ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಮನ್ನಾ: ನ.12 ರಂದು ರೈತರಿಂದ ವಿಧಾನಸೌಧಕ್ಕೆ ಮುತ್ತಿಗೆ

Last Updated 13 ಅಕ್ಟೋಬರ್ 2018, 14:38 IST
ಅಕ್ಷರ ಗಾತ್ರ

ರಾಯಚೂರು:ಚುನಾವಣೆ ಪೂರ್ವ ರೈತರಲ್ಲಿ ಸಾಲಮನ್ನಾ ಭರವಸೆ ಹುಟ್ಟಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾತು ತಪ್ಪುತ್ತಿದ್ದಾರೆ. ಸಾಲಮನ್ನಾ ಮಾಡುವುದಕ್ಕೆ ಅವರೇ ಗಡುವು ಹಾಕಿಕೊಳ್ಳುತ್ತಾ ಹೋಗುತ್ತಿದ್ದು, ರೈತ ಸಮುದಾಯವನ್ನು ಗೊಂದಲದಲ್ಲಿ ಮುಳುಗಿಸಿದ್ದಾರೆ. ಸರ್ಕಾರದ ಈ ನೀತಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಸ್ವರಾಜ್‌ ಇಂಡಿಯಾ ಪಕ್ಷದಿಂದನವೆಂಬರ್‌ 12 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರೈತಪರ ಚಿಂತಕ ಚಾಮರಸ ಮಾಲಿಪಾಟೀಲ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್‌ 1 ಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಾಲಮನ್ನಾ ಹಣ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಆದರೆ, ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಪಡೆದ ರೈತರ ವಿವರ ನೀಡುತ್ತಿಲ್ಲ, ಈ ವಿಚಾರದಲ್ಲಿ ಬಿಜೆಪಿ ನಾಯಕರು ರೈತರ ನೆರವಿಗೆ ಬರಬೇಕು ಎಂದು ಮರುದಿನ ಹೇಳಿದ್ದಾರೆ. ಸಾಲ ಪಡೆದ ರೈತರ ಪಟ್ಟಿಯಿಲ್ಲದೆ ಹಣ ಬಿಡುಗಡೆ ಮಾಡುತ್ತೇನೆ ಎಂದು ಯಾವ ಆಧಾರದಲ್ಲಿ ಮುಖ್ಯಮಂತ್ರಿ ಹೇಳಿದರು ಎನ್ನುವ ಪ್ರಶ್ನೆ ಮೂಡುತ್ತದೆ. ಸಾಲಮನ್ನಾ ಮಾಡುವುದಕ್ಕೆ ಬಿಜೆಪಿ ಬಿಡುತ್ತಿಲ್ಲ ಎಂದು ಪರೋಕ್ಷವಾಗಿ ಆರೋಪ ಮಾಡುವ ಕೆಲಸವನ್ನು ಮುಖ್ಯಮಂತ್ರಿ ಮಾಡಿದ್ದಾರೆ ಎಂದು ತಿಳಿಸಿದರು.

ರೈತರ ಸಾಲಮನ್ನಾ ವಿಚಾರದಲ್ಲಿ ಯಾವುದೇ ಪಕ್ಷವು ರಾಜಕೀಯ ಮಾಡಬಾರದು ಎನ್ನುವ ಒತ್ತಾಯವನ್ನು ರೈತ ಸಂಘವು ಮಾಡುತ್ತದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ರೈತ ಮುಖಂಡರ ಸಭೆ ಕರೆಯಬೇಕು. ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಬೇಕು. ರೈತರಿಂದ ಸಲಹೆಗಳನ್ನು ಪಡೆದುಕೊಳ್ಳಬೇಕು. ಸಾಲಮನ್ನಾ ನೀತಿ ಸಂಪೂರ್ಣ ಸಿದ್ಧವಾಗಿದ್ದು 15 ದಿನ ಸಮಯ ಕೊಡಿ ಎಂದು ಈ ಮೊದಲು ನಡೆಸಿದ ಸಭೆಯಲ್ಲಿ ಕೇಳಿಕೊಂಡಿದ್ದ ಮುಖ್ಯಮಂತ್ರಿ, ಎರಡು ತಿಂಗಳಾದರೂ ಸ್ಪಷ್ಟ ಚಿತ್ರಣ ಕೊಡುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ರೈತರು ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

ನಿಷ್ಕ್ರೀಯ ಸರ್ಕಾರ

ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ) ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ ಎನ್ನುವ ರೈತರ ಸಮಸ್ಯೆಯನ್ನು ನೀರಾವರಿ ಸಚಿವ ಡಿ.ಕೆ. ಶಿವಕುಮಾರ್‌ ಕಣ್ಣಾರೆ ನೋಡಿಕೊಂಡು ಹೋಗಿದ್ದಾರೆ. ಆದರೂ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಿಲ್ಲ. ನೀರಾವರಿ ವಿಚಾರದಲ್ಲಿ ಸರ್ಕಾರ ನಿಷ್ಕ್ರೀಯವಾಗಿದೆ ಎಂದು ಆರೋಪಿಸಿದರು.

ನೀರಾವರಿ ಭಾಗದ ಜಮೀನುಗಳ ರೈತರಿಗೆ ಮಾನ್ವಿ ತಾಲ್ಲೂಕು ತಹಶೀಲ್ದಾರ್‌ರು ಬೆಳೆಹಾನಿ ಪರಿಹಾರ ಅರ್ಜಿ ನಮೂನೆ ನೀಡದಿರುವುದು ತಪ್ಪು. ಸಿರವಾರ ಭಾಗದಲ್ಲಿ ಒಂದು ಲಕ್ಷಕ್ಕಿಂತ ಅಧಿಕ ಹೆಕ್ಟೇರ್‌ ಜಮೀನಿನ ಬೆಳೆ ನೀರಿಲ್ಲದೆ ಹಾನಿಯಾಗಿದೆ. ಕಾಲುವೆ ಕೊನೆಭಾಗಕ್ಕೆ ನೀರು ಬಂದಿಲ್ಲ. ವಾಸ್ತವ ಗೊತ್ತಿದ್ದರೂ ಅರ್ಜಿ ತುಂಬಿಸಿಕೊಳ್ಳದಿರುವುದು ಖಂಡನೀಯ. ಈ ಕೂಡಲೇ ತಹಶೀಲ್ದಾರ್‌ ಅವರು ನಿಲುವು ಬದಲಿಸಿಕೊಂಡು ಬೆಳೆಹಾನಿಯಾದ ಎಲ್ಲ ರೈತರಿಗೂ ಅರ್ಜಿ ನಮೂನೆ ನೀಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಅಮರಣ್ಣ ಗುಡಿಹಾಳ, ಲಕ್ಷ್ಮಣಗೌಡ ಕಡ್ಗಂದೊಡ್ಡಿ,ಜಯಪ್ಪಸ್ವಾಮಿ, ನಾಗರತ್ನಮ್ಮಾ, ಚಂದ್ರಕಲಾ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT