ಆ.15ರಂದು ‘ಹಸಿರು ಕರ್ನಾಟಕ’ಕ್ಕೆ ಚಾಲನೆ

7
ಹಳ್ಳಿ–ಹಳ್ಳಿಗಳಲ್ಲಿ ಸಸಿ ಬೆಳೆಸುವ ಯೋಜನೆ

ಆ.15ರಂದು ‘ಹಸಿರು ಕರ್ನಾಟಕ’ಕ್ಕೆ ಚಾಲನೆ

Published:
Updated:
Deccan Herald

ರಾಮನಗರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಹಸಿರು ಕರ್ನಾಟಕ’ ಯೋಜನೆಗೆ ಜಿಲ್ಲೆಯಲ್ಲಿ ಇದೇ 15ರಂದು ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ. ರಾಜೇಂದ್ರ ಹೇಳಿದರು.

ಈ ಯೋಜನೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಹಂತ ಹಂತವಾಗಿ ಎಲ್ಲಾ ಸರ್ಕಾರಿ ಜಮೀನು, ಶಾಲಾ, ಕಾಲೇಜಿನ ಜಮೀನು ಹಾಗೂ ರೈತರ ಜಮೀನುಗಳಲ್ಲಿ ಗಿಡಗಳನ್ನು ನೆಡಲಾಗುವುದು. ಇದೇ 15ರಂದು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಮತ್ತು ಸಸಿ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಇದೇ 18ರವರೆಗೆ ಇದು ಮುಂದುವರಿಯಲಿದೆ ಎಂದರು.

ರಾಷ್ಟ್ರೀಯ ಅರಣ್ಯ ನೀತಿ ಪ್ರಕಾರ ಒಟ್ಟು ಭೂ ಪ್ರದೇಶದ ಶೇ 33ರಷ್ಟು ಪ್ರದೇಶವು ಹಸಿರು ಹೊದಿಕೆಯಿಂದ ಕೂಡಿರಬೇಕು. ಈ ಗುರಿಯ ಸಾಧನೆಗೆ ಹಲವಾರು ಅರಣ್ಯೀಕರಣ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಪ್ರತಿ ಕುಟುಂಬಕ್ಕೆ ಅವರ ಅವಶ್ಯಕತೆಗೆ ತಕ್ಕಂತೆ ಸಸಿಗಳನ್ನು ಅವರ ಜಮೀನು ಹಾಗೂ ಮನೆಯ ಅಂಗಳದಲ್ಲಿ ನೆಡುವ ವಿನೂತನ ಕಾರ್ಯಕ್ರಮವನ್ನು ಸರ್ಕಾರದ ಎಲ್ಲಾ ಇಲಾಖೆ, ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಅನಷ್ಠಾನಗೊಳಿಸಲಾಗುತ್ತಿದೆ ಎಂದರು.

ಎಲ್ಲಾ ಇಲಾಖೆಗಳ ಹಾಗೂ ಶಾಲಾ -ಕಾಲೇಜುಗಳ ಸಹಭಾಗಿತ್ವದಿಂದ ದೊಡ್ಡ ಪ್ರಮಾಣದಲ್ಲಿ ಬೀಜದ ಉಂಡೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ರೈತರ ಜಮೀನು ಮತ್ತು ಸರ್ಕಾರಿ ಜಮೀನಿನಲ್ಲಿ ಬೀಜದ ಉಂಡೆ, ಬೀಜ ಬಿತ್ತನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಈ ಕಾರ್ಯಕ್ರಮದಡಿ ಆಯ್ದ ಗ್ರಾಮಗಳಲ್ಲಿನ ತಾಲ್ಲೂಕು ಹಾಗೂ ಜಿಲ್ಲೆಯ ಕೇಂದ್ರಗಳಲ್ಲಿ ಪ್ರತಿ ಕುಟುಂಬಕ್ಕೆ ಅವರ ಅವಶ್ಯಕತೆಗೆ ತಕ್ಕಂತೆ ಸಸಿಗಳನ್ನು ಮನೆಯ ಅಂಗಳದಲ್ಲಿ ಹಂತ-ಹಂತವಾಗಿ ನೆಡಲು ಕ್ರಮ ಕೈಗೊಳ್ಳುವುದು. ಸಸಿಗಳನ್ನು ನೆಟ್ಟ ಪ್ರತಿಯೊಂದು ಸ್ಥಳಗಳ ಜಿಯೋ ಟ್ಯಾಗಿಂಗ್ ಮಾಡುವುದು ಹಾಗೂ ಸಸಿಗಳ ಉಳಿಯುವಿಕೆಯ ಬಗ್ಗೆ ಉಸ್ತುವಾರಿ ಮಾಡಲಾಗುವುದು ಎಂದರು.

ಪ್ರಾದೇಶಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಕ್ರಾಂತಿ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್ ಇದ್ದರು.

2.5 ಲಕ್ಷ - ಜಿಲ್ಲೆಯಲ್ಲಿ ಯೋಜನೆಗೆ ಲಭ್ಯವಿರುವ ಸಸಿಗಳು
24 - ಜಿಲ್ಲೆಯಲ್ಲಿ ಯೋಜನೆಗೆ ಆಯ್ಕೆಯಾದ ಗ್ರಾಮಗಳು
300 - ಪ್ರತಿ ಗ್ರಾಮದಲ್ಲಿನ ಕುಟುಂಬಗಳಿಗೆ ಸಸಿ ವಿತರಣೆ
7 - ಕನಕಪುರ ತಾಲ್ಲೂಕಿನ ಆಯ್ದ ಗ್ರಾಮಗಳು
6 - ಚನ್ನಪಟ್ಟಣ, ಮಾಗಡಿ ತಾಲ್ಲೂಕಿನಲ್ಲಿ ಆಯ್ದ ತಲಾ ಗ್ರಾಮಗಳ ಸಂಖ್ಯೆ
5 - ರಾಮನಗರ ತಾಲ್ಲೂಕಿನಲ್ಲಿ ಯೋಜನೆಗೆ ಆಯ್ಕೆಯಾದ ಗ್ರಾಮಗಳು

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !