ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರುಮಕ್ಕಿ ಸೇತುವೆಗೆ ಮಾ.1ಕ್ಕೆ ಶಂಕುಸ್ಥಾಪನೆ

Last Updated 27 ಫೆಬ್ರುವರಿ 2018, 6:34 IST
ಅಕ್ಷರ ಗಾತ್ರ

ಹೊಸನಗರ: ಏಳು ದಶಕಗಳ ಸತತ ಹೋರಾಟದ ಫಲವಾಗಿ ಶರಾವತಿ ಸಂತ್ರಸ್ತರ ಸಂಪರ್ಕದ ಕೊಂಡಿ ಹಸಿರುಮಕ್ಕಿ ಕಳವು ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲು ಕೊನೆಗೂ ಮುಹೂರ್ತ ಕೂಡಿ ಬಂದಿದೆ.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಉಸ್ತುವಾರಿಯಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಮಾ.1ರಂದು ಸೇತುವೆಗೆ ಗುದ್ದಲಿ ಪೂಜೆ ಮಾಡಲಿದ್ದು, ಈ ಭಾಗದ ಬಹು ನಿರೀಕ್ಷಿತ ಯೋಜನೆ ಕೈಗೂಡುವ ಸಮಯ ಬಂದಿದೆ.

1940–50ರಲ್ಲಿ ಮಡೆನೂರು ಹಾಗೂ 60ರ ದಶಕದಲ್ಲಿ ಲಿಂಗನಮಕ್ಕಿ ಜಲ ವಿದ್ಯುತ್ ಯೋಜನೆಗಳಿಂದ ಹೊಸನಗರ ಹಾಗೂ ಸಾಗರ ತಾಲ್ಲೂಕಿನ ಅನೇಕ ಗ್ರಾಮಗಳು ಶರಾವತಿ ಹಿನ್ನೀರಿನಿಂದ ಜಲಾವೃತಗೊಂಡವು.

ಈ ಯೋಜನೆಗಳಿಂದಾಗಿ ಇಲ್ಲಿಯ ರೈತರು ಮತ್ತು ಕೃಷಿ ಕಾರ್ಮಿಕರು ತಮ್ಮ ಮನೆ, ಜಮೀನುಗಳನ್ನು ಕಳೆದುಕೊಂಡು ನಾಡಿಗೆ ತ್ಯಾಗ ಮಾಡಿದ್ದಾರೆ. ಪುನರ್ವಸತಿಗಾಗಿ ಸರ್ಕಾರ ನೀಡಿದ ಅಲ್ಪ–ಸ್ವಲ್ಪ ಪರಿಹಾರದೊಂದಿಗೆ ಬದುಕನ್ನು ಕಟ್ಟಿಕೊಳ್ಳಲು ತೀವ್ರ ಕಷ್ಟಪಡುತ್ತಿದ್ದಾರೆ. ರಾಜ್ಯಕ್ಕೆ ಬೆಳಕನ್ನು ನೀಡಿದ ಹೆಗ್ಗಳಿಕೆಯ ಗ್ರಾಮಗಳು ಮುಳುಗಡೆಯಿಂದಾಗಿ ಅನಾಥವಾಗಿದೆ ಎಂಬುದು ಸಂತ್ರಸ್ತರ ಅಳಲು.

ಸಂಪರ್ಕ ದೂರ ಮಾಡಿದ ಹಿನ್ನೀರು: ಶರಾವತಿ ಹಿನ್ನೀರಿನಿಂದಾಗಿ ಎಲ್ಲಾ ರಸ್ತೆ ಸಂಪರ್ಕಗಳು ಸಂಪೂರ್ಣ ಕಳೆದುಕೊಂಡಿತು. ಮುಖ್ಯ ವಾಣಿಜ್ಯ ಮತ್ತು ಸರ್ಕಾರಿ ಕೆಲಸದ ಕೇಂದ್ರವಾಗಿದ್ದ ಸಾಗರಕ್ಕೆ 20ರಿಂದ 40 ಕಿ.ಮೀ. ದೂರದ ಬದಲು 80ರಿಂದ 90 ಕಿ.ಮೀ ದೂರ ಕ್ರಮಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು.

ಇದರ ಪರಿಣಾಮ ಸಂತ್ರಸ್ತರ ಹಣ, ಸಮಯ ಹಾಗೂ ಶ್ರಮ ವ್ಯರ್ಥವಾಯಿತು. ಸಾಗರದಿಂದ ಕೊಡಚಾದ್ರಿ, ಕೊಲ್ಲೂರು, ಬೈಂದೂರು ಸಂಪರ್ಕಿಸುವ ರಸ್ತೆಯೂ ಸುಮಾರು 50 ಕಿ.ಮೀ ಹೆಚ್ಚುವರಿಯಾಗಿ ಹೊಸನಗರ– ನಗರದ ಮೂಲಕ ಬೈಂದೂರಿಗೆ ಸೇರಬೇಕಾದ ಸ್ಥಿತಿಯಿಂದಾಗಿ ಇಂಧನ ಅಪವ್ಯಯವಾಗುತ್ತಿದೆ. ಇದರಿಂದ ರಾಜ್ಯಕ್ಕೆ ಮತ್ತು ದೇಶಕ್ಕೆ ಅಪಾರ ನಷ್ಟವಾಗುತ್ತಿದೆ. 70 ವರ್ಷಗಳ ಅವಧಿಯಲ್ಲಿ ₹ 200 ಕೋಟಿಗೂ ಹೆಚ್ಚು ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಈ ಸೇತುವೆ ನಿರ್ಮಾಣದಿಂದ ಅರಮನೆಕೊಪ್ಪ, ಸಂಪೆಕಟ್ಟೆ, ನಿಟ್ಟೂರು, ಬೈಂದೂರು, ಹೊಸಕೊಪ್ಪ, ಎಸ್.ಎಸ್.ಭೋಗ್ ಸೇರಿದಂತೆ ಎಂಟು ಗ್ರಾಮ ಪಂಚಾಯ್ತಿಯ ಶರಾವತಿ ಹಿನ್ನೀರನ ಸಾವಿರಾರು ಸಂತ್ರಸ್ತರಿಗೆ ಅನುಕೂಲವಾಗಲಿದೆ.

ಶರಾವತಿ ಸಂತ್ರಸ್ತರ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಗಂಜಾಳ ರಾಮಚಂದ್ರ ರಾವ್, ಕೊಳಕಿ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಕೂಡ್ಲುಕೊಪ್ಪ ಸುರೇಶ, ಸಹ ಕಾರ್ಯದರ್ಶಿ ಅರುಣ, ಬಗರ್‌ಹುಕುಂ ಅಧ್ಯಕ್ಷ ಬಿ.ಆರ್.ಜಯಂತ ಅವರ ನೇತೃತ್ವದಲ್ಲಿ ಸಂತ್ರಸ್ತರು ನಡೆಸಿದ ಅನೇಕ ಹೋರಾಟಗಳ ಫಲವಾಗಿ ಹಸಿರುಮಕ್ಕಿ ಸೇತುವೆಗೆ ಶಂಕುಸ್ಥಾಪನೆ ಮಾಡಲಾಗುತ್ತಿದೆ.

ಮೂಲಸೌಲಭ್ಯ ಕೊರತೆ: ದೂರು

ಯೋಜನೆಗಳನ್ನು ರೂಪಿಸಿದಾಗ ಸಂತ್ರಸ್ತರಿಗೆ ತೊಂದರೆ ಆಗದಂತೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕಾದ ಸರ್ಕಾರ, ಅಲ್ಪ ಸ್ವಲ್ಪ ಭೂ ಪರಿಹಾರ ವಿತರಿಸಿ ಕೈತೊಳೆದುಕೊಂಡಿದೆ ಎಂಬುದು ಈ ಭಾಗದ ಸಂತ್ರಸ್ತರ ದೂರು.

ಸಂತ್ರಸ್ತರು ನಂಬಿದ ಅನೇಕ ದೇವಾಲಯಗಳು, ಮಠಗಳು ನೀರಿನಲ್ಲಿ ಮುಳುಗಿಹೋಗಿವೆ. ಈಗಲೂ ಇಲ್ಲಿಂದ ವಲಸೆ ಹೋಗುವ ಜನರು ಹಬ್ಬ–ಹರಿದಿನಗಳಲ್ಲಿ ತಮ್ಮ ದೈವ ಮತ್ತು ದೇವರನ್ನು ಪೂಜಿಸಲು ಮೂಲ ಪ್ರದೇಶಗಳಿಗೆ ಬರುವುದನ್ನು ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT