ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಜೀವ ಉಳಿಸಲು ಕೆಲಸ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಸಲಹೆ
Last Updated 5 ಏಪ್ರಿಲ್ 2020, 10:51 IST
ಅಕ್ಷರ ಗಾತ್ರ

ರಾಯಚೂರು: ‘ಜನಸಾಮಾನ್ಯರ ಜೀವ ಉಳಿಸುವ ಉದ್ದೇಶ ಇಟ್ಟುಕೊಂಡು ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಕೋವಿಡ್‌–19 ಮುಂಜಾಗ್ರತೆ ಕ್ರಮಗಳ’ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

‘ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿಯು ಯಾರೋ ನೋಡತ್ತಿದ್ದಾರೆ ಎನ್ನುವ ಭಾವನೆಯಿಂದ ಕೆಲಸ ಮಾಡುತ್ತಿಲ್ಲ. ದೇವರು ನೋಡುತ್ತಿದ್ದಾನೆ ಎನ್ನುವ ಭಾವನೆಯಿಂದ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ವಿರುದ್ಧ ಹೋರಾಟ ಮುಂದುವರಿಸಲು ನಾನು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ಕೆಲಸದ ವಿರುದ್ಧ ಏನೇ ಅಪವಾದ ಬಂದರೂ ಲೆಕ್ಕಿಸದೆ ಬಡಜನರ ಜೀವ ಉಳಿಸುವ ಕೆಲಸ ಉದ್ದೇಶ ನೆನಪಿಡಬೇಕು’ ಎಂದರು.

‘15 ಜಿಲ್ಲೆಗಳ ಪ್ರವಾಸ ಮುಗಿದಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಎಲ್ಲರೂ ಸ್ವಯಂ ಪ್ರೇರಣೆಯಿಂದ ಕೋವಿಡ್ ವಿರುದ್ಧ ಹೋರಾಡುತ್ತಿರುವುದು ಅಭಿನಂದನೀಯ. ರಾಜ್ಯದಲ್ಲಿ 146 ಜನರು ಪಾಜಿಟಿವ್ ಇದ್ದಾರೆ. ನಾಲ್ಕು ಜನರು ಮೃತ ಪಟ್ಟಿದ್ದಾರೆ.ಕೋವಿಡ್ -19 ಸಲುವಾಗಿ ವಿಶೇಷ ಆಸ್ಪತ್ರೆ ಆರಂಭಿಸುವ ಕಾರ್ಯ ನಡೆಯುತ್ತಿದೆ. ಈ ಆರೋಗ್ಯ ಇಲಾಖೆಯಿಂದ ಜಾಗೃತಿ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 14 ಫಿವರ್ ಕ್ಲಿನಿಕ್ ಆರಂಭಿಸಲಾಗಿದೆ. ಕೋವಿಡ್ ಸಲುವಾಗಿ 350. ಹಾಸಿಗೆ‌ ವ್ಯವಸ್ಥೆ ಮಾಡಲಾಗಿದೆ. ಹೊರರಾಜ್ಯಗಳಲ್ಲಿರುವ ಕಾರ್ಮಿಕರನ್ನು ರಾಜ್ಯಕ್ಕೆ ಕರೆತರುವ ವಿಷಯವನ್ನು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು.ಜಿಲ್ಲೆಯಲ್ಲಿ ಪಾಜಿಟಿವ್ ಇರುವ ಕಡೆಗಳಲ್ಲಿ ಹೆಚ್ಚು ವೈದ್ಯಕೀಯ ಸಾಮಗ್ರಿ ದಾಸ್ತಾನು ಮಾಡಲಾಗಿದೆ ಎಂದು ಹೇಳಿದರು.

‘ಜಿಲ್ಲಾಡಳಿತ, ಜಿಲ್ಲಾ ಪೊಲೀಸರು, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮಾಧ್ಯಮದವರು ಬಹಳ ಶ್ರಮಪಟ್ಟು ಕೆಲಸ ಮಾಡುತ್ತಿದ್ದು, ಜನರನ್ನು ಜಾಗೃತಗೊಳಿಸುತ್ತಿದ್ದಾರೆ’ ಎಂದು ಜಿಲ್ಲೆಯ ಶಾಸಕರು ಮತ್ತು ಸಂಸದ ಕರಡಿ ಸಂಗಣ್ಣ ಶ್ಲಾಘಿಸಿದರು.

ಶಾಸಕ ಶಿವನಗೌಡ ನಾಯಕ ಮಾತನಾಡಿ, ರಾಜ್ಯ ಸರ್ಕಾರ ರಾಜಸ್ತಾನದ ಕಾರ್ಮಿಕರ ಬಗ್ಗೆ ವಹಿಸಿದ ಕಾಳಜಿಯನ್ನು ರಾಜ್ಯದ ಕಾರ್ಮಿಕರ ಬಗ್ಗೆಯೂ ಕಾಳಜಿ ತೋರಿಸಬೇಕು. ರಾಜ್ಯದಿಂದ‌ ಬಸ್ ವ್ಯವಸ್ಥೆ ಮಾಡಿ ಕಾರ್ಮಿಕರನ್ನು ರಾಜಸ್ತಾನಕ್ಕೆ ಕಳುಹಿಸಲಾಗಿದೆ. ಅದೇ ರೀತಿ ರಾಜ್ಯದ ಕಾರ್ಮಿಕರು ಆಂಧ್ರಪ್ರದೇಶ, ಮಹಾರಾಷ್ಟ್ರ ಗಳಲ್ಕಿ ಸಿಕ್ಕಿಬಿದ್ದಿದ್ದು ಅವರನ್ನು ಕರೆತರಬೇಕು. ಕನಿಷ್ಠ ಮಹಾರಾಷ್ಟ್ರದ ಸರ್ಕಾರದೊಂದಿಗೆ ಮಾತನಾಡಿ, ಅಲ್ಲಿರುವ ನಮ್ಮ ರಾಜ್ಯದ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವುದು ಅನಿವಾರ್ಯ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಕುಡಿಯುವ ನೀರು, ಮೇವು ಒದಗಿಸುವ ಕಾರ್ಯ ಆರಂಭಿಸಬೇಕಿದೆ. ಬೇಳೆ ಮತ್ತು ಅಕ್ಕಿ ತಲುಪಿಸುವ ಕೆಲಸ ಆರಂಭಿಸಿಲ್ಲ. ಕೇಂದ್ರದಿಂದ ಇನ್ನೂ ಸೂಚನೆ ಬಂದಂತಿಲ್ಲ

ರಿಮ್ಸ್ ನಲ್ಲಿ ವೆಂಟಿಲೇಟರ್ ಹಾಕಿಸಿಕೊಳ್ಳಬೇಕು. ಕೆಕೆಆರ್ ಡಿಬಿಯಿಂದ ಬಂದಿರುವ ₹1 ಕೋಟಿ ಅನುದಾನ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಶಾಸಕ ಬಸನಗೌಡ ದದ್ದಲ, ಗುಳೆ ಹೋದವರೆಲ್ಲ ವಾಪಸ್ ಬಂದಿದ್ದಾರೆ.‌ ಅವರಿಗೆ ನೀರು ಒದಗಿಸುವ ಸಮಸ್ಯೆ ಆಗುತ್ತಿದೆ. ಟ್ಯಾಂಕರ್ ಮೂಲಕ ನೀರು ಒದಗಿಸಬೇಕಿದ್ದು, ಜಿಲ್ಲಾಧಿಕಾರಿ ಈ ಬಗ್ಗೆ ಸೂಕ್ತ ನಿರ್ದೇಶನ ಕೊಡಬೇಕು ಎಂದು ಕೋರಿದರು.

ಶಾಸಕ ರಾಜಾ‌ವೆಂಕಟಪ್ಪ ನಾಯಕ ಮಾತನಾಡಿ, ಮಾನ್ವಿ ತಾಲ್ಲೂಕು ಆರೋಗ್ಯಾಧಿಕಾರಿ ಮತ್ತು ಸಿಬ್ಬಂದಿಗೆ ಐದು ಸಾವಿರ ಮಾಸ್ಕ್ ಕೊಡಬೇಕು. ಪ್ರತಿ ಪಿಎಚ್ ಸಿ ಸೆಂಟರ್ ಥರ್ಮಲ್ ಸ್ಕ್ಯಾನರ್ ಕೊಡಬೇಕು. ಸಿರವಾರಕ್ಕೆ‌ ಒಂದು ಆಂಬುಲೆನ್ಸ್ ಕೊಡಬೇಕು. ವೈದ್ಯರ ಕೊರತೆ ಬಹಳಷ್ಟಿದೆ. ಟಿಎಲ್‌ಬಿಸಿಯಿಂದ ಎರಡು ಬೆಳೆಗಳಿಗೆ ನೀರು ಕೊಡುವ ಕೆಲಸ ಮಾಡಿದ್ದಾರೆ. ಮಾನ್ವಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಟಿಎಲ್ ಬಿಸಿಯಿಂದ ಮೊದಲು ಮಾನ್ವಿ ಕೆರೆ ತುಂಬಿಸಬೇಕು. ಆನಂತರ ರಾಯಚೂರು‌ಕೆರೆ ತುಂಬಿಕೊಳ್ಳಬೇಕು ಹೇಳಿದರು.

ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಸುರಕ್ಷತಾ ಸಾಧನಗಳನ್ನು ಒದಗಿಸಬೇಕು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಮಾತನಾಡಿ, ಐಎಂಎ ಮೂಲಕ ಖಾಸಗಿ ಆಸ್ಪತ್ರೆಗಲ ವೈದ್ಯರಿಗೆ ಸೂಕ್ತ ನಿರ್ದೇಶನವನ್ನು ನೀಡಲಾಗಿದೆ. 58 ಥರ್ಮಾ ಸ್ಕ್ಯಾನರ್ ಬಂದಿದ್ದು ಚೆಕ್ ಪೋಸ್ಟ್ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ಹಂಚಲಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಮಾತನಾಡಿ, ವಲಸೆ ಹೋಗಿ ಬಂದಿರುವವರ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗಿದೆ. ಇದುವರೆಗೂ 48 ಸಾವಿರ ಜನರು ಬಂದಿದ್ದು, ಆಶಾ ಕಾರ್ಯಕರ್ತೆಯರ‌ ಮೂಲಕ ಆರೋಗ್ಯದ‌ ಮೇಲೆ‌ ನಿಗಾ ವಹಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ರಾಜ್ಯ ಕೃಷಿ ಬೆಲೆ ಆಯೋಗದ ಆಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪ್ರಸನ್ನಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT