ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮೀನಿಗಾಗಿ ದಿನವಿಡೀ ಕಾದ ಪೂಜಾಗಾಂಧಿ!

Last Updated 27 ಅಕ್ಟೋಬರ್ 2017, 8:58 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಜೆಎಂಎಫ್‌ಸಿ–2 ಕೋರ್ಟ್‌ ಹೊರಡಿಸಿದ್ದ ಜಾಮೀನು ರಹಿತ ವಾರಂಟ್‌ಗೆ ಜಾಮೀನು ನೀಡಲು ಚಿತ್ರನಟಿ ಪೂಜಾಗಾಂಧಿ ಅವರನ್ನು ನ್ಯಾಯಾಧೀಶರು ಗುರುವಾರ ದಿನವಿಡೀ ಕೋರ್ಟ್‌ ಕೋಣೆಯಲ್ಲೆ ಕಾಯಿಸಿದ ಪ್ರಸಂಗ ನಡೆಯಿತು. ಜೆಎಂಎಫ್‌ಸಿ–2 ನ್ಯಾಯಾಧೀಶೆ ಪೂರ್ಣಿಮಾ ಯಾದವ್‌ ಅವರು ₹50 ಸಾವಿರ ನಗದು ಹಾಗೂ ಇಬ್ಬರು ಜಮೀನುದಾರರ ಸಹಿ ಪಡೆದುಕೊಂಡು ಜಾಮೀನು ನೀಡಿದರು.

ದಿನವಿಡೀ ಒಂದೇ ಜಾಗದಲ್ಲಿ ಕಾದು ನಿಂತಿದ್ದ ಪೂಜಾ ಗಾಂಧಿ ಅವರ ಮುಖ ಕಳೆಗುಂದಿತ್ತು. ಜಾಮೀನು ಸಿಗುತ್ತಿದ್ದಂತೆ ಮಾಧ್ಯಮದವರ ಕಣ್ಣು ತಪ್ಪಿಸಿ ಕಾರಿನಲ್ಲಿ ಹೋಗಿಬಿಟ್ಟರು. ಬೆಳಿಗ್ಗೆಯಿಂದಲೆ ಕೋರ್ಟ್‌ ಹೊರಗೆ ಸುದ್ದಿಗಾರರು ಕಾದು ಕುಳಿತಿದ್ದರು.

‘ನ್ಯಾಯಾಧೀಶರು ಜಾಮೀನು ನೀಡಿದ್ದಾರೆ. ಬರುವ ನವೆಂಬರ್‌ 3 ಕ್ಕೆ ಪ್ರಕರಣದ ವಿಚಾರಣೆ ನಡೆಯಲಿದೆ. ಮುಂದಿನ ಎಲ್ಲಾ ನಿಗದಿತ ದಿನಾಂಕಗಳಲ್ಲಿ ಹಾಜರಾಗುವಂತೆ ನ್ಯಾಯಾಧೀಶರು ಹೇಳಿದ್ದಾರೆ’ ಎಂದು ಪೂಜಾಗಾಂಧಿ ಅವರ ಪರ ವಕೀಲ ನಾಗರಾಜ ನಾಯಕ್‌ ಸುದ್ದಿಗಾರರಿಗೆ ತಿಳಿಸಿದರು.

ಕಾಯುವ ಶಿಕ್ಷೆ
ಕೋರ್ಟ್‌ ವಿಚಾರಣೆಗೆ ಗುರುವಾರ ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಹಾಜರಾಗಲಿಲ್ಲ ಎನ್ನುವ ಕಾರಣಕ್ಕೆ ನ್ಯಾಯಾಧೀಶರು, ಚಿತ್ರನಟಿ ಪೂಜಾಗಾಂಧಿಯನ್ನು ಕೋರ್ಟ್‌ ಹಾಲ್‌ನೊಳಗೆ ಕಾದು ಕುಳಿತುಕೊಳ್ಳುವಂತೆ ಸೂಚಿಸಿದ್ದರು.

ಬೆಳಿಗ್ಗೆ 11 ಗಂಟೆಯಿಂದ ಸಂಜೆ 5.30 ಗಂಟೆಯವರೆಗೂ ನಟಿ ಕಾಯಬೇಕಾಯಿತು. ಮಧ್ಯಾಹ್ನ 1.30 ಕ್ಕೆ ಭೋಜನ ವಿರಾಮಕ್ಕೆ ಹೊರಗೆ ಕಳುಹಿಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಅಸಮಾಧಾನ ತಾಳಿದ್ದ ಜೆಎಂಎಫ್‌ಸಿ–2 ನ್ಯಾಯಾಧೀಶರು ಕೋರ್ಟ್‌ ಹಾಲ್‌ನಲ್ಲೆ ಕಾದು ಕುಳಿತುಕೊಳ್ಳುವಂತೆ ಸೂಚಿಸಿ ವಿರಾಮಕ್ಕಾಗಿ ಹೊರಹೋದರು.

ಏನಿದೂ ಪ್ರಕರಣ?
ರಾಜ್ಯ ವಿಧಾನಸಭೆಗೆ 2013 ರಲ್ಲಿ ನಡೆದ ಚುನಾವಣೆಯಲ್ಲಿ ಬಿಎಸ್‌ಆರ್‌ ಪಕ್ಷದಿಂದ ರಾಯಚೂರು ನಗರ ಕ್ಷೇತ್ರಕ್ಕೆ ಪೂಜಾಗಾಂಧಿ ಸ್ಪರ್ಧಿಸಿದ್ದರು. ಚುನಾವಣೆ ಪ್ರಚಾರದಲ್ಲಿ ಬಳಸುತ್ತಿದ್ದ ಕಾರುಗಳಿಗೆ ಅವರು ಚುನಾವಣಾ ಅಧಿಕಾರಿಗಳಿಂದ ಪೂರ್ವನುಮತಿ ಪಡೆದಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಪೂಜಾಗಾಂಧಿ ಅವರ ವಿರುದ್ಧ ಪ್ರಕರಣವೊಂದು ದಾಖಲಿಸಲಾಗಿತ್ತು.

ಐದು ಬಾರಿ ಸಮನ್ಸ್‌
ಪೂರ್ವ ನಿಗದಿಯಂತೆ ಕಳೆದ ಜೂನ್‌ 19 ರಂದು ಪೂಜಾಗಾಂಧಿ ವಿಚಾರಣೆಗೆ ಹಾಜರಾಗಬೇಕಿತ್ತು. ವಿಚಾರಣೆಗೆ ಹಾಜರಾಗದ ಕಾರಣಕ್ಕಾಗಿ ಆಗಸ್ಟ್‌ ಮೊದಲ ವಾರ ಜೆಎಂಎಫ್‌ಸಿ ಕೋರ್ಟ್‌ ಜಾಮೀನುರಹಿತ ವಾರಂಟ್‌ ಹೊರಡಿಸಿತ್ತು. ಈ ಬಗ್ಗೆ ಐದು ಬಾರಿ ಸಮನ್ಸ್‌ ರವಾನಿಸಿದರೂ ವಿಚಾರಣೆಗಾಗಿ ಅವರು ಬಂದಿರಲಿಲ್ಲ. ಕೊನೆಗೆ ರಾಯಚೂರು ಪೊಲೀಸರು ಬೆಂಗಳೂರಿಗೆ ತೆರಳಿ ಪೂಜಾಗಾಂಧಿ ಅವರನ್ನು ಗುರುವಾರ ಕೋರ್ಟ್‌ಗೆ ಹಾಜರುಪಡಿಸಿದರು. ಬೆಳಿಗ್ಗೆ ವಿಚಾರಣೆ ಸರದಿ ಬಂದಾಗಲೂ ಕೋರ್ಟ್‌ನಲ್ಲಿ ಪೂಜಾಗಾಂಧಿ ಬಂದಿರಲಿಲ್ಲ. ಇದು ನ್ಯಾಯಾಧೀಶರ ಕೋಪಕ್ಕೆ ಕಾರಣವಾಯಿತು.

ಕೋರ್ಟ್‌ಗೆ ಅಲೆದಾಟ!
‘ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟಿ ಪೂಜಾಗಾಂಧಿ ಅವರ ವಿರುದ್ಧದ ಕೋರ್ಟ್‌ ವಿಚಾರಣೆಗೆ ಇಲ್ಲಿಯವರೆಗೂ ಎಂಟು ಸಲ ರಾಯಚೂರು ಕೋರ್ಟ್‌ಗೆ ಹಾಜರಾಗಿದ್ದಾರೆ’ ಎಂದು ಪೂಜಾಗಾಂಧಿ ಪರ ವಕೀಲ ನಾಗರಾಜ ನಾಯಕ್‌ ಹೇಳಿದರು.

ಊಟ, ನೀರು ಇಲ್ಲ!
ಕೋರ್ಟ್‌ನಲ್ಲಿ ಬೆಳಿಗ್ಗೆ 11 ರಿಂದ ಕಾಯುವಂತೆ ನ್ಯಾಯಾಧೀಶರು ಸೂಚಿಸಿದ್ದರಿಂದ ಪೂಜಾಗಾಂಧಿ ಅವರು ಊಟ, ನೀರು ಸೇವಿಸದೆ ಕೋರ್ಟ್‌ ಹಾಲ್‌ನಲ್ಲಿ ಕುಳಿತುಕೊಳ್ಳುವಂತಾಯಿತು. ಮಧ್ಯಾಹ್ನ ಭೋಜನ ವಿರಾಮದಲ್ಲಿ ನೀರು ಹಾಗೂ ಸ್ವಲ್ಪ ತಿಂಡಿಯನ್ನು ಕೋರ್ಟ್‌ ಹಾಲ್‌ನಲ್ಲಿ ಸಹಾಯಕರು ತಂದು ಕೊಟ್ಟಿದ್ದರು. ಆದರೂ ತಿಂಡಿ ತಿನ್ನಲು ನ್ಯಾಯಾಧೀಶರ ಅನುಮತಿ ಕೇಳುವುದಕ್ಕಾಗಿ ಮತ್ತೆ 3 ಗಂಟೆಯವರೆಗೂ ಕಾಯಬೇಕಾಯಿತು. ಕೊನೆಗೆ ಚಾಕೋಲೆಟ್‌ ಹಾಗೂ ಜ್ಯೂಸ್‌ ಸೇವಿಸಿ ದಿನ ಕಳೆದರು.

ಫೇಸ್‌ಬುಕ್‌ನಲ್ಲಿ ಕಾನ್‌ಸ್ಟೇಬಲ್‌!
ಕೋರ್ಟ್‌ನಿಂದ ಸಮನ್ಸ್‌ ಪಡೆದುಕೊಂಡು ಹೋಗಿದ್ದ ಕಾನ್‌ಸ್ಟೇಬಲ್‌ವೊಬ್ಬರು ಆರೋಪಿ ಸಿಕ್ಕಿಲ್ಲ ಎಂದು ನ್ಯಾಯಾಧೀಶರಿಗೆ ಉತ್ತರ ನೀಡುತ್ತಾ ಬಂದಿದ್ದರು. ಸಮನ್ಸ್‌ ನೀಡಲು ಹೋಗಿದ್ದ ಕಾನಸ್ಟೇಬಲ್‌ ನಟಿ ಪೂಜಾಗಾಂಧಿಯೊಂದಿಗೆ ಸೆಲ್ಫಿ ತೆಗೆದು ಫೆಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದರು. ಆದರೆ ನ್ಯಾಯಾಧೀಶರಿಗೆ ಎಂದಿನಂತೆ ತಪ್ಪು ಮಾಹಿತಿ ನೀಡಿದ್ದರಿಂದ ಸಿಡಿಮಿಡಿಯಾದ ನ್ಯಾಯಾಧೀಶರು ಫೆಸ್‌ಬುಕ್‌ ಚಿತ್ರ ಎಲ್ಲಿಂದ ಬಂತು ಎಂದು ಕಾನ್‌ಸ್ಟೇಬಲ್‌ಗೆ ತರಾಟೆ ತೆಗೆದುಕೊಂಡಿದ್ದರು ಎಂದು ಕೋರ್ಟ್‌ ಹಿರಿಯ ವಕೀಲರೊಬ್ಬರು ಸುದ್ದಿಗಾರರಿಗೆ ಅನೌಪಚಾರಿಕವಾಗಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT