ಶನಿವಾರ, ಏಪ್ರಿಲ್ 1, 2023
23 °C

ಅನಧಿಕೃತ 30 ಬಡಾವಣೆಗಳ ಖಾತಾ ತಡೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದಲ್ಲಿ 30 ಅನಧಿಕೃತ ಬಡಾವಣೆಗಳಿದ್ದು, ಅಲ್ಲಿ ನಿರ್ಮಾಣವಾಗಿರುವ ಕಟ್ಟಡಗಳ ಪರವಾನಿಗೆಗಳನ್ನು ರದ್ದುಗೊಳಿಸಬೇಕು. ನಗರಸಭೆಯಿಂದ ಖಾತಾ ನೀಡುವುದನ್ನು ಸ್ಥಗಿತಗೊಳಿಸಬೇಕು ಎಂದು ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಎಂ.ವಿರೂಪಾಕ್ಷಿ ಆಗ್ರಹಿಸಿದರು.‌

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತವಾಗಿ ಭೂ ಪರಿವರ್ತನೆ ಆಗಿರುವುದನ್ನು ಮುನ್ಸಿಪಲ್‌ ದಾಖಲೆಯಲ್ಲಿ ನಮೂದಿಸಿ 30 ಬಡಾವಣೆಗಳಿಗೆ ಅನುಮತಿ ನೀಡಲಾಗಿದೆ. ಈ ಬಗ್ಗೆ 2003 ರಲ್ಲಿಯೇ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದೆ. ಈ ಬಗ್ಗೆ ಉಪಲೋಕಾಯುಕ್ತರು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ಆಧರಿಸಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರು ಜಿಲ್ಲಾಧಿಕಾರಿಗೆ ಈಗಾಗಲೇ ಪತ್ರ ಬರೆದಿದ್ದು, ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ ಎಂದರು.

ಅಂದು ನಗರಸಭೆ ಪೌರಾಯುಕ್ತರಾಗಿದ್ದವರ ವಿರುದ್ಧ 15 ದಿನಗಳೊಳಗೆ ಕ್ರಮ ಕೈಗೊಳ್ಳುವುದಕ್ಕೆ ತಿಳಿಸಲಾಗಿದೆ. ನಿವೃತ್ತ ಪೌರಾಯುಕ್ತರಾದ ಅಬ್ದುಲ್ ರಸೂಲ್‌, ಬಿ.ಸಂಗಪ್ಪ, ಜಿ.ರಾಮದಾಸ್‌, ಕಂದಾಯ ಅಧಿಕಾರಿಗಳಾದ ಮಹಿಬೂಬ ಅಲಿ, ಪದ್ಮಾ, ಪೌರಾಯುಕ್ತ ದಶವಂತ, ಇಕ್ಬಾಲ್‌, ಶ್ರೀನಿವಾಸ, ಬಸವರಾಜ, ರಸೂಲಸಾಬ್‌, ಮೊಹ್ಮದ್‌ ಮುನೀರ್‌ ಅಹ್ಮದ್‌, ಪವನಕುಮಾರ್‌, ಬಿ.ಟಿ.ಪಾಟೀಲ, ಮಲ್ಲಿಕಾರ್ಜುನ, ಗುರುರಾಜ, ಎಂ.ಎ.ಖಯಾಬ್‌ ಅವರ ವಿರುದ್ಧ ಇಲಾಖೆ ವಿಚಾರಣೆ ನಡೆಸಿ ಆರ್ಥಿಕ ನಷ್ಟ ಮೊತ್ತ ವಸೂಲಾತಿಗೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಾಣವಾಗಿರುವ ಕಟ್ಟಡಗಳ ಪರವಾನಿಗೆ ರದ್ದುಗೊಳಿಸೇಕು. ಹೊಸದಾಗಿ ಕಟ್ಟಡಗಳ ಪರವಾನಿಗೆ ನೀಡುವುದನ್ನು ತಡೆಯಬೇಕು. ನಗರಸಭೆಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ಒಟ್ಟು 13 ದೂರುಗಳನ್ನು ಸಲ್ಲಿಸಲಾಗಿತ್ತು. ದಿ.ಎಂ. ವೀರಣ್ಣ ಅವರ ಕಾಲದಲ್ಲಿ ನಡೆದ ₹ 33 ಕೋಟಿ ಹಗರಣದ ತನಿಖೆಯನ್ನು ಲೋಕಾಯುಕ್ತರು ಪ್ರಾರಂಭಿಸಿದ್ದಾರೆ ಎಂದರು.

ನಗರಸಭೆಯಲ್ಲಿ ಅವ್ಯವಹಾರ: ರಾಯಚೂರು ಹಬ್‌ ಕಟ್ಟಡಕ್ಕೆ ಸಂಬಂಧಿಸಿದಂತೆ ಹಾಲಿ ಅಧ್ಯಕ್ಷ, ಉಪಾಧ್ಯಕ್ಷರ ಮಧ್ಯೆ ವಾಗ್ವಾದಗಳು ನಡೆಯುತ್ತಿವೆ. ವಾಸ್ತವದಲ್ಲಿ ನಿಯಮ ಉಲ್ಲಂಘಿಸಿ ಹಬ್‌ ಕಟ್ಟಡ ಕಟ್ಟಿದ್ದು, ಅವ್ಯವಹಾರ ನಡೆದಿದೆ. ಬೀದಿ ದೀಪಗಳ ನಿರ್ವಹಣೆಗೆ ನಿಯಮ ಉಲ್ಲಂಘಿಸಿ ₹ 51 ಲಕ್ಷ ನೀಡಿರುವುದು ಕೂಡಾ ಅಕ್ರಮವಾಗಿದೆ ಎಂದು ಎಂ.ವಿರೂಪಾಕ್ಷಿ ಹೇಳಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಎನ್‌.ಶಿವಶಂಕರ್‌, ಜಿಲ್ಲಾ ಪ್ರಧಾನಕಾರ್ಯದರ್ಶಿ ರಾಮಕೃಷ್ಣ, ಎಸ್‌ಸಿ/ಎಸ್‌ಟಿ ನಗರ ಘಟಕದ ಅಧ್ಯಕ್ಷ ವಿಶ್ವನಾಥ ಪಟ್ಟಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.