ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಪ್ರಗತಿಯಿಂದ ಜೀವನ ಸಾರ್ಥಕ: ಟಿ.ಎಸ್‌. ಶಿವರಾಮ್‌

ಕನಕಪುರದ ರೂರಲ್‌ ಪದವಿ ಪೂರ್ವ ಕಾಲೇಜಿನಲ್ಲಿ 'ಪರೀಕ್ಷಾ ಸುಗ್ಗಿ ಕಾರ್ಯಕ್ರಮ-2020'
Last Updated 24 ಜನವರಿ 2020, 12:47 IST
ಅಕ್ಷರ ಗಾತ್ರ

ಕನಕಪುರ: ಉಚಿತ ಶಿಕ್ಷಣದ ಸಮರ್ಪಕ ಬಳಕೆ ಮೂಲಕ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ ಸಾರ್ಥಕತೆ ಮಾಡಿಕೊಳ್ಳಬೇಕೆಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಎಸ್‌. ಶಿವರಾಮ್‌ ಮನವಿ ಮಾಡಿದರು.

ಇಲ್ಲಿನ ಆರ್‌ಇಎಸ್‌ ವಿದ್ಯಾಸಂಸ್ಥೆಯ ರೂರಲ್‌ ಪಿಯು ಕಾಲೇಜಿನಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಹಯೋಗದಲ್ಲಿ 2019-20 ನೇ ಸಾಲಿನ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಕ್ರವಾರ ಏರ್ಪಡಿಸಿದ್ದ 'ಪರೀಕ್ಷಾ ಸುಗ್ಗಿ ಕಾರ್ಯಕ್ರಮ-2020' ರಲ್ಲಿ ಮಾತನಾಡಿದರು.

‘ಶೈಕ್ಷಣಿಕ ವ್ಯವಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಪ್ರಮುಖ ಘಟ್ಟವಾಗಿದೆ. ಮುಂದಿನ ವಿದ್ಯಾಭ್ಯಾಸದ ಗುರಿಯನ್ನು ತಲುಪಲು ನಾವು ಏನು ಓದಬೇಕೆಂದು ಇಲ್ಲಿ ನಿರ್ಧಾರವಾಗುತ್ತದೆ. ನಾವು ತೆಗೆದುಕೊಳ್ಳುವ ಅಂಕದ ಮೇಲೆ ಒಳ್ಳೆಯ ಕಾಲೇಜುಗಳಲ್ಲಿ ಅವಕಾಶ ನೀಡುತ್ತಾರೆ. ಆ ಕಾರಣದಿಂದ ಉತ್ತಮ ಪ್ರೌಢಿಮೆ ಬೆಳೆಸಿಕೊಂಡು ಒಳ್ಳೆಯ ಅಂಕ ಪಡೆದು ತೇರ್ಗಡೆಯಾಗಿರಿ ಎಂದು ಶುಭ ಕೋರಿದರು.

‘ಸಾಧನೆ ಮಾಡಲು ಕಠಿಣ ತಪಸ್ಸು ಮಾಡಬೇಕು. ನೀವು ಮುಂದಿನ ಭವಿಷ್ಯಕ್ಕಾಗಿ, ನಿಮ್ಮ ಗುರಿ ತಲುಪುದಕ್ಕಾಗಿ ಕಠಿಣ ಪರಿಶ್ರಮದ ಮೂಲಕ ಸಾಧಿಸಬೇಕು ಎಂದು ತಿಳಿಸಿದರು.

ಮೈಸೂರು ಜೆಎಸ್‌ಎಸ್‌ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ವಿಭಾಗದ ಸಹ ಪ್ರಾಧ್ಯಾಪಕ ಡಾ. ಭೀಮರಾಜ್‌ ಈರೇಗೌಡ ಮಾತನಾಡಿ ಉತ್ತಮ ಸಮಾಜ ಮತ್ತು ಉತ್ತಮ ಪ್ರಜೆಗಳ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಪ್ರಮುಖವಾಗಿರುತ್ತದೆ. ಶಿಕ್ಷಕರು ಸದಾ ಎಚ್ಚರಿಕೆಯಿಂದ ಇರಬೇಕು, ಅವರು ಮೈ ಮರೆತರೆ ಅದು ಮಕ್ಕಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ, ಅವರ ಭವಿಷ್ಯ ನಾಶವಾಗುತ್ತದೆ ಎಂದು ಎಚ್ಚರಿಸಿದರು.

ಪರೀಕ್ಷೆಗೆ ಹಾಜರಾದಾಗ ಕೆಲವು ಮಕ್ಕಳು ಗಾಬರಿಯಿಂದ ಖಿನ್ನತೆಗೆ ಒಳಗಾಗಿ ಓದಿರುವುದನ್ನೆಲ್ಲ ಮರೆಯುತ್ತಾರೆ. ಭಯದಿಂದ ಎಷ್ಟೇ ಓದಿದರು ನೆನಪಿನಲ್ಲಿ ಉಳಿಯದಂತಾಗುತ್ತದೆ. ಅದಕ್ಕಾಗಿ ಮಕ್ಕಳು ಪರೀಕ್ಷಾ ಭಯದಿಂದ ಆಚೆ ಬರಬೇಕು, ಧನಾತ್ಮಕ ಆಲೋಚನೆಗಳನ್ನು ಚಿಂತನೆಗಳನ್ನು ಮೈಗೂಡಿಸಿಕೊಳ್ಳಿ. ನಮ್ಮಿಂದ ಸಾಧ್ಯವೆನ್ನುವುದನ್ನು ಬೆಳೆಸಿಕೊಳ್ಳಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಶಿವಕುಮಾರ್‌ ಪ್ರಾಸ್ತಾವಿಕ ಮಾತನಾಡಿ, ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ಎಲ್ಲ ಮಕ್ಕಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಬೇಕೆಂದು ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿರುವ 15 ಮಕ್ಕಳಂತೆ ನಗರ ಮತ್ತು ಕಸಬಾ ಹೋಬಳಿಯ 20 ಶಾಲೆಗಳಿಂದ ಮಕ್ಕಳು ಬಂದಿದ್ದಾರೆ ಎಂದರು.

ಜ.27 ರಿಂದ ತಜ್ಞ ವೈದ್ಯರು ಕ್ಲಸ್ಟರ್‌ ಮಟ್ಟದಲ್ಲಿ ಆಪ್ತ ಸಮಾಲೋಚನೆ ಕಾರ್ಯಕ್ರಮವನ್ನು ನಡೆಸಿ ಮಕ್ಕಳ ಸಮಸ್ಯೆ ,ಮತ್ತು ಪರೀಕ್ಷೆಯ ಗೊಂದಲವನ್ನು ಪರಿಹರಿಸಿಕೊಡಲಿದ್ದಾರೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭೈರೇಗೌಡ, ಕಂದಾಯ ಇಲಾಖೆ ಐಆರ್‌ಎಸ್‌ ಸಂತೋಷ್‌, ಉಪ ನಿರ್ದೇಶಕ ಸೋಮಶೇಖರಯ್ಯ, ಆರ್‌ಇಎಸ್‌ ಅಧ್ಯಕ್ಷ ಕೆ.ಬಿ.ನಾಗರಾಜು, ಕಾರ್ಯದರ್ಶಿ ಸಿ.ರಮೇಶ್‌, ನಿರ್ದೇಶಕ ವೆಂಕಟೇಶ್‌, ವಿಜ್ಙಾನ ವಿಷಯ ಪರಿವೀಕ್ಷಕಿ ಪವಿತ್ರಾದೇವಿ, ಗಣಿತ ವಿಷಯ ಪರಿವೀಕ್ಷಕಿ ಇರ್ಷತ್‌ ಜಹಾನ್‌, ಕನ್ನಡ ವಿಯಷ ಪರಿವೀಕ್ಷಕ ಚಿನ್ನಸ್ವಾಮಿ, ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವರದರಾಜು, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ವಿ.ಎನ್‌. ಪ್ರಸಾದ್‌, ಮುಖ್ಯ ಶಿಕ್ಷಕ ಸಿ.ಪುಟ್ಟಸ್ವಾಮಿ, ಎಸ್‌ಎಸ್‌ಎಲ್‌ಸಿ ತಾಲ್ಲಕು ಕಾರ್ಯನಿರ್ವಹಣೆಯ ರಾಜಶೇಖರ್‌ ಪಾಟೀಲ್‌, ಡಿಕೆಎಸ್‌ ಟ್ರಸ್ಟ್‌ನ ಚಾಮರಾಜ್‌ ಉಪಸ್ಥಿತರಿದ್ದರು.


ಪರೀಕ್ಷಾ ಸಿದ್ಧತೆಯ ಪುಸ್ತಕ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಮನಗರ ಜಿಲ್ಲೆಯು ಹಿಂದಿನ ವರ್ಷ ರಾಜ್ಯದಲ್ಲೇ 2ನೇ ಸ್ಥಾನವನ್ನು ಪಡೆದಿತ್ತು. ಈ ಬಾರಿ ಮೊದಲನೆ ಸ್ಥಾನ ಪಡೆಯಬೇಕೆಂದು ಜಿಲ್ಲಾ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆ ಕಾರ್ಯಕ್ರಮ ರೂಪಿಸಿದೆ. ಕನಕಪುರ ತಾಲ್ಲೂಕು ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆಯಬೇಕು. ಎಲ್ಲ ಮಕ್ಕಳು ತೇರ್ಗಡೆಯ ಜತೆಗೆ ಉತ್ತಮ ಅಂಕ ಗಳಿಸಬೇಕೆಂದು ಡಿಕೆಎಸ್‌ ಟ್ರಸ್ಟ್‌ ಪರೀಕ್ಷಾ ಸಿದ್ಧತೆಗಾಗಿ ಕನ್ನಡ, ಇಂಗ್ಲಿಷ್‌, ಹಿಂದಿ, ವಿಜ್ಙಾನ, ಗಣಿತ, ಸಮಾಜ ವಿಜ್ಞಾನ ಪುಸ್ತಕಗಳನ್ನು ಹೊರತಂದಿದೆ. ತಾಲ್ಲೂಕಿನಲ್ಲಿನ 2,650 ಮಕ್ಕಳಿಗೂ ಉಚಿತವಾಗಿ ಕೊಡುತ್ತಿದೆ ಎಂದು ಟ್ರಸ್ಟ್‌ನ ಚಾಮರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT