ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಕಾರಾಗೃಹದಲ್ಲಿ ಯೋಗ ತರಬೇತಿ ಶಿಬಿರ

Published 16 ಜೂನ್ 2024, 16:12 IST
Last Updated 16 ಜೂನ್ 2024, 16:12 IST
ಅಕ್ಷರ ಗಾತ್ರ

ರಾಯಚೂರು: ‘ಮಾನಸಿಕ ಸ್ವಾಸ್ಥ್ಯ ಹಾಗೂ ಸದೃಢ ಆರೋಗ್ಯಕ್ಕೆ ಯೋಗ ಅಗತ್ಯ’ ಎಂದು ಕಾರಾಗೃಹ ಅಧೀಕ್ಷಕ ಬಿ.ಆರ್. ಅಂದಾನಿ ಹೇಳಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬಿ.ಎನ್.ಡಬ್ಲ್ಯೂ. ಪತಂಜಲಿ ಯೋಗ ಪ್ರತಿಷ್ಠಾನದ ಟ್ರಸ್ಟ್ ಮತ್ತು ಆಯುಷ್ ಇಲಾಖೆ ಸಹಯೋಗದಲ್ಲಿ ಜೈಲು ವಾಸಿಗಳ ಮಾನಸಿಕ ದೈಹಿಕ ವಿಕಾಸ ಹಾಗೂ ಮನ ಪರಿವರ್ತನೆಗಾಗಿ ಆಯೋಜಿಸಿದ್ದ ಉಚಿತ ಯೋಗ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

‘15 ವರ್ಷಗಳಿಂದ ಡಾ.ತಿಮ್ಮಪ್ಪ ವಡ್ಡೇಪಲ್ಲಿ ಅವರು ನಿಸ್ವಾರ್ಥ ಭಾವದಿಂದ ಯೋಗ ತರಬೇತಿ ನೀಡುತ್ತಿದ್ದಾರೆ. ಯೋಗದಿಂದ ಜೈಲು ವಾಸಿಗಳಲ್ಲಿ ಮನೋಬಲ ವೃದ್ಧಿಯಾಗಿದೆ’ ಎಂದು ತಿಳಿಸಿದರು.

‘ಜೈಲು ವಾಸಿಗಳು ಬಿಡುಗಡೆ ನಂತರವೂ ತಮ್ಮ ಮನೆಗಳಲ್ಲಿ ಯೋಗ ಅಭ್ಯಾಸ ಮಾಡಿ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಕರ್ಮ ಆಸ್ಪತ್ರೆ ಪಂಚಕರ್ಮ ವೈದ್ಯಾಧಿಕಾರಿ ಡಾ. ನವೀನ್ ಮಾತನಾಡಿ,‘ಭಾರತೀಯ ಪುರಾತನ ಕಾಲದ ಐದು ಚಿಕಿತ್ಸೆ ಪದ್ಧತಿಗಳನ್ನು ಋತುಮಾನಕ್ಕೆ ತಕ್ಕಂತೆ ಅನುಸರಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ’ ಎಂದರು.

ಯೋಗ ಗುರು ಡಾ.ತಿಮ್ಮಪ್ಪ ವಡ್ಡೇಪಲ್ಲಿ ಮಾತನಾಡಿ, ‘ಸಮಗ್ರ ಆರೋಗ್ಯ ದೃಷ್ಟಿಯಿಂದ ಯೋಗ ತುಂಬಾ ಅವಶ್ಯಕ’ ಎಂದು ತಿಳಿಸಿದರು.

ಡಾ. ಪೂಜಾ ಯೋಗ ತರಬೇತಿಯನ್ನು ನೀಡಿದರು. ಡಾ. ಬಸವರಾಜ ಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜೈಲರ್ ಪುಂಡಲೀಕ, ಮತ್ತು ಮಹಿಳಾ ಜೈಲರ್ ಭಾಗ್ಯಶ್ರೀ  ಹಾಜರಿದ್ದರು.

‘ಏಕಾಗ್ರತೆಗಾಗಿ ನಿತ್ಯ ಯೋಗ ಧ್ಯಾನ ಅಗತ್ಯ’

ಚಂದ್ರಬಂಡ: ‘ಮಕ್ಕಳು ಏಕಾಗ್ರತೆಗಾಗಿ ನಿತ್ಯ ಯೋಗ ಧ್ಯಾನ ಮಾಡುವ ರೂಢಿ ಹಾಕಿಕೊಳ್ಳಬೇಕು’ ಎಂದು ಭಾರತ ಸೇವಾದಳ ವಿಭಾಗೀಯ ಸಂಘಟಕ ವಿದ್ಯಾಸಾಗರ್ ಚಿನಮಗೇರಿ ಹೇಳಿದರು.

ರಾಯಚೂರು ತಾಲ್ಲೂಕಿನ ಚಂದ್ರಬಂಡ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತಸೇವಾದಳ, ನೆಹರು ಯುವ ಕೇಂದ್ರ, ಆಯುಷ್ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರಾದ ಪ್ರೇಮಲತಾ, ವಿಜಯಕುಮಾರ, ಮಲ್ಲಯ್ಯ, ಭದ್ರಣ್ಣ, ನರಸಿಂಹಲು, ಗಂಗಮ್ಮ, ಸ್ಮಿತಾ ಹಾಗೂ ಶೈಲಜಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT