ಭಾನುವಾರ, ಸೆಪ್ಟೆಂಬರ್ 19, 2021
28 °C
ನಗರೇಶ್ವರ ದೇವಸ್ಥಾನದಲ್ಲಿ ಭಕ್ತಿಭಾವದೊಂದಿಗೆ ಚಿನ್ನದ ರಥೋತ್ಸವ

ಸಂಭ್ರಮ, ಸಡಗರದ ವಾಸವಿ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ವಾಸವಿದೇವಿಯ ಜಯಂತ್ಯುತ್ಸವವನ್ನು ಸಂಭ್ರಮ, ಸಡಗರ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಂಗಳವಾರ ನೆರವೇರಿಸಲಾಯಿತು.

ಅಮ್ಮನ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ದೇವಿಗೆ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ ಬಳಿಕ ಹೋಮ ನೆರವೇರಿಸಲಾಯಿತು. ಮಹಾಮಂಗಳಾರತಿ ಬಳಿಕ ದೇವಸ್ಥಾನ ಪ್ರಾಂಗಣದಲ್ಲಿ ಅದ್ಧೂರಿಯಾಗಿ ಚಿನ್ನದ ರಥೋತ್ಸವ ನಡೆಯಿತು. ವಾಸವಿ ದೇವಿ ಮೂರ್ತಿಯನ್ನು ವಿಶೇಷ ಫಲ, ಪುಷ್ಪಗಳಿಂದ ಶೃಂಗರಿಸಲಾಗಿತ್ತು.

ದೇವಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ನಗರದ ವಿವಿಧೆಡೆ ಮೆರವಣಿಗೆ ನಡೆಸಲಾಯಿತು. ನಗರೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿ ತಿನ್ ಕಂದಿಲ್, ಮಹಾವೀರ್ ವೃತ್ತ, ಚಂದ್ರಮೌಳೇಶ್ವರ ವೃತ್ತ, ಪಟೇಲ್ ವೃತ್ತದ ಮಾರ್ಗವಾಗಿ ಪುನಃ ದೇವಸ್ಥಾನಕ್ಕೆ ಬಂದು ತಲುಪಿತು. ವಿವಿಧ ಜಾನಪದ ಕಲಾ ತಂಡಗಳು, ವಾದ್ಯ ತಂಡಗಳು ಮೆರವಣಿಯುದ್ದಕ್ಕೂ ಗಮನ ಸೆಳೆದವು.

ದೇವಸ್ಥಾನದಲ್ಲಿ ನಡೆದ ವಾಸವಿ ಹೋಮದಲ್ಲಿ ನೂರಾರು ಮಹಿಳೆಯರು, ಸಮಾಜದ ಮುಖಂಡರು ಪಾಲ್ಗೊಂಡು ವಾಸವಿ ದೇವಿಯ ಆರಾಧನೆ ಮಾಡಿದರು.

ವಾಸವಿ ಜಯಂತ್ಯುತ್ಸವ ನಿಮಿತ್ತವಾಗಿ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಐದು ದಿನಗಳಿಂದ ದಾರ್ಮಿಕ ಕಾರ್ಯಕ್ರಮಗಳನ್ನು ಆರ್ಯವೈಶ್ಯ ಸಮಾಜದಿಂದ ಹಮ್ಮಿಕೊಳ್ಳಲಾಗಿತ್ತು. ನಗರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕೊಂಡಾ ಕೃಷ್ಣಾ ಮೂರ್ತಿ ಸೇರಿದಂತೆ ಸಮಾಜದ ಮುಖಂಡರೆಲ್ಲರೂ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಉತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆಯಿಂದ ಸಂಜೆವರೆಗೂ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನೆರವೇರಿದವು. ಆನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು