ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ: ಎಲ್ಲೆಡೆ ಓಕಳಿ ಸಂಭ್ರಮ

Last Updated 4 ಏಪ್ರಿಲ್ 2022, 3:19 IST
ಅಕ್ಷರ ಗಾತ್ರ

ಮಸ್ಕಿ: ಯುಗಾದಿ ನಿಮಿತ್ತ ಪಟ್ಟಣದಲ್ಲಿ ನೂರಾರು ಯುವಕರು ಭಾನುವಾರ ಸಂಭ್ರಮದಿಂದ ಬಣ್ಣ ಎರಚಿಸುವ ಮೂಲಕ ಓಕಳಿ ಆಚರಿಸಿದರು.

ಪಟ್ಟಣದ ಭ್ರಮರಾಂಬಾ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಮಾಲಾರ್ಪಣೆ ಮಾಡುವ ಇದೇ ಪ್ರಥಮ ಬಾರಿಗೆ ಆಯೋಜನೆ ಮಾಡಿದ ಸಾಮೂಹಿಕ ಓಕಳಿಗೆ ಚಾಲನೆ ನೀಡಿದರು.

ಸಂಪೂರ್ಣ ಸ್ವದೇಶಿಯ ವಿವಿಧ ಬಗೆಯ ಬಣ್ಣಗಳನ್ನು ಪರಸ್ಪರ ಹಾಕುವ ಮೂಲಕ ಓಕಳಿ ನಡೆಸಲಾಯಿತು.

ಭ್ರಮರಾಂಬಾ ಮಲ್ಲಿಕಾರ್ಜುನ ದೇವಸ್ಥಾನದಿಂದ ಆರಂಭವಾದ ಓಕಳಿ ಮೆರವಣಿಗೆ ಹಳೆಯ ಬಸ್ ನಿಲ್ದಾಣ, ಅಶೋಕ ವೃತ್ತ, ಅಗಸಿ, ಮುಖ್ಯ ಬಜಾರ್, ದೈವದಕಟ್ಟೆ, ತೇರು ಬೀದಿ, ಕನಕವೃತ್ತ ಹಾಗೂ ವಾಲ್ಮೀಕಿ ವೃತ್ತದ ಮೂಲಕ ಸಾಗಿ ತುಂಗಭದ್ರಾ ಎಡದಂಡೆ ಕಾಲುವೆ ವರೆಗೆ ನಡೆಯಿತು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ‌ ನೂರಾರು ಯುವಕರು ಪರಸ್ಪರ ಬಣ್ಣ ಎರಚುವ ಮೂಲಕ ಯುಗಾದಿಯ ಹೊಸವರ್ಷ ಆಚರಿಸಿದರು.

ಮುಖಂಡ ಪ್ರಸನ್ನ ಪಾಟೀಲ್, ಶಿವಪ್ರಸಾದ ಕ್ಯಾತನಟ್ಟಿ, ರಾಕೇಶ ಪಾಟೀಲ್, ಅಭಿಜಿತ್ ಪಾಟೀಲ್, ಅಮರೇಶ ಬ್ಯಾಳಿ, ಶರಣಯ್ಯ ಸೊಪ್ಪಿಮಠ, ಮಹಾಂತೇಶ ಬ್ಯಾಳಿ ಸೇರಿದಂತೆ ಪುರಸಭೆ ಸದಸ್ಯರು,‌ ಮುಖಂಡರು ಪಾಲ್ಗೊಂಡಿದ್ದರು.

ಯುವಕರ ಸಡಗರ

ಮುದಗಲ್: ಸುತ್ತಲಿನ ಖೈರವಾಡಗಿ, ಆಶಿಹಾಳ, ಕನ್ನಾಪುರ ಹಟ್ಟಿ, ನಾಗರಾಳ, ಬಯ್ಯಾಪುರ, ಆಮದಿಹಾಳ, ಲಕ್ಕಿಹಾಳ ಸೇರಿದಂತೆ ವಿವಿಧ ಗ್ರಾಮದಲ್ಲಿ ಯುಗಾದಿ ಹಬ್ಬದ ಆಚರಣೆಯಲ್ಲಿ ಬಣ್ಣ ಹಚ್ಚುವುದರೊಂದಿಗೆ ಹಬ್ಬ ಆಚರಿಸಿದರು. ಯುವಕರು ಒಬ್ಬರಿಗೊಬ್ಬರು ಮುಖಕ್ಕೆ ಬಣ್ಣ ಹಚ್ಚುವ ಮೂಲಕ ಗ್ರಾಮೀಣ ಓಕಳಿ ಹಬ್ಬಕ್ಕೆ ಚಾಲನೆ ನೀಡಿದರು. ಬಾಲಕರು ಮನೆ ಮನೆಗೆ ತೆರಳಿ ಯುವಕರಿಗೆ ಬಣ್ಣ ಹಚ್ಚಿದರು.

ಗ್ರಾಮೀಣ ಭಾಗದಲ್ಲಿಯೂ ಸಂಭ್ರಮ

ಲಿಂಗಸುಗೂರು: ಯುಗಾದಿ ಹಬ್ಬದ ಪಾಡ್ಯದ ಮರುದಿನ ಭಾನುವಾರ ಕರಿ ಹಬ್ಬದೊಂದಿಗೆ ಪರಸ್ಪರ ಬಣ್ಣದ ಓಕಳಿ ಎರಚಿ ಸಂಭ್ರಮಿಸಿದ್ದು ಕಂಡುಬಂದಿತು.

ಪಟ್ಟಣ ಪ್ರದೇಶಗಳಲ್ಲಿ ಹೋಳಿ ಹುಣ್ಣಿಮೆಯಂದು ಬಣ್ಣ ಆಡುವುದು ವಾಡಿಕೆ. ಆದರೆ, ರೈತ ಸಮೂಹ ಯುಗಾದಿ ಹಬ್ಬವನ್ನು ಮೂರು ದಿನ ವಿಶೇಷವಾಗಿ ಆಚರಿಸುತ್ತಾರೆ. ಯುಗಾದಿ ಅಮವಾಸ್ಯೆ ಹೊಳಿಗೆ ಊಟ.
ಪಾಡ್ಯದ ದಿನ ಶ್ಯಾವಿಗೆ, ವಿವಿಧ ಹೆಚ್ಚಗಳಿಂದ ಸಿದ್ಧಪಡಿಸಿದ ಬೇವು ಸೇವನೆ, ಮೂರನೆ ದಿನ ಕರಿಯ ದಿನ ಪ್ರಕೃತಿ ಮಡಿಲಲ್ಲಿ ಸಿಕ್ಕ ಹೂ, ಗಿಡದ ಚೆಕ್ಕೆ, ಕಾಯಿ ಬಳಸಿ ಬಣ್ಣ ಸಿದ್ಧಗೊಳಿಸಿ ಬಳಸುವುದು ವಾಡಿಕೆ.

ತಾಲ್ಲೂಕಿನ ಈಚನಾಳ, ಆನೆ ಹೊಸೂರು, ಬೆಂಡೋಣಿ, ನರಕಲದಿನ್ನಿ, ಚಿತ್ತಾಪುರ, ರೋಡಲಬಂಡ, ಸುಣಕಲ್ಲ, ನೀರಲಕೇರಿ, ಉಪ್ಪೇರಿ, ನವಲಿ, ಮಾವಿನಭಾವಿ, ಕರಡಕಲ್ಲ, ಕಸಬಾಲಿಂಗಸುಗೂರು, ಗುಂತಗೋಳ, ಗುರುಗುಂಟಾ, ಯರಡೋಣ, ಹೊನ್ನಳ್ಳಿ ಸೇರಿದಂತೆ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಯುವಕರು, ಯುವತಿಯರು ಸೇರಿದಂತೆ ಮಹಿಳೆಯರು, ಪುಟ್ಟ ಮಕ್ಕಳು ಬಣ್ಣ ಪರಸ್ಪರ ಎರಚಿ ಸಂಭ್ರಮಿಸಿದರು.

ಹಟ್ಟಿಯಲ್ಲಿ ಸಂತಸ

ಹಟ್ಟಿ ಚಿನ್ನದಗಣಿ: ಹೋಳಿ ಹಬ್ಬವನ್ನು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಭ್ರಮದಿಂದ ಭಾನುವಾರ ಆಚರಿಸಲಾಯಿತು.

ಬೆಳಿಗ್ಗೆಯಿಂದಲೇ ಚಿಣ್ಣರು ಬಣ್ಣ ಹಚ್ಚಿಕೊಂಡು ವಿವಿದ ಬೀದಿಗಳಲ್ಲಿ ಸುತ್ತಾಡಿದರು. ಬಿಸಿಲಿನ ಕಾವು ಹೆಚಾಗುತ್ತಿದ್ದಷ್ಟೂ ಹೋಳಿ ಕಾವು ಹೆಚ್ಚಾಗುತ್ತಲೇ ಹೋಯಿತು. ಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಮ್ಮ ನಾಗರೇಡ್ಡಿ ಜೇರಬಂಡಿ ಹಾಗೂ ಮಹಿಳೆಯರು, ಮಕ್ಕಳು ಮನೆ ಮನೆಗೆ ತೆರಳಿ ಬಣ್ಣ ಹಚ್ಚಿ ಪರಸ್ಪರ ಶುಭಾಷಯ ಕೋರಿದರು.

ಮಹಿಳೆಯರು ಲಿಂಗವಧೂತ ದೇವಸ್ಧಾನದಲ್ಲಿ ಹಮ್ಮಿಕೊಂಡಿದ್ದ ಗಡಿಗೆ ಹೋಡೆಯುವ ಸ್ಫರ್ಧೆಯನ್ನು ಏರ್ಪಡಿಸಿದ್ದರು. ಮುಖ್ಯ ರಸ್ತೆ ಉದ್ದಕ್ಕೂ ಮಹಿಳೆಯರು ಬಣ್ಣ ಎರಚುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಜೋಕಾಲಿ ಆಡುವುದು, ಹಾಡು ಸೇರಿದಂತೆ ಸಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರು. ಇನ್ನೂ ಕೆಲ ಯುವಕರು ಬೈಕ್ ರ್‍ಯಾಲಿ ಮಾಡುವ ಮೂಲಕ ಹಬ್ಬಕ್ಕೆ ಮೇರಗು ತಂದು ಕೊಟ್ಟರು.

ಹಟ್ಟಿ ಪಟ್ಟಣದ ಮುಖ್ಯರಸ್ತೆ ಸೇರಿದಂತೆ ಒಳರಸ್ತೆಗಳೆಲ್ಲ ಬಣ್ಣದಿಂದ ಕೂಡಿತ್ತು, ಮಹಿಳೆಯರು ಮಕ್ಕಳು ಯುವಕರು , ಸೇರಿದಂತೆ ಬಣ್ಣ ಎರಚುಮ ಮೂಲಕ ಸಂತಸಪಟ್ಟರು.

ರಂಗನಾಥ ಮುಂಡರಗಿ ಮೌನೇಶ ಗಲಗ, ಎಂಸಿ ಚಂದ್ರಶೇಖರ ನಾಯಕ, ಯಂಕೋಬ ಯತಗಲ್, ಅಮರೇಶ, ಮಲ್ಲಿಕಾರ್ಜುನ, ಸಾಬಣ್ಣ ಮುಂಡರಗಿ ನಿಂಗಪ್ಪ ಮುಂಡರಗಿ ಶಿವು, ದೇವರಾಜ ಊಟಿ, ಕೃಷ್ಣ ಮಡಿವಾಳ,
ವೀರನಗೌಡ ಕರಿಗುಡ್ಡ, ಆಂಜಿನಯ್ಯ ಸರ್ಜಾಪೂರ ಮೌನೇಶ ಸೇರಿದಂತೆ ಯಂಕೋಬ ಪವಾಡೆ, ರಮೇಶ ಉಳಿಮೇಶ್ವರ, ಶಿವು, ಗೋವಿಂದ್ ನಾಯಕ ಇದ್ದರು.

ಬೇವು–ಬೆಲ್ಲದ ಸವಿ

ಸಿರವಾರ: ಯುಗಾದಿ ಹಬ್ಬವನ್ನು ಶನಿವಾರ ಬೇವು ಬೆಲ್ಲ ಸೇವಿಸುವ ಮೂಲಕ ಹೊಸ ವರ್ಷವನ್ನು ಸಡಗರ ಸಂಭ್ರಮದಿಂದ ಸ್ವಾಗತಿಸಲಾಯಿತು.

ಹಬ್ಬಕ್ಕೆ ಮಕ್ಕಳಿಂದ ಹಿಡಿದು ದೊಡ್ಡವರು ಹೊಸ ಬಟ್ಟೆ ಹಾಕಿಕೊಂಡು ಹೋಳಿಗೆ ಊಟ, ಮುಂದಿನ ವರ್ಷವಿಡಿ ಎಲ್ಲಾ ರೀತಿ ಸುಖ ದುಃಖಗಳನ್ನು ಸಮಾನಾಗಿ ಸ್ವೀಕರಿಸೋಣ ಎಂದು ಪ್ರಾರ್ಥಿಸಿದರು.

ಎಲ್ಲಾ ವಿಧದ ಹಣ್ಣುಗಳು, ಬೇವಿನ ಹೂ, ಬೆಲ್ಲ ಸೇರಿಸಿ ಬೇವು ಮಾಡಿ ಮನೆಯಲ್ಲರೂ ಜೊತೆಗೆ ಇತರರನ್ನು ಮನೆಗೆ ಕರೆದು ಬೇವು ಕುಡಿಸಿ ಹಬ್ಬ ಆಚರಿಸಲಾಯಿತು. ಹಬ್ಬದ ಮರುದಿನ ಭಾನುವಾರ ಒಬ್ಬರಿಗೊಬ್ಬರೂ ಬಣ್ಣ ಎರಚಿ ಬಣ್ಣದಾಟ ಆಡುವ ಮೂಲಕ ಹೋಳಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT