ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಸಿಎಎ, ಎನ್‌ಆರ್‌ಸಿ ಕೈಬಿಡಲು ಆಗ್ರಹ

ಸಂವಿಧಾನ ಹಕ್ಕುಗಳ ನಾಗರಿಕ ವೇದಿಕೆಯಿಂದ ಪ್ರತಿಭಟನೆ
Last Updated 2 ಫೆಬ್ರುವರಿ 2020, 15:03 IST
ಅಕ್ಷರ ಗಾತ್ರ

ರಾಯಚೂರು: ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಕಾಯ್ದೆಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಮಹಿಳೆಯರು ಭಾನುವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು.

ನಗರದ ಮಹಿಳಾ ಸಮಾಜದಲ್ಲಿ ಸೇರ್ಪಡೆಯಾಗಿದ್ದ ಪ್ರತಿಭಟನಾಕಾರರು, ಅಲ್ಲಿಂದ ರ‍್ಯಾಲಿ ಆರಂಭಿಸಿ ನಗರಸಭೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರಿನ ಟಿಪ್ಪು ಸುಲ್ತಾನ ಉದ್ಯಾನ ತಲುಪಿದರು.

ನಗರದ ಸಂವಿಧಾನ ಹಕ್ಕುಗಳ ನಾಗರಿಕ ವೇದಿಕೆಯಿಂದ ಉದ್ಯಾನದಲ್ಲಿ ಸಿಎಎ, ಎನ್‌ಆರ್‌ಸಿ ಖಂಡಿಸಿ ಅನಿರ್ದಿಷ್ಟಾವಧಿವರೆಗೆ ಆರಂಭಿಸಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಮಹಿಳೆಯರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಮಹಿಳಾ ಮುಖಂಡರು, ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನ ಜಪ ಮಾಡುವುದನ್ನು ಬಿಟ್ಟು ದೇಶದ ಅಭಿವೃದ್ಧಿಗೆ ಮುಂದಾಗಲಿ ಎಂದು ಒತ್ತಾಯಿಸಿದರು.

ಹಿಂದೂ ಮುಸ್ಲಿಮರು ದೇಶದಲ್ಲೀ ಸಹೋದರರಂತೆ ಬಾಳುತ್ತಿದ್ದೇವೆ. ಆದರೆ, ಕೇಂದ್ರ ಸರ್ಕಾರ ಕೋಮು ಸಂಘರ್ಷ ಸೃಷ್ಟಿಸಿ ಕಲಹ ಸೃಷ್ಟಿಸುತ್ತಿದೆ. ಜನರ ದಾಖಲೆ ಕೇಳುತ್ತಿದ್ದೀರಿ. ಆದರೆ, ನಾವು ಭಾರತೀಯರೇ. ಈ ದೇಶ ಹಿಂದುಸ್ತಾನ. ನಮ್ಮ ಮತ ಪಡೆದು ಪ್ರಧಾನಿಮಂತ್ರಿಗಳಾದಾಗ ಜನರ ದಾಖಲೆಗಳ ಬಗ್ಗೆ ಸಂದೇಹ ಬರಲಿಲ್ಲವೆ ಎಂದು ಪ್ರಶ್ನಿಸಿದರು.

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ಅನವಶ್ಯಕವಾಗಿರುವ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಹಿಂದುಳಿದ, ಅಲ್ಪಸಂಖ್ಯಾತರಿಗೆ ಸಂಕಷ್ಟಕ್ಕೀಡು ಮಾಡುತ್ತಿದ್ದಾರೆ. ಈ ಕಾಯ್ದೆಗಳು ಯಾರಿಗೂ ಬೇಕಿಲ್ಲ. ಪ್ರಜಾಪ್ರಭುತ್ವದ ಆಶಯಗಳನ್ನೇ ಮಣ್ಣು ಪಾಲು ಮಾಡಿ ಈ ರೀತಿ ಆಡಳಿತವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ ಎಂದು ದೂರಿದರು.

ಸರ್ಕಾರದ ವಿರುದ್ಧ ಧ್ವನಿ ಎತ್ತಿದ ವಿದ್ಯಾರ್ಥಿಗಳ ಮೇಲೆಯೇ ದೌರ್ಜನ್ಯ ಎಸಗಿರುವುದು ಖಂಡನೀಯ. ಈ ಬೇಡಿಕೆ ಈಡೇರುವವರೆಗೂ ಹೋರಾಟ ಮಾತ್ರ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

ಪ್ರತಿಭಟನಾಕಾರರು ಕೈಯಲ್ಲಿ ರಾಷ್ಟ್ರ ಧ್ವಜ, ನೋ ಸಿಎಎ, ಎನ್‌ಆರ್‌ಸಿ, ನಮಗೆ ನ್ಯಾಯ ಬೇಕು ಎನ್ನುವ ಫಲಕಗಳನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT