ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ: ಕುಡಿಯುವ ನೀರಿಗೆ ತತ್ವಾರ

ನೀರು ಸರಬರಾಜು ಮಾಡುವಲ್ಲಿ ಪದೇ ಪದೇ ವ್ಯತ್ಯಯ; ದೂರುಗಳಿಗೆ ಸಿಗದ ಸ್ಪಂದನೆ
Last Updated 9 ಮಾರ್ಚ್ 2022, 7:26 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ ನಂತರ ಸರ್ಕಾರದಿಂದ ನಗರೋತ್ಥಾನ ಮತ್ತು ವಿಶೇಷ ಯೋಜನೆ ಮೂಲಕ ಕೋಟ್ಯಂತರ ರೂಪಾಯಿ ಅನುದಾನ ಬಂದರೂ ಇಲ್ಲಿನ ಜನರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ.

ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಬೃಹತ್‍ ಕೆರೆ ನಿರ್ಮಿಸಿದ್ದರೂ ಇಲ್ಲಿನ 3 ಮತ್ತು 4ನೇ ವಾರ್ಡ್‌ಗಳಿಗೆ ನೀರು ಪೂರೈಸುವಲ್ಲಿ ಪದೇ ಪದೇ ವ್ಯತ್ಯಯ ಉಂಟಾಗುತ್ತಿದೆ. ಹೀಗಾಗಿ ಅಲ್ಲಿನ ನಿವಾಸಿಗಳು ನೀರಿಗಾಗಿ ಪರಿತಪಿಸುವುದು ತಪ್ಪಿಲ್ಲ.

3 ಮತ್ತು 4ನೇ ವಾರ್ಡ್‌ಗಳಲ್ಲಿ ಉದಯ ನಗರ ಸೇರಿದಂತೆ ಅನೇಕ ಕಡೆ ಕುಡಿಯುವ ನೀರಿನ ಪೈಪ್‍ ಲೈನ್ ಅಳವಡಿಕೆಯಾಗಿದ್ದರೂ ಸರಿಯಗಿ ನೀರು ಬರುತ್ತಿಲ್ಲ. ಎರಡು ದಿನಗಳಿಗೊಮ್ಮೆ ನೀರು ಬಿಡುತ್ತಿದ್ದಾರೆ ಎನ್ನುವ ದೂರುಗಳು ಕೇಳಿ ಬರುತ್ತಿವೆ.

‘25- 30 ವರ್ಷಗಳ ಹಿಂದೆ ನಿರ್ಮಿಸಿದ ನೀರಿನ ಟ್ಯಾಂಕ್‍ ನ ಸಂಗ್ರಹ ಸಾಮರ್ಥ್ಯ ಕಡಿಮೆ ಇರುವುದೇ ಸಮಸ್ಯೆಗೆ ಮೂಲ ಕಾರಣ. ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ 5 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್‍ ನಿರ್ಮಿಸಿದರೆ ನೀರಿನ ಸಮಸ್ಯೆ ನೀಗಿಸಲು ಸಾಧ್ಯ. ಕುಡಿಯುವ ನೀರು ಪೂರೈಸಲು ಸಮೀಪದ ಲಕ್ಷ್ಮೀ ನಾರಾಯಣ ಕ್ಯಾಂಪ್‍ (73) ಹತ್ತಿರ ನಿರ್ಮಿಸಿದ ಕೆರೆ ನೀರು ಸರಬರಾಜು ಮಾಡುವ ಪಂಪ್‍ ಹೌಸ್‍ ಗೆ ಮಸ್ಕಿ ಲೈನ್‍ ಗೆ ವಿದ್ಯುತ್‍ ಸಂಪರ್ಕ ಕಲ್ಪಿಸಲಾಗಿದೆ. ಈ ಮಾರ್ಗದಲ್ಲಿ ಪದೇ ಪದೇ ವಿದ್ಯುತ್‍ ವ್ಯತ್ಯಯ ಉಂಟಾಗುತ್ತಿರುವುದರಿಂದ ಟ್ಯಾಂಕ್‌ಗಳಲ್ಲಿ ನೀರು ಸಂಗ್ರಹ ಸಾಧ್ಯವಾಗುತ್ತಿಲ್ಲ. ಹೀಗಾಗಿ ನಿರಂತರ ವಿದ್ಯುತ್‍ ಪೂರೈಸುವ ಕವಿತಾಳ ಲೈನ್‍ ಗೆ ಬ್ರೆಕರ್‍ ಅಳವಡಿಸಿ ಸಂಪರ್ಕ ಕಲ್ಪಿಸಬೇಕು’ ಎಂದು ಎಂ.ಈರಣ್ಣ ಬಸಾಪುರ ಒತ್ತಾಯಿಸಿದರು.

‘ಎರಡು ದಿನಗಳಿಗೊಮ್ಮೆ ನೀರು ಬಿಟ್ಟರೂ ಬಳಕೆಗೆ ಸಾಕಾಗುವಷ್ಟು ನೀರು ಸಿಗುತ್ತಿಲ್ಲ. ತಗ್ಗಿನಲ್ಲಿ ಇಳಿದು ನೀರು ತುಂಬಬೇಕು. ಮನೆ ಮಂದಿಯೆಲ್ಲಾ ಬೇರೆಲ್ಲಾ ಕೆಲಸ ಬಿಟ್ಟು ನೀರಿಗಾಗಿ ನಿಲ್ಲುವಂತಾಗಿದೆ’ ಎಂದು ನಿವಾಸಿ ವೀರಭದ್ರಮ್ಮ ಹೇಳಿದರು.

1,2,3,ಮತ್ತು 4ನೇ ವಾರ್ಡಿನ ಬಹುತೇಕ ಓಣಿಗಳಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಮೇಲೆ ನೀರು ಹರಿಯುವುದು ಮತ್ತು ಅಲ್ಲಲ್ಲಿ ನೀರು ನಿಂತು ಗಲೀಜು ಉಂಟಾಗಿ ಸೊಳ್ಳೆಗಳ ಕಾಟ ಹೆಚ್ಚಿದೆ.

1ನೇ ವಾರ್ಡ್‌ನಲ್ಲಿ ಒಳ ರಸ್ತೆಗಳು ಹಾಳಾಗಿದ್ದು ಮಳೆಗಾಲದಲ್ಲಿ ಅಕ್ಷರಶಃ ಕೆಸರು ಗದ್ದೆಗಳಂತಾಗಿ ಅಲ್ಲಿನ ನಿವಾಸಿಗಳು ಓಡಾಡಲು ಪರದಾಡುತ್ತಾರೆ. ನೀರು ಮುಂದೆ ಹರಿ ಯದೆ ಗಲೀಜು ಉಂಟಾಗಿದೆ’ ಎಂದು ವೆಂಕಟೇಶ ಅರಿಕೇರಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT