ಮಸ್ಕಿ: ಜಗತ್ತು ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾವ ಲೆಕ್ಕ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಟೀಕೆ ಮಾಡಿದರು.
ಪಟ್ಟಣದಲ್ಲಿ ಶನಿವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿಯು ರಾಜ್ಯದಲ್ಲಿ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದರು.
ಕಳದ ಉಪಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ ಸೋತಿರಬಹುದು. ಆದರೆ, ಇಲ್ಲಿ ಅವರೇ ಶಾಸಕರು ಎಂದು ಮಸ್ಕಿ ಕ್ಷೇತ್ರದ ನೀರಾವರಿ, ಶಾಲೆ ಹಾಗೂ ಕುಡಿಯುವ ನೀರಿಗೆ ಕೋಟ್ಯಂತರ ರೂಪಾಯಿ ಅನುದಾನವನ್ನು ನಮ್ಮ ಸರ್ಕಾರ ನೀಡಿತ್ತು ಎಂದರು.
ಕಾಂಗ್ರೆಸ್ ಬಡವರಿಗಾಗಿ ಏನೂ ಮಾಡಿಲ್ಲ. ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಕೊಟ್ಟಿದ್ದು ಬಿ.ಎಸ್. ಯಡಿಯೂರಪ್ಪ ಎಂದರು.
ಬರುವ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ ಅವರನ್ನು 35 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಆಯ್ಕೆ ಮಾಡುವಂತೆ ಮನವಿ ಮಾಡುವ ಮೂಲಕ ಪ್ರತಾಪಗೌಡ ಅವರೇ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದರು.
ತುಂಗಭದ್ರಾ ಎಡದಂಡೆ ಕಾಲುವೆಗೆ ಏ.10ರ ವರೆಗೆ ನೀರು ಹರಿಸುವಂತೆ ಮುಖ್ಯಮಂತ್ರಿಗೆ ತಿಳಿಸಲಾಗುವುದು ಎಂದರು.
ಸಚಿವ ಶ್ರೀರಾಮುಲು ಮಾತನಾಡಿ, ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಸುಳ್ಳು ಹೇಳಿ ಗೆದ್ದರು. ಬಿಜೆಪಿ ಡಬಲ್ ಇಂಜನ್ ಸರ್ಕಾರದ ಇದ್ದದ್ದರಿಂದ ರಾಜ್ಯದಲ್ಲಿ ಅಭಿವೃದ್ಧಿ ಸಾಧ್ಯವಾಗಿದೆ. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ಗೆ ಗ್ಯಾರಂಟಿಯೇ ಇಲ್ಲ ಎಂದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಂಬಲಿಸಿದೆನು. ಅವರು ಮುಖ್ಯಮಂತ್ರಿಯಾಗಿ ಸಾಕಷ್ಟು ಅನುದಾನ ನೀಡಿದ್ದರ ಪರಿಣಾಮ ಇವತ್ತು ಕ್ಷೇತ್ರದ ಅಭಿವೃದ್ಧಿ ಆಗಲು ಸಾಧ್ಯವಾಯಿತು ಎಂದರು.
ಸಂಸದ ಕರಡಿ ಸಂಗಣ್ಣ ಮಾತನಾಡಿದರು. ಅಮರನಾಥ ಪಾಟೀಲ, ಕೆ.ವಿರುಪಾಕ್ಷಪ್ಪ, ಜಿಲ್ಲಾ ಅಧ್ಯಕ್ಷ ರಮಾನಂದ ಯಾದವ್, ವಿಭಾಗ ಪ್ರಭಾರಿ ಸಿದ್ದೇಶ ಯಾದವ್, ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಮಸ್ಕಿ ನಾಗರಾಜ ವಕೀಲ, ಕೆ.ವೀರನಗೌಡ ಕಾರಲಕುಂಟಿ, ಶರಣಪ್ಪಗೌಡ ಜಾಡಲದಿನ್ನಿ, ಶಂಕರರೆಡ್ಡಿ, ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಮಹಾದೇವಪ್ಪಗೌಡ ಪೊಲೀಸ್ ಪಾಟೀಲ, ಬಸವಂತರಾಯ ಕುರಿ ಇದ್ದರು.
ಕ್ಷೇತ್ರದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.