ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ಕನಸಾಗಿ ಉಳಿದ ಒಳಚರಂಡಿ ಯೋಜನೆ

₹ 61 ಕೋಟಿ ಖರ್ಚಾದರೂ ಪೂರ್ಣಗೊಳ್ಳದ ಕಾಮಗಾರಿ: ಆರೋಪ
Last Updated 30 ಜುಲೈ 2021, 6:25 IST
ಅಕ್ಷರ ಗಾತ್ರ

ಸಿಂಧನೂರು: ಸಿಂಧನೂರಿನ ಮಹತ್ವ ಕಾಂಕ್ಷೆಯ ಒಳಚರಂಡಿ ಯೋಜನೆ 2015ರಲ್ಲಿ ಪ್ರಾರಂಭಗೊಂಡು 2017ಕ್ಕೆ ಮುಕ್ತಾಯವಾಗಬೇಕಾಗಿತ್ತು. ಆದರೆ 2021ನೇ ವರ್ಷ ಅರ್ಧ ಗತಿಸಿದರೂ ಇನ್ನೂ ಒಳಚರಂಡಿ ಕಾಮಗಾರಿ ಅಪೂರ್ಣವಾಗಿಯೇ ಉಳಿದಿದೆ.

‘2004ರಲ್ಲಿ ಕೆ.ವಿರೂಪಾಕ್ಷಪ್ಪ ಮತ್ತು ಹಂಪನಗೌಡ ಬಾದರ್ಲಿ ಏಕಾಕಾಲಕ್ಕೆ ಒಬ್ಬರು ಲೋಕಸಭೆಗೆ ಮತ್ತೊಬ್ಬರು ವಿಧಾನಸಭೆಗೆ ಆಯ್ಕೆಯಾದ ಸಮಯದಲ್ಲಿ ಈ ಯೋಜನೆಗೆ ‘ಏಷಿಯನ್ ಅಭಿವೃದ್ಧಿ ಬ್ಯಾಂಕ್’ ಸಾಲ ಕೊಡಲು ಒಪ್ಪಿದ ಹಿನ್ನೆಲೆಯಲ್ಲಿ ‘ಉತ್ತರ ಕರ್ನಾಟಕ ಬಂಡವಾಳ ಹೂಡಿಕೆ ಯೋಜನೆಯಡಿಯಲ್ಲಿ ಕೆಯುಐಡಿಎಫ್‍ಸಿ’ಯಿಂದ ಕಾಮಗಾರಿ ಪ್ರಾರಂಭವಾಗಿತ್ತು.

₹ 61.19 ಕೋಟಿ ವೆಚ್ಚದ ಈ ಯೋಜನೆಯನ್ನು 24 ತಿಂಗಳಲ್ಲಿ ಮುಗಿಸಿಕೊಡುವ ಷರತ್ತು ವಿಧಿಸಿ ಗುಜರಾತಿನ ಯುಪಿಎಲ್ ಕಂಪನಿಗೆ ಗುತ್ತಿಗೆ ಕೊಡಲಾಗಿತ್ತು. ಒಳಚರಂಡಿ ಕಾಮಗಾರಿ ನಡೆದ ಸಂದರ್ಭದಲ್ಲಿ ಮ್ಯಾನ್ ಹೋಲ್‍ಗಳನ್ನು ಅತ್ಯಂತ ಕಳಪೆಯಾಗಿ ಕಟ್ಟುತ್ತಿದ್ದಾರೆ ಎಂದು ಹಲವಾರು ಕಡೆಗಳಲ್ಲಿ ಸಾರ್ವಜನಿಕರೇ ವಿರೋಧಿಸಿದ್ದರಿಂದ ಕಳಪೆಯಾಗಿ ಕಟ್ಟಿದ ಮ್ಯಾನ್ ಹೋಲ್‍ಗಳನ್ನು ಕೆಡವಿ ಪುನರ್ ಕಟ್ಟಿದ ಊದಾಹರಣೆಗಳು ಹಲವಾರು ಇವೆ.

’ಮಧ್ಯದಲ್ಲಿ ಸುಮಾರು ಒಂದು ವರ್ಷ ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದರು. ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ನಂತರ ಕಾಮಗಾರಿ ಆರಂಭಿಸಿದ್ದರಾದರೂ ಇನ್ನೂ ಕೆಲಸ ಅಪೂರ್ಣವಾಗಿಯೇ ಉಳಿದಿದೆ.

111.67 ಕಿ.ಮೀ ಪೈಪ್‍ಲೈನ್ ಹಾಕಬೇಕಾಗಿದ್ದರಲ್ಲಿ 111.20 ಕಿ.ಮೀ ಹಾಕಲಾಗಿದೆ. 4,238 ಮ್ಯಾನ್ ಹೋಲ್ ನಿರ್ಮಾಣ ಮಾಡಬೇಕಾಗಿದ್ದರಲ್ಲಿ 4,222 ಮ್ಯಾನ್ ಹೋಲ್ ನಿರ್ಮಿಸಲಾಗಿದೆ. ಶೇ 90 ರಷ್ಟು ಕೆಲಸ ಮುಗಿದಿದೆ’ ಎಂದು ಕೆಯುಐಡಿಎಫ್‍ಸಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರೀಶ್ ನಾಯಕ ತಿಳಿಸಿದ್ದಾರೆ.

ಲೋಕಾಯುಕ್ತ ತನಿಖೆ: ಯುಜಿಡಿ ಕಾಮಗಾರಿಯ ಕಳಪೆ ಮತ್ತು ಅವೈಜ್ಞಾನಿಕ ನಿರ್ಮಾಣದ ಬಗ್ಗೆ ಸಮಾಜ ಸೇವಕ ಬಿ.ಎನ್.ಯರದಿಹಾಳ ಲೋಕಾಯುಕ್ತರಿಗೆ ದೂರು ನೀಡಿದ್ದು ಇತ್ತೀಚಿಗೆ ತಾಂತ್ರಿಕ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ನಿರಂಜನ್ ಭೇಟಿ ನೀಡಿ ಕಾಮಕಾರಿ ವೀಕ್ಷಿಸಿದ್ದಾರೆ.

‘ಇನ್ನು ಪೊಲೀಸ್ ಕಚೇರಿಯ ಮುಂಭಾಗದಿಂದ ಹಳ್ಳದವರೆಗೆ ಪೈಪ್‍ಲೈನ್ ಕಾಮಗಾರಿ ನಡೆದಿಲ್ಲ. ರೀಸಿವಿಂಗ್ ಚೇಂಬರ್ ಹಾಕಿಲ್ಲ. ವಾಸವಿ ನಗರದಲ್ಲಿ ಯುಜಿಡಿ ಲೈನ್ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕೋಟೆಯಲ್ಲಿಯೂ ಒಂದೆರಡು ಕಡೆಯಲ್ಲಿ ಅಪೂರ್ಣವಾಗಿ ಉಳಿದಿದೆ. ಪಿಡಬ್ಲ್ಯುಡಿ ಕ್ಯಾಂಪಿನಲ್ಲಿ ಯಲ್ಲಮ್ಮ ದೇವಸ್ಥಾನದಿಂದ ಪೆಟ್ರೋಲ್ ಬಂಕ್ ವರೆಗೆ ಹಾಕಿದ ಪೈಪ್‍ಲೈನ್ ಒಡೆದು ಹೋಗಿದೆ. ಮನೆಗಳಿಗೆ ಕಲೆಕ್ಷನ್ ಕೊಟ್ಟಿರುವುದಿಲ್ಲ. ಸಂಸ್ಕರಣ ಘಟಕವು ಸಹ ಅರ್ಧಮರ್ಧವಾಗಿಯೇ ಉಳಿದಿದೆ. ಪ್ರಾಯೋಗಿಕವಾಗಿ ಪರೀಕ್ಷೆ ಮಾಡಿದಾಗಲೇ ಯೋಜನೆಯ ಯಶಸ್ಸು ಮತ್ತು ಅಪಯಶಸ್ಸು ಗೊತ್ತಾಗುತ್ತದೆ’ ಎನ್ನುವುದು ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಅವರ ಅನಿಸಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT