ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಅನ್ಯಾಯದ ವಿರುದ್ಧ ಗ್ರಾಹಕರು ಹಕ್ಕು ಪ್ರತಿಪಾದಿಸಿ

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್‌.ದುರುಗೇಶ ಹೇಳಿಕೆ
Last Updated 16 ಮಾರ್ಚ್ 2022, 13:32 IST
ಅಕ್ಷರ ಗಾತ್ರ

ರಾಯಚೂರು: ಗ್ರಾಹಕರು ತಾವು ಪಡೆಯುವ ವಸ್ತುಗಳಿಂದ ಅನ್ಯಾಯವಾದಲ್ಲಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವುದು ಮತ್ತು ತಮ್ಮ ಕರ್ತವ್ಯಗಳನ್ನು ಚಾಚು ತಪ್ಪದೇ ಪಾಲಿಸುವುದರಿಂದ ಗ್ರಾಹಕರ ಮೇಲಿನ ದೌರ್ಜನ್ಯ ತಡೆಯಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ್ ಹೇಳಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ. ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ನ್ಯಾಯೋಚಿತ ಡಿಜಿಟಲ್ ಹಣಕಾಸು ಎನ್ನುವ ಧೈಯ ವಾಕ್ಯದೊಂದಿಗೆ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಗ್ರಾಹಕರಿಗೆ ಸೇವೆ ಒದಗಿಸುವ ಮೂಲದಿಂದ ಯಾವ ಯಾವ ರೀತಿ ಅನ್ಯಾಯಗಳು ನಡೆಯುತ್ತವೆ ಎಂಬುದರ ಬಗ್ಗೆ ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ಮಾಹಿತಿ ಪಡೆಯಬಹುದಾಗಿದೆ ಎಂದರು.

ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ಹೇಗೆ ಹಕ್ಕುಗಳನ್ನು ಚಲಾಯಿಸಬಹುದು, ಈ ಕಾಯ್ದೆಯಡಿ ಗ್ರಾಹಕರಿಗೆ ಇರುವ ಹಕ್ಕುಗಳು ಯಾವುವು ಎಂಬ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯಬೇಕು. ಅಲ್ಲದೆ ಪ್ರತಿನಿತ್ಯ ಬಳಸುವ ಉತ್ಪನ್ನಗಳು, ಸರಕು ಸಾಗಾಣಿಕೆಗಳ ಬಗ್ಗೆ ಮೊದಲು ಸಾಮಾನ್ಯ ಮಾಹಿತಿ ಹೊಂದಿರಬೇಕು. ಒಂದು ವಸ್ತು ಅಥವಾ ಉತ್ಪನ್ನವನ್ನು ತಯಾರಿಸುವಾಗ ಅಗತ್ಯವಾಗಿ ಕೆಲವೊಂದು ಮೂಲಾಂಶಗಳನ್ನು ದಾಖಲು ಮಾಡಿರಬೇಕು. ಉತ್ಪನ್ನ ತಯಾರಕನ ವಿಳಾಸ, ಉತ್ಪನ್ನದ ಪ್ರಮಾಣ, ಗುಣಮಟ್ಟ, ಮೂಲದರ ಮತ್ತಿತರ ವಿಷಯಗಳನ್ನು ಕಡ್ಡಾಯವಾಗಿ ದಾಖಲಿಸಬೇಕು. ಅವುಗಳನ್ನು ಪರೀಕ್ಷಿಸಿ ಗ್ರಾಹಕರು ಖರೀದಿಸಬೇಕು ಎಂದು ಹೇಳಿದರು.

ಇವತ್ತಿನ ತಂತ್ರಜ್ಞಾನ ಯುಗದಲ್ಲಿ ಎಲ್ಲಾ ವ್ಯಾಪಾರ ಕ್ಷೇತ್ರದಲ್ಲಿ ಆನ್‌ಲೈನ್‌ ವ್ಯವಹಾರ ನಡೆಯುತ್ತಿದ್ದು, ಗ್ರಾಹಕರು ಆನ್‌ಲೈನ್‌ ವ್ಯವಹಾರದಲ್ಲಿ ಜಾಗೃತಿ ವಹಿಸಬೇಕು. ಅಲ್ಲದೆ ಈ ಕುರಿತು ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಮ್ಮುಖದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ವ್ಯಾಪಾರಿಗಳು ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು ಅಲ್ಲದೆ ಜಿ.ಎಸ್.ಟಿ ಹೊಂದಿರಬೇಕು ಎಂದು ತಿಳಿಸಿದರು.

ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ವೆಂಕಟೇಶ ಜೋಷಿ ಮಾತನಾಡಿ, ಗ್ರಾಹಕರಿಗೆ ಅನ್ಯಾಯವಾದಲ್ಲಿ ನ್ಯಾಯಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಜೆ.ಬಸವರಾಜ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಫರ್ಹಿನ್ ಬೇಗಂ, ಪ್ರಭುದೇವ ಪಾಟೀಲ ಕೆ., ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಅರಣ್ ಸಂಗಾವಿ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಶಿವಪುತ್ರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT