಗಿ ನದಿಸ್ನಾನ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ವಿಜಯದಾಸರ ಕಟ್ಟೆಯ ಬಳಿ ತುಂಗಭದ್ರಾ ಪುಷ್ಕರ ಸ್ನಾನ ಮಾಡುವುದಕ್ಕೆ ಎಂದಿನಂತೆ ಭಕ್ತರು ಭಾಗವಹಿಸಲಿದ್ದಾರೆ. ಜನರು ನೇರವಾಗಿ ನದಿಗೆ ಇಳಿಯುವುದನ್ನು ತಪ್ಪಿಸುವುದಕ್ಕಾಗಿ ಸ್ನಾನಗೃಹಗಳನ್ನು ನಿರ್ಮಿಸಲಾಗಿದೆ. ಧಾರ್ಮಿಕ ವಿಧಿವಿಧಾನ ನೆರವೇರಿಸುವವರು ಮಾತ್ರ ನದಿಯತ್ತ ಹೋಗುವುದಕ್ಕೆ ಅವಕಾಶವಿದೆ ಎಂದು ತಿಳಿಸಲಾಗಿದೆ.

ಮಂತ್ರಾಲಯದಲ್ಲಿ ಪುಣ್ಯಸ್ನಾನ: ಮಂತ್ರಾಲಯದ ಬಳಿ ತುಂಗಭದ್ರಾ ಪುಷ್ಕರ ನಿಮಿತ್ತ ಪುಣ್ಯಸ್ನಾನ ಮಾಡುವುದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹರಿದು ಬರುವ ನಿರೀಕ್ಷೆ ಇದೆ.

ಕೋವಿಡ್‌–19 ಮುನ್ನಚ್ಚೆರಿಕೆ ಪಾಲನೆ ಮಾಡುವುದಕ್ಕೆ ಸಂಬಂಧಿಸಿದಂತೆ ಆಂಧ್ರದ ಪೊಲೀಸರು ಈಗಾಗಲೇ ನದಿ ಪಕ್ಕದಲ್ಲಿ ಹಲವು ಕ್ರಮ ಕೈಗೊಂಡಿದ್ದಾರೆ. ಏಕಕಾಲಕ್ಕೆ ಜನರು ನದಿಯೊಳಗೆ ಹೋಗುವುದನ್ನು ಅವಕಾಶವಿಲ್ಲ. ಸಣ್ಣ ಸಣ್ಣ ಗುಂಪುಗಳಲ್ಲಿ ಜನರನ್ನು ಸ್ನಾನಕ್ಕೆ ಬಿಡಲಾಗುತ್ತದೆ.

***

ತುಂಗಭದ್ರಾ ಪುತ್ಥಳಿ

ಮಂತ್ರಾಲಯ ಮಠಕ್ಕೆ ಹೊಂದಿಕೊಂಡು ಹರಿಯುವ ತುಂಗಭದ್ರಾ ನದಿ ಪಕ್ಕದಲ್ಲಿ ನೂತನವಾಗಿ ತುಂಗಭದ್ರಾ ಪುತ್ಥಳಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಪುಷ್ಕರ ಆರಂಭವಾಗುವ ದಿನ ಶುಕ್ರವಾರ ನೂತನ ಮೂರ್ತಿಯನ್ನು ಅನಾವರಣಗೊಳಿಸಿ, ವಿಶೇಷ ಪೂಜೆ ನೆರವೇರಿಸಲಿದ್ದಾರೆ.

ಮಠದಲ್ಲಿ ಭಕ್ತರಿಗೆ ವ್ಯವಸ್ಥೆ

ತುಂಗಭದ್ರಾ ಪುಷ್ಕರ ಸ್ನಾನದಲ್ಲಿ ಭಾಗವಹಿಸಲು ಬರುವ ಭಕ್ತರು ರಾಯರ ದರ್ಶನ ಮಾಡಿಕೊಳ್ಳುವುದಕ್ಕೆ ಸಕಲ ವ್ಯವಸ್ಥೆಯನ್ನು ಮಠದ ಆಡಳಿತ ಮಂಡಳಿ ಮಾಡಿಕೊಂಡಿದೆ.

ಮಠದ ಆವರಣದಲ್ಲಿ ಕಡ್ಡಾಯವಾಗಿ ಕೋವಿಡ್‌ ನಿಯಮ ಪಾಲನೆ ಮಾಡುವಂತೆ ಸೂಚಿಸಲಾಗುತ್ತಿದೆ. ರಾಯರ ದರ್ಶನ, ಅನ್ನಪ್ರಸಾದ ಹಾಗೂ ಪರಿಮಳ ಪ್ರಸಾದ ದೊರಕಿಸಲು ಪೂರ್ವ ತಯಾರಿ ಮಾಡಲಾಗಿದೆ. ‘ನದಿಸ್ನಾನಕ್ಕೆ ಬರುವ ಜನರನ್ನು ನಿಯಂತ್ರಿಸುವುದು ಕರ್ನೂಲ್‌ ಜಿಲ್ಲೆಯ ಪೊಲೀಸರಿಗೆ ಬಿಟ್ಟಿರುವ ಸಂಗತಿ. ಆದರೆ, ಮಠದ ಆವರಣದಲ್ಲಿ ಕೋವಿಡ್‌ ನಿಯಮ ಅನುಸರಿಸುವುದಕ್ಕೆ ಸಂಬಂಧಿಸಿ ಮಠದಿಂದ ವ್ಯವಸ್ಥೆ ಮಾಡಲಾಗಿದೆ’ ಎಂದು ಮಠದ ಮಾಧ್ಯಮ ಸಂಯೋಜಕ ಶ್ರೀನಿವಾಸರಾವ್‌ ಎಸ್‌.ಕೆ. ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT