ಭಾನುವಾರ, ಡಿಸೆಂಬರ್ 15, 2019
21 °C
ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ

ಅಂಗನವಾಡಿಯಲ್ಲೇ ಎಲ್‌ಕೆಜಿ ಆರಂಭಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಜಿಲ್ಲಾ ಪಂಚಾಯಿತಿ ಭವನದ ಎದುರು ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಮಹಿಳೆಯರ ನಿರುದ್ಯೋಗ ಹೆಚ್ಚಾಗುತ್ತಿದೆ, ಜತೆಗೆ ನಿಗದಿತ ವೇತನ ತೆಗೆದುಕೊಳ್ಳುವವರು ಶೇ 26ರಷ್ಟು ಮಾತ್ರ. ಉಳಿದವರು ಸ್ವಯಂ ಉದ್ಯೋಗ, ಅರೆಕಾಲಿಕ, ಸಾಂದರ್ಭಿಕ, ಗುತ್ತಿಗೆ ಇತರೆ ಉದ್ಯೋಗಿಗಳಾಗಿದ್ದಾರೆ. ಅಂಗನವಾಡಿ ನೌಕರರು ಇಂತಹ ಅರೆಕಾಲಿಕ ಪಡೆಗೆ ಸೇರಿದವರು. ಆದರೆ ಇಂದು ಉದಾರಿಕರಣ ನೀತಿಗಳನ್ನು ಅಪ್ಪಿಕೊಂಡು ಮುದ್ದಾಡುತ್ತಿರುವ ಸರ್ಕಾರ ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಹಾರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗಾಗಿ ಇರುವ ಯೋಜನೆಗಳ ಪ್ರಮುಖ ಜವಾಬ್ದಾರಿಗಳನ್ನು ಬೇರೆಡೆಗೆ ವರ್ಗಾಯಿಸುವ ಮೂಲಕ ಬಲಹೀನಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಸಾವಿರಾರು ಮಹಿಳೆಯರು ಕೆಲಸ ಕಳೆದು ಕೊಳ್ಳುವುದಲ್ಲದೇ ಐಸಿಡಿಎಸ್ ಯೋಜನೆ ತನ್ನ ಉದ್ದೇಶ ಕಳೆದುಕೊಳ್ಳಲಿದೆ ಎಂದು ಸಿಐಟಿಯು ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಂಜುನಾಥ್ ಆರೋಪಿಸಿದರು.

ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ ಈಚೆಗೆ ಮಾಡಿರುವ ಶಿಫಾರಸ್ಸಿನಲ್ಲಿ 3 ರಿಂದ 8 ವರ್ಷದ ಒಂದು ವರ್ಗೀಕರಣ ಮಾಡಿ ಮಾಧ್ಯಮವನ್ನು ಶಿಕ್ಷಣ ಇಲಾಖೆಯಡಿಯಲ್ಲಿ ತೆರೆಯಬೇಕೆಂದು ಶಿಫಾರಸ್ಸು ಮಾಡಿದೆ. ಜತೆಗೆ ರಾಜ್ಯದಲ್ಲಿ 2019ರ ಮೇ ತಿಂಗಳಿನಲ್ಲಿ ಮೂರುವರೆ ವರ್ಷ ಮೇಲ್ಪಟ್ಟ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಶಿಕ್ಷಣ ಇಲಾಖೆ ತಂದಿರುವ ಈ ಸುತ್ತೋಲೆ ಐಸಿಡಿಎಸ್ ಯೋಜನೆಯ ಮತ್ತೊಂದು ತದ್ರೂಪಿ ಕಾರ್ಯಕ್ರಮವೇ ಹೊರೆತು ಬೇರೆಯಲ್ಲ ಎಂದರು.

ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ₨4200 ಕೋಟಿಗಳನ್ನು ಪೂರಕ ಪೌಷ್ಟಿಕ ಆಹಾರ, ಪೂರ್ವಪ್ರಾಥಮಿಕ ಶಿಕ್ಷಣವನ್ನು ಒಳಗೊಂಡಂತೆ ಖರ್ಚು ಮಾಡಲಾಗುತ್ತಿದೆ. ಆದರೆ ಸರ್ಕಾರ ಈ ಹಣವನ್ನು ಸದ್ಬಳಕೆ ಮಾಡುವ ಬದಲಿಗೆ ಶಿಕ್ಷಣ ಇಲಾಖೆಯ ಮೂಲಕ ಒಂದೇ ಮಗುವಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡಲು ಹೊರಟಿರುವುದು ಸರಿಯಲ್ಲ ಎಂದರು.

ಅಂಗನವಾಡಿ ಕೇಂದ್ರಗಳಲ್ಲಿ ಪಾಲನೆಯ ಜತೆಗೆ ಎಲ್‌ಕೆಜಿ, ಯುಕೆಜಿ ಶಿಕ್ಷಣ ನೀಡಬೇಕು. ಹೊಸ ಶಿಕ್ಷಣ ನೀತಿಯ ಶಿಫಾರಸ್ಸಿನಲ್ಲಿರುವ 3 ರಿಂದ 9 ವರ್ಷದ ಒಳಗಿನ ವರ್ಗೀಕರಣವನ್ನು ವಿರೋಧಿಸಬೇಕು. ಈಗಿರುವ ನಿವೃತ್ತಿ ಸೌಲಭ್ಯವನ್ನು ಬದಲಾಯಿಸಿ ಎಲ್‌ಐಸಿ ಆಧಾರಿತ ಪಿಂಚಣಿಯನ್ನು ನೀಡಬೇಕು. ಸೇವಾ ಜೇಷ್ಠತೆಯ ಆಧಾರದಲ್ಲಿ ಕನಿಷ್ಠ ವೇತನ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಖಾಲಿಯಿರುವ ಸಹಾಯಕಿ ಮತ್ತು ಕಾರ್ಯಕರ್ತೆಯರ ಹುದ್ದೆಗಳನ್ನು ತುಂಬಬೇಕು. ಕಾರ್ಯಕರ್ತೆಯರಿಗೆ ಸೇವಾ ನಿಯಮಾವಳಿ ರೂಪಿಸಬೇಕು. ಕೇಂದ್ರ ಸರ್ಕಾರ ಕಡಿತ ಮಾಡಿರುವ ಅನುದಾನ ವಾಪಸ್‌ ಆಗಬೇಕು. ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಯ ಸೂಚನೆಯನ್ನು ರಾಜ್ಯ ಸರ್ಕಾರ ಒಪ್ಪಬಾರದು ಎಂದು ತಿಳಿಸಿದರು.

ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಬಿ.ವಿ.ರಾಘವೇಂದ್ರ ,ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷೆ ಟಿ.ಲೀಲಾವತಿ, ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಪುಷ್ಪಲತಾ, ಕಾರ್ಯದರ್ಶಿ ಜಯಲಕ್ಷ್ಮಮ್ಮ, ಪದಾಧಿಕಾರಿಗಳಾದ ನಾಗರತ್ನಾ, ಭಾಗ್ಯ, ಸಾವಿತ್ರಿ ,ಹೇಮಾ, ಜಯಶೀಲಾ, ಶಿವಮ್ಮ, ಭಾಗ್ಯಮ್ಮ, ಸುವರ್ಣ, ಹೊನ್ನಮ್ಮ, ಹನುಮಕ್ಕ, ಲೀಲಾ, ಮಾಗಡಿ ತಾಲ್ಲೂಕು ಘಟಕದ ಅಧ್ಯಕ್ಷೆ ನಾಗರತ್ನಾ, ಕಾರ್ಯದರ್ಶಿ ಲಲಿತಾ ಮತ್ತು ಖಜಾಂಚಿ ಭಾಗ್ಯ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು