ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ | 73 ಶಾಲೆಗಳಿಗೆ ಶಿಕ್ಷಕರೇ ಇಲ್ಲ

ಉಪ ಮುಖ್ಯಮಂತ್ರಿ ತಾಲ್ಲೂಕಿನ 397 ಸರ್ಕಾರಿ ಶಾಲೆಗಳಲ್ಲಿ ಶೇ 50ರಷ್ಟು ಶಿಕ್ಷಕರ ಕೊರತೆ
Published 22 ಜುಲೈ 2023, 6:16 IST
Last Updated 22 ಜುಲೈ 2023, 6:16 IST
ಅಕ್ಷರ ಗಾತ್ರ

ಓದೇಶ ಸಕಲೇಶಪುರ

ರಾಮನಗರ: ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿರುವ 397 ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಶೇ50ರಷ್ಟು ಶಿಕ್ಷಕರ ಕೊರತೆಯಿಂದ ಬಳಲುತ್ತಿವೆ. ಈ ಪೈಕಿ ಗ್ರಾಮೀಣ ಭಾಗದ 73 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದಿರುವುದರಿಂದ ಯಾವಾಗ ಬಾಗಿಲು ಮುಚ್ಚುತ್ತವೋ ಎಂಬ ಆತಂಕ ಪೋಷಕರನ್ನು ಕಾಡುತ್ತಿದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ತವರಿನಲ್ಲೇ ಸರ್ಕಾರಿ ಶಾಲೆಗಳ ಸ್ಥಿತಿ ಅಧೋಗತಿ ತಲುಪಿವೆ.

ಬನ್ನಿಮುಕೊಡ್ಲು, ಹುಣಸಹಳ್ಳಿ, ಹಿರೇನ್‌ದ್ಯಾವಪ್ಪನಹಳ್ಳಿ, ಹೊಸದುರ್ಗ, ಹುಣಸನಹಳ್ಳಿ, ಕೋಡಿಹಳ್ಳಿ, ಕೋಲಗೊಂಡನಹಳ್ಳಿ ಸೇರಿದಂತೆ ಹಲವು ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಹೇಳಿ ಕೊಡಬೇಕಾದ ಶಿಕ್ಷಕರಿಲ್ಲ. ಇದರಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಅನಿವಾರ್ಯವಾಗಿ ಸೇರಿಸಬೇಕಾದ ಸ್ಥಿತಿ ಸೃಷ್ಟಿಯಾಗಿದೆ.

ಹೋಬಳಿಯಲ್ಲಿ ಶೇ 61ರಷ್ಟು ಕೊರತೆ

ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿರುವ ಶಾಲೆಗಳಲ್ಲಿ ಶೇ61.04ರಷ್ಟು ಶಿಕ್ಷಕರ ಕೊರತೆ ಇದೆ. ಕೋಡಿಹಳ್ಳಿಯಲ್ಲಿ ಶೇ73.05, ಉಯ್ಯಂಬಳ್ಳಿ ಶೇ70.02, ಸಾತನೂರು ಶೇ66.01 ಹಾಗೂ ಕಸಬಾದಲ್ಲಿ ಶೇ48.09ರಷ್ಟು ಶಿಕ್ಷಕರಿಲ್ಲ. ಇಲ್ಲಿರುವ 280 ಶಾಲೆಗಳಿಗೆ ಮಂಜೂರಾಗಿದ್ದ 767 ಶಿಕ್ಷಕರ ಹುದ್ದೆಗಳ ಪೈಕಿ ಸದ್ಯ ಇರುವವರು ಕೇವಲ 296 ಮಾತ್ರ. ಶಿಕ್ಷಕರ ಕೊರತೆಗೆ ವರ್ಗಾವಣೆ ಮತ್ತು ಏಳೆಂಟು ವರ್ಷಗಳಿಂದ ಶಿಕ್ಷಕರ ನೇಮಕಾತಿ ನಡೆಯದಿರುವುದೇ ಮುಖ್ಯ ಕಾರಣವಾಗಿದೆ.

‘ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಶಿಕ್ಷಕರು ಹೊರ ಜಿಲ್ಲೆಗಳವರು. ಹಲವರು ಕನಿಷ್ಠ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಕೆಲವರು ನಿವೃತ್ತರಾಗಿದ್ದು, ಆ ಜಾಗಕ್ಕೆ ಹೊಸಬರ ನೇಮಕವಾಗಿಲ್ಲ. ಈ ಮಧ್ಯೆ ಶುರುವಾದ ವರ್ಗಾವಣೆಯಲ್ಲಿ ಹಲವರು ಬೇರೆ ಕಡೆಗೆ ಹೋಗಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ವರ್ಗಾವಣೆಯಿಂದ ಕುತ್ತು

‘ಈ ಸಲ ವರ್ಗಾವಣೆಗೆ ಇದ್ದ ಮಿತಿ ಸಡಿಲಿಸಲಾಗಿದೆ. ಮುಂಚೆ ಯಾವುದೇ ಬ್ಲಾಕ್‌ನಲ್ಲಿ ಶೇ25ರಷ್ಟು ಹುದ್ದೆಗಳು ಖಾಲಿ ಇದ್ದರೆ, ಹೊರ ತಾಲ್ಲೂಕಿಗೆ ವರ್ಗಾವಣೆಗೆ ಅವಕಾಶವಿರಲಿಲ್ಲ. ಈ ಸಲ ಆ ನಿರ್ಬಂಧ ತೆಗೆಯಲಾಯಿತು. ಒಂದೇ ಕಡೆ 10ವರ್ಷ ಕೆಲಸ ಮಾಡಿದವರಿಗೆ ಜಿಲ್ಲೆಯಾಚೆಗೂ ವರ್ಗಾವಣೆಗೆ ಅವಕಾಶ ಕಲ್ಪಿಸಲಾಯಿತು’ ಎಂದು ಹೇಳಿದರು.

ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆ ಕುರಿತು ಡಿಡಿಪಿಐ ಅವರ ಗಮನಕ್ಕೆ ತರಲಾಗಿದೆ. ಪರ್ಯಾಯ ವ್ಯವಸ್ಥೆಗೆ ಅತಿಥಿ ಉಪನ್ಯಾಸಕರು ಸಹ ಸಿಗುತ್ತಿಲ್ಲ.
ಸೋಮಲಿಂಗಯ್ಯ, ಬಿಇಒ ಕನಕಪುರ

‘ಈ ಸಲ ಸುಮಾರು 150ಜನ ವರ್ಗಾವಣೆಯಾಗಿದ್ದು, ಈ ಸಂಖ್ಯೆ 200 ತಲುಪುವ ಸಾಧ್ಯತೆ ಇದೆ. ಪರ್ಯಾಯ ವ್ಯವಸ್ಥೆ ಆಗುವವರೆಗೆ ರಿಲೀವ್ ಮಾಡದಂತೆ ಡಿಡಿಪಿಐ ಸೂಚನೆ ನೀಡಿದ್ದಾರೆ. ಇರುವ ಶಿಕ್ಷಕರನ್ನೇ ನಿಯೋಜಿಸಲು ಸಾಧ್ಯವಾಗದ ಸ್ಥಿತಿ ಇದೆ. ಗ್ರಾಮೀಣ ಭಾಗವಾಗಿರುವುರಿಂದ ಅತಿಥಿ ಶಿಕ್ಷಕರು ಸಹ ಸಿಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಮುಚ್ಚಲು ಮುಹೂರ್ತ ನಿಗದಿ’

‘ಶೂನ್ಯ ಶಿಕ್ಷಕರಿರುವ ಶಾಲೆಗಳೆಂದರೆ ಮುಚ್ಚಲು ಮುಹೂರ್ತ ನಿಗದಿಯಾಗಿರುವ ಶಾಲೆಗಳು ಎಂದರ್ಥ. ಶಿಕ್ಷಕರೇ ಇಲ್ಲವೆಂದರೆ ಅದು ಹೇಗೆ ಶಾಲೆಯಾಗಿರಲು ಸಾಧ್ಯ. ಇದು ಶಿಕ್ಷಣ ಹಕ್ಕು ಕಾಯ್ದೆಯ ಸ್ಪಷ್ಟ ಉಲ್ಲಂಘನೆ’ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರತಿನಿಧಿಸುವ ಕನಕಪುರ ತಾಲ್ಲೂಕು ಒಂದರಲ್ಲೇ 73 ಶೂನ್ಯ ಶಿಕ್ಷಕರಿರುವ ಶಾಲೆಗಳು ಇವೆಯೆಂದರೆ ರಾಜ್ಯದಾದ್ಯಂತ ಈ ಸಂಖ್ಯೆ ಎಷ್ಟಿರಬಹುದು? ಮನಸ್ಸಿಗೆ ತುಂಬಾ ಬೇಸರವಾಗುವ ವಿಷಯವಿದು. ಕನ್ನಡ ಶಾಲೆಗಳು ಅದರಲ್ಲೂ ಗಡಿನಾಡ ಶಾಲೆಗಳು ಉಳಿಯಬೇಕು ಬೆಳೆಯಬೇಕು. ಇದಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT