ರಾಯಚೂರು: ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ವೇತನ ಪಾವತಿಸಲು ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು. ಪ್ರತಿ ತಿಂಗಳು ವೇತನ ಪಾವತಿಸಿ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ 15ನೇ ಹಣಕಾಸು ಯೋಜನೆಯ ಕ್ರಿಯಾಯೋಜನೆ ಸಿದ್ಧಪಡಿಸುವ ಕುರಿತಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿಯಿಂದ ವಸೂಲಿ ಮಾಡುವ ತೆರಿಗೆಯಲ್ಲಿ ಶೇ 40 ರಷ್ಟನ್ನು ವೇತನ ಪಾವತಿಗೆ ಬಳಕೆ ಮಾಡಿಕೊಳ್ಳಬೇಕು. ಇನ್ನುಳಿದ ತೆರಿಗೆಯನ್ನು ಅಭಿವೃದ್ಧಿಗೆ ಬಳಕೆ ಮಾಡಬೇಕಾಗುತ್ತದೆ. ಗ್ರಾಮಗಳಲ್ಲಿ ತೆರಿಗೆ ಸಂಗ್ರಹಿಸುವ ಬಿಲ್ ಕಲೆಕ್ಟರ್‌ಗಳಿಗೇ ವೇತನ ನೀಡದಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಸಿಬ್ಬಂದಿ ವೇತನ ಪಾವತಿ ಆಗದಿರುವ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಬಿಲ್ ಕಲೆಕ್ಟರ್, ವಾಟರ್‌ಮ್ಯಾನ್ ಹಾಗೂ ಇತರೆ ಸಿಬ್ಬಂದಿಗೆ ಸರಿಯಾಗಿ ವೇತನ ಕೊಡಿ ಎಂದು ತಿಳಿಸಿದರು.
ಒಂದು ವೇಳೆ, ವೇತನ ಪಾವತಿಸುವುದಕ್ಕೆ ವಿಳಂಬನೀತಿ ಅನುಸರಿಸುವುದು ಕಂಡುಬಂದರೆ; ಇದಕ್ಕೆ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನೇ ಹೊಣೆಗಾರ ಮಾಡಲಾಗುವುದು. 15ನೇ ಹಣಕಾಸು ಯೋಜನೆಯಡಿ ಸಿಬ್ಬಂದಿ ವೇತನ ಪಾವತಿಗೆ ಸಂಬಂಧಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ವರದಿ ನೀಡಬೇಕು ಎಂದರು.
ಸ್ವಚ್ಛಭಾರತ್ ಮಿಷನ್ ಫಲಾನುಭವಿಗಳನ್ನು ಅರ್ಹ ಫಲಾನುಭವಿಗಳನ್ನು ಕೂಡಲೇ ಆಯ್ಕೆ ಮಾಡಬೇಕು. ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ದಿನಕ್ಕೆ 55 ಲೀಟರ್ ನೀರು ಸರಬರಾಜು ಮಾಡಬೇಕಿದ್ದು, ಫಲಾನುಭವಿಗಳ ಅಗತ್ಯ ದಾಖಲಾತಿಗಳನ್ನು ಎಂಐಎಸ್ ತಂತ್ರಾಂಶದಲ್ಲಿ ನಮೂದಿಸಬೇಕು. ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ, ಯೋಜನಾ ನಿರ್ದೇಶಕ ಮಾಡೋಳಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.