ಭಾನುವಾರ, ಜನವರಿ 26, 2020
30 °C
ಕೆಲವು ಕೈಗಾರಿಕೆಗಳು ಬಂದ್‌: ಗ್ರಾ.ಪಂ. ನೌಕರರಿಂದ ಧರಣಿ

ರಾಮನಗರ: ಮುಷ್ಕರ ನೀರಸ, ಎಂದಿನಂತೆ ಜನಜೀವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದ್ದ ಬುಧವಾರ ಕರೆ ನೀಡಿದ ಮುಷ್ಕರಕ್ಕೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಕೈಗಾರಿಕಾ ಪ್ರದೇಶ ಹೊರತುಪಡಿಸಿ ಉಳಿದೆಡೆ ಜನ ಜೀವನ ಎಂದಿನಂತೆ ಇತ್ತು.

ಕಾರ್ಮಿಕರ ಸಂಘಟನೆಗಳ ಎಚ್ಚರಿಕೆ ನೋಟಿಸ್ ಹಿನ್ನೆಲೆಯಲ್ಲಿ ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಕೆಲವು ಕೈಗಾರಿಕೆಗಳು ಮುಚ್ಚಿದ್ದವು. ಬಿಡದಿ ಹಾಗೂ ಹಾರೋಹಳ್ಳಿಯಲ್ಲಿ ರ್‍ಯಾಲಿ ನಡೆಯಿತು. ಅದನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಬಂದ್ ಪರಿಣಾಮ ಬೀರಲಿಲ್ಲ. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಎಂದಿನಂತೆ ಇತ್ತು.

ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಸಂಚರಿಸಿದವು. ಶಾಲೆ ಕಾಲೇಜು, ಆಸ್ಪತ್ರೆ, ಸರ್ಕಾರಿ ಕಚೇರಿ, ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಪ್ರತಿಭಟನೆ ನಡೆಸಿದಲ್ಲಿ ಬಂಧಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಯಾರೊಬ್ಬರು ಬೀದಿಗಿಳಿದು ಹೋರಾಟ ನಡೆಸಲಿಲ್ಲ. ಬದಲಾಗಿ ಕೇಂದ್ರ ಸರ್ಕಾರದ ಧೋರಣೆಗಳನ್ನು ಖಂಡಿಸಿ ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಗ್ರಾ.ಪಂ. ನೌಕರರ ಧರಣಿ: ಮುಷ್ಕರ ಬೆಂಬಲಿಸಿ ಜಿಲ್ಲೆಯ ಗ್ರಾಮ ಪಂಚಾಯಿತಿ ನೌಕರರು ಇಲ್ಲಿನ ಮಿನಿ ವಿಧಾನಸೌಧದ ಎದುರು ಧರಣಿ ನಡೆಸಿದರು. ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ನೂರಾರು ನೌಕರರು ಕರ್ತವ್ಯದಿಂದ ದೂರ ಉಳಿದು ಮುಷ್ಕರ ಬೆಂಬಲಿಸಿದರು.

‘ಸರ್ಕಾರಿ ನೌಕರರಂತೆ ವೈದ್ಯಕೀಯ ವೆಚ್ಚ ಮತ್ತು ಪ್ರತಿ ತಿಂಗಳು ಸರ್ಕಾರದ ಕನಿಷ್ಠ ವೇತನ ನೀಡುವವರೆಗೆ ಎಲ್ಲಾ ಗ್ರಾಮ ಪಂಚಾಯಿತಿ ನೌಕರರಿಗೂ ಬಿಪಿಎಲ್ ಪಡಿತರ ಚೀಟಿಗೆ ಅವಕಾಶ ಕಲ್ಪಿಸಬೇಕು. ಸ್ವಾಮಿನಾಥನ್ ವರದಿಯಂತೆ ಎಲ್ಲಾ ನೌಕರರನ್ನು ಏಕಕಾಲದಲ್ಲಿ ಅನುಮೋದನೆ ನೀಡಬೇಕು. ₨21 ಸಾವಿರ ಕನಿಷ್ಠ ವೇತನ ನೀಡಬೇಕು’ ಎಂದು ಆಗ್ರಹಿಸಿದರು.

ಮಾಸಿಕ ಪಿಂಚಣಿ ₨10 ಸಾವಿರ ನಿಗದಿ ಪಡಿಸಬೇಕು. ಬಾಕಿಯಿರುವ ವೇತನ ಪಾವತಿಸಲು ಆದೇಶ ನೀಡಬೇಕು. ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಗಳಿಗೆ ಪ್ರತ್ಯೇಕ ಜೇಷ್ಠತಾ ಆಧಾರದಲ್ಲಿ ಗ್ರೇಡ್ -02 ,ಕಾರ್ಯದರ್ಶಿಗಳಿಗೆ ಉಳಿದ ನೇರ ನೇಮಕಾತಿ ಕೋಟಾದಲ್ಲಿ ಶೇ 20ರಷ್ಟು ಹಾಗೂ ಲೆಕ್ಕ ಸಹಾಯಕ ಹುದ್ದೆಗೆ ಶೇ 30ರಷ್ಟು ಪ್ರತ್ಯೇಕ ಅವಕಾಶ ನೀಡಬೇಕು ಎಂದು ಕೋರಿದರು.

ನಿವೃತ್ತಿ ಹೊಂದಿದ ನೌಕರರಿಗೆ ನಿವೃತ್ತಿ ಉಪದಾನ ನೀಡಬೇಕು. ಗ್ರಾಮ ಪಂಚಾಯಿತಿಯ ಎಲ್ಲಾ ನೌಕರರಿಗೂ ಸೇವಾ ಪುಸ್ತಕ ತೆರೆಯುವುದು. ಬಾಪೂಜಿ ಸೇವಾ ಕೇಂದ್ರಗಳಿಗೆ ಪ್ರತ್ಯೇಕ ಡಾಟಾ ಎಂಟ್ರಿ ಆಪರೇಟರ್ ನೇಮಕ ಮಾಡಿಕೊಳ್ಳಬೇಕು. ಸಿಬ್ಬಂದಿಗೆ ರಕ್ಷಣೆ ಒದಗಿಸಬೇಕು. ಪ್ರತಿವರ್ಷ ಎರಡು ಜತೆ ಸಮವಸ್ತ್ರ ನೀಡಬೇಕು. ಅನುಕಂಪದ ಆಧಾರದ ಮೇಲೆ ನೌಕರರ ಪತ್ನಿ ಅಥವಾ ಮಕ್ಕಳಿಗೆ ಅನುಮೋದನೆ ನೀಡಬೇಕು. ನೆನೆಗುದಿಗೆ ಬಿದ್ದಿರುವ ಸೇವಾ ನಿಯಮಾವಳಿ ರಚಿಸಬೇಕು. ಗ್ರಾಮ ಪಂಚಾಯಿತಿಯಲ್ಲಿ ಖಾಲಿಯಿರುವ ಬಿಲ್ ಕಲೆಕ್ಟರ್ ಹುದ್ದೆಗಳನ್ನು ಬಡ್ತಿ ಮೂಲಕ ತುಂಬಲು ನಿರ್ದೇಶನ ನೀಡಬೇಕು. ಖಾಲಿ ಹುದ್ದೆಗೆ ನೇರ ನೇಮಕಾತಿ ಮಾಡಬಾರದು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಿವಕುಮಾರ್, ತಹಶೀಲ್ದಾರ್ ನರಸಿಂಹಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳಾದ ರೇಣುಕಪ್ಪ, ಕೆ.ಎಸ್ .ರಾಜಶೇಖರ್ , ಪ್ರದೀಪ್, ಎಂ.ನಾಗಮ್ಮ, ಜಯಶಂಕರಸ್ವಾಮಿ, ರವಿಕುಮಾರ, ನಾರಾಯಣಪ್ಪ, ಲೋಕೇಶ್ , ರಾಮದಾಸ್, ಇಂದ್ರಮ್ಮ, ನಾರಾಯಣ, ಸಿದ್ದರಾಜು, ಸಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ರತ್ನಮ್ಮ, ಈರೇಗೌಡ, ಚಿಕ್ಕಸ್ವಾಮಿ, ಬಸವರಾಜ, ಚಂದ್ರಯ್ಯ, ಜೆ.ಬಿ. ನಾರಾಯಣ, ಎಲ್ಲಣ್ಣ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು