ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟಿಪಿಎಸ್: ಒಂದನೇ ವಿದ್ಯುತ್ ಘಟಕದ ದಾಖಲೆಯ ಉತ್ಪಾದನೆ

Published 29 ನವೆಂಬರ್ 2023, 23:10 IST
Last Updated 29 ನವೆಂಬರ್ 2023, 23:10 IST
ಅಕ್ಷರ ಗಾತ್ರ

ಶಕ್ತಿನಗರ: ಯರಮರಸ್ ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ (ವೈಟಿಪಿಎಸ್) ಒಂದನೇ ವಿದ್ಯುತ್ ಘಟಕವು 800 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಮೂಲಕ ದಾಖಲೆ ಮಾಡಿದೆ.

ಒಂದನೇ ವಿದ್ಯುತ್ ಘಟಕ 800 ಮೆಗಾವಾಟ್ ಉತ್ಪಾದನೆಯ ಸಾಧನೆ ಮಾಡಿರುವುದು ವೈಟಿಪಿಎಸ್ ಅಧಿಕಾರಿಗಳ ‘ಶಕ್ತಿ’ಯನ್ನು ಇನ್ನಷ್ಟು ಬಲಪಡಿಸಿದೆ. 2023ರ ಆಗಸ್ಟ್ 21ರಿಂದ ನವೆಂಬರ್ 29ರ ವರೆಗೆ ನಿರಂತರ ಉತ್ಪಾದನೆ ಮಾಡಿ ನೂರು ದಿನ ಪೂರೈಸಿದೆ. ಹೆಚ್ಚಿನ ಉತ್ಪಾದನೆಯನ್ನು ದಾಖಲಿಸಿರುವುದು ಅಧಿಕಾರಿಗಳ ವಲಯದಲ್ಲಿ ಸಂತಸ ಇಮ್ಮಡಿಗೊಳಿಸಿದೆ.

ಕೇವಲ ಬೇಸಿಗೆಯ ದಿನಗಳಲ್ಲಿ ವಿದ್ಯುತ್‌ ಉತ್ಪಾದಿಸುವ ಹೊಣೆ ಹೊರುತ್ತಿದ್ದ ವೈಟಿಪಿಎಸ್ ಘಟಕಗಳ ಮೇಲೆ ಪ್ರಸಕ್ತ ವರ್ಷ ಮಳೆಯ ವೈಫಲ್ಯದಿಂದ ಚಳಿಗಾಲದಲ್ಲಿಯೇ ವಿದ್ಯುತ್‌ ಒದಗಿಸುವ ಒತ್ತಡವಿದೆ. ಆಗಾಗ ತಲೆದೋರುವ ತಾಂತ್ರಿಕ ಸಮಸ್ಯೆಗಳ ಮಧ್ಯೆಯೂ ವಿದ್ಯುತ್‌ ಉತ್ಪಾದಿಸುತ್ತಿದ್ದು, ಒತ್ತಡ ನಿವಾರಣೆಗೆ ತನ್ನದೇ ಆದ ಕೊಡುಗೆ ನೀಡಿದೆ. ನಿರಂತರ ವಿದ್ಯುತ್‌ ಉತ್ಪಾದನೆ ಅಸಾಧ್ಯ ಎಂಬ ಆರೋಪದ ಹೊರತಾಗಿಯೂ ವರ್ಷದಲ್ಲಿ ನ.29ರಂದು ಒಟ್ಟು 43.270 ದಶಲಕ್ಷ ಯೂನಿಟ್‌ ಉತ್ಪಾದನೆಯಾಗಿದೆ.

ಪ್ರಸಕ್ತ ವರ್ಷ ವಿದ್ಯುತ್ ಘಟಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ವೈಟಿಪಿಎಸ್ ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ ‘ಪ್ರಜಾವಾಣಿ’ಗೆ ಹೇಳಿದರು.

2016ರ ಡಿಸೆಂಬರ್‌ನಲ್ಲಿ ವೈಟಿಪಿಎಸ್‌ನಲ್ಲಿ ಎರಡು ಉತ್ಪಾದನಾ ಘಟಕಗಳು ಆರಂಭವಾಗಿವೆ. ತಲಾ ಒಂದು ಘಟಕ 800 ಮೆಗಾವಾಟ್‌ ಉತ್ಪಾದನೆ ಸಾಮರ್ಥ್ಯ ಹೊಂದಿದೆ. 2022ರ ಮಾರ್ಚ್‌ನಿಂದ ಏಪ್ರಿಲ್ 29ವರೆಗೆ 52 ದಿನ ನಿರಂತರ ಕಾರ್ಯನಿರ್ವಹಿಸಿ 400 ಮೆಗಾವಾಟ್ ಉತ್ಪಾದನೆ ಮಾಡಿದೆ. ಈ ಬಾರಿಯ ಉತ್ಪಾದನೆಯು 800 ಮೆಗಾವಾಟ್‌ ದಾಟಿದೆ ಎಂದು ವೈಟಿಪಿಎಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT