ಮಂಗಳವಾರ, ಜನವರಿ 28, 2020
18 °C
ಎಐಡಿವೈಒ ತೃತ್ವದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಐಟಿಐ ಆನ್‌ಲೈನ್ ಪರೀಕ್ಷೆ: ಕೈಬಿಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ತರಬೇತುದಾರರಿಗೆ ಆನ್‌ಲೈನ್ ಪರೀಕ್ಷಾ ಪದ್ಧತಿಯನ್ನು ಕೂಡಲೇ ರದ್ದುಪಡಿಸಬೇಕು. ಪರೀಕ್ಷಾ ಶುಲ್ಕ ಹೆಚ್ಚಳವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಆಲ್‌ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೆಷನ್(ಎಐಡಿವೈಒ) ಜಿಲ್ಲಾ ಘಟಕದಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಕರ್ನಾಟಕ ಸಂಘದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ರ‍್ಯಾಲಿ ನಡೆಸಿದರು. ಆನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಐಟಿಐ ಪರೀಕ್ಷೆಗೆ ಜಿಎಸ್‌ಟಿ ವಿಧಿಸಿರುವ ಕ್ರಮ ಖಂಡನೀಯ. ಆನ್‌ಲೈನ್ ಪರಿಕ್ಷಾ ಪದ್ಧತಿಯು ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದೆ ಎಂದು ದೂರಿದರು.

 ಬಹುತೇಕ ಗ್ರಾಮಾಂತರ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ನೀಡಲು ಸರ್ಕಾರಕ್ಕೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಆನ್‌ಲೈನ್ ಪರೀಕ್ಷೆಗೆ ಸಜ್ಜುಗೊಳಿಸುವ ಮೂಲ ಸೌಕರ್ಯಗಳನ್ನು ಸರ್ಕಾರ ಒದಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಬಡ, ಹಿಂದುಳಿದ ದುರ್ಬಲ ಕುಟುಂಬಗಳಿಂದ ಬರುವ ಐಟಿಐ ತರಬೇತಿದಾರರಿಗೆ ಈ ಪರೀಕ್ಷಾ ಶುಲ್ಕ ತುಂಬಾ ಹೊರೆಯಾಗಿದೆ. ಆನ್‌ಲೈನ್ ಪರೀಕ್ಷಾ ಪದ್ಧತಿಯನ್ನು ರದ್ದುಪಡಿಸಬೇಕು ಹಾಗೂ ಪರೀಕ್ಷಾ ಶುಲ್ಕ ಹೆಚ್ಚಳವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಎಐಡಿವೈಒ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವ ಜಾನೇಕಲ್, ಮುಖಂಡರಾದ ಮಹೇಶ ಚೀಕಲಪರ್ವಿ, ಜಂಟಿ ಕಾರ್ಯದರ್ಶಿ ವಿನೋದ್, ಜಿಲ್ಲಾ ಸಮಿತಿ ಸದಸ್ಯರಾದ ಕೃಷ್ಣ ಮನ್ಸಲಾಪುರ, ವಿವಿಧ ಐಟಿಐ ತರಬೇತಿ ಸಂಸ್ಥೆಗಳ ವಿದ್ಯಾರ್ಥಿಗಳಾದ ನಾಗೇಶ್, ಮಲ್ಲಿಕಾರ್ಜುನ, ವಿನಯ್, ನಾಗರಾಜ, ಅಬ್ದುಲ್ ಹಮೀದ್, ಫಾತಿಮಾ, ಈರಮ್ಮ, ಸಂಜೀವ್, ವಿನೋದ್, ಅಥರ್ವ, ಚನ್ನವೀರ ನರಸಿಂಹ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು