ಗುರುವಾರ , ಅಕ್ಟೋಬರ್ 24, 2019
21 °C
ಎನ್‌ಇಎಸ್‌ ಬಡಾವಣೆ ಗಾಂಧಿ ಸರ್ಕಲ್‌ನಲ್ಲಿ ಗಾಂಧಿ ಪ್ರತಿಮೆಗೆ ಪುಷ್ಪ ನಮನ

‘ಮಾನವೀಯತೆಯ ಮತ್ತೊಂದು ರೂಪ ಬಾಪು’

Published:
Updated:
Prajavani

ಗಾಂಧಿ ಸರ್ಕಲ್‌ (ಮಾಗಡಿ): ‘ಮಹಾತ್ಮ ಗಾಂಧಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರಂತಹ ಮಹಾನುಭಾವರನ್ನು ಸ್ಮರಿಸಿದರೆ ಮನಸ್ಸಿನಲ್ಲಿ ಚೈತನ್ಯ ಮೂಡುತ್ತದೆ’ ಎಂದು ಶಾಸಕ ಎ.ಮಂಜುನಾಥ ಅಭಿಪ್ರಾಯಪಟ್ಟರು.

ಇಲ್ಲಿನ ಎನ್‌ಇಎಸ್‌ ಬಡಾವಣೆಯ ಗಾಂಧಿ ಸರ್ಕಲ್‌ನಲ್ಲಿ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ಮಾನವೀಯತೆಯ ಮತ್ತೊಂದು ರೂಪ ಬಾಪು. ಅವರ ಜೀವನ ಎಲ್ಲರಿಗೂ ಪ್ರೇರಣೆ. ಅವರ ‘ನನ್ನ ಸತ್ಯಾನ್ವೇಷಣೆ’ ಆತ್ಮಕಥೆಯನ್ನು ಮಕ್ಕಳಿಗೆ ಕಡ್ಡಾಯವಾಗಿ ಓದಿಸಬೇಕು. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಶಾಂತಿ ಮತ್ತು ಅಹಿಂಸೆ, ಉಪವಾಸ ಹೋರಾಟದ ಸ್ಮರಣಾರ್ಥ ಎನ್‌ಇಎಸ್‌ನಲ್ಲಿ ಗಾಂಧಿ ಪ್ರತಿಮೆ ನಿಲ್ಲಿಸಲಾಗಿದೆ. ‘ಜೈ ಜವಾನ್‌ ಜೈ ಕಿಸಾನ್‌’ ಎಂಬ ಘೋಷಣೆ ರೂಪಿಸಿದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರನ್ನು ಇಂದಿನ ಜನಪ್ರತಿನಿಧಿಗಳು ಮಾದರಿಯಾಗಿ ಇಟ್ಟುಕೊಳ್ಳಬೇಕು. ಪ್ರತಿವರ್ಷ ಇದೇ ಸ್ಥಳದಲ್ಲಿ ಗಾಂಧಿ ಜಯಂತಿ ಆಚರಿಸಲಾಗುವುದು’ ಎಂದರು.

‘ಇಂದಿಗೂ ತಾಲ್ಲೂಕಿನಲ್ಲಿ ಬಯಲು ಬಹಿರ್ದೆಸೆ ನಿಂತಿಲ್ಲ. ಪಟ್ಟಣದ ವಾಣಿಜ್ಯ ಸಂಕಿರಣದಲ್ಲಿ ಇ ಶೌಚಾಲಯ ನಿರ್ಮಾಣಕ್ಕೆ ‌ಕ್ರಮ ಕೈಗೊಳ್ಳಲಾಗುವುದು. ಪ್ಲಾಸ್ಟಿಕ್‌ ಮುಕ್ತ ತಾಲ್ಲೂಕು ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು. ಕಸವನ್ನು ಬೀದಿಗೆ ಎಸೆಯದೆ ಸ್ವಚ್ಛತೆ ಕಾಪಾಡಿ, ಒಳಚರಂಡಿಗೆ ನ್ಯಾಪ್‌ಕಿನ್‌, ಗೋಣೀಚೀಲ ಹಾಕಿ, ಚೇಂಬರ್‌ ಕಟ್ಟಿಕೊಂಡ ಮೇಲೆ ದೂರಬೇಡಿ. ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು. 

ತಹಶೀಲ್ದಾರ್‌ ಎನ್‌.ರಮೇಶ್‌ ಮಾತನಾಡಿ ‘ಗಾಂಧಿ ವಿಶ್ವಕ್ಕೆ ಶಾಂತಿ ಬೋಧಿಸಿದವರು. ಸ್ವಾತಂತ್ರ್ಯ ತಂದುಕೊಡಲು ಶ್ರಮಿಸಿದವರು. ಅಸ್ಪೃಶ್ಯತೆ ನಿವಾರಣೆಗೆ ದುಡಿದ ಮಹನೀಯ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ .ಎಸ್‌.ಮಾತನಾಡಿ, ‘ಮಕ್ಕಳಲ್ಲಿ ರಾಷ್ಟ್ರಪಿತ ಗಾಂಧಿ ಮತ್ತು ಶಾಸ್ತ್ರೀ ಅವರ ಜೀವನ ಆದರ್ಶಗಳನ್ನು ಬಿತ್ತಿ ಬೆಳೆಸಬೇಕು. ಈ ಇಬ್ಬರೂ ಮಹಾನ್‌ ಚೇತನಗಳು. ಸತ್ಯ, ಅಹಿಂಸೆ, ಸತ್ಯಾಗ್ರಹ, ಹೋರಾಟ, ಉಪವಾಸದ ಮೂಲಕ ಸರಳತೆ ಮೆರೆದ ಮಹಾನ್‌ ಚೇತನಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವ ಅವಶ್ಯಕತೆ ಇದೆ’ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಕಲ್ಪನಾ ಶಿವಣ್ಣ ಮಾತನಾಡಿದರು. ಗಾಂಧಿ ವೇಷಧಾರಿ ಕಲ್ಯದ ಭಗವಂತಯ್ಯ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೋರಾಟಗಾರ ಕಲ್ಕೆರೆ ಶಿವಣ್ಣ, ಡಿವಿಜಿ ವೇದಿಕೆ ಅಧ್ಯಕ್ಷ ಸಿ.ಬಿ.ಅಶೋಕ್‌, ಶಿಕ್ಷಕ ಚಿಕ್ಕವೀರಯ್ಯ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್‌.ಲೋಕೇಶ್‌, ಎಂ.ಕೆಂಪೇಗೌಡ, ತಾಲ್ಲೂಕು ಪಂಚಾಯಿತಿ ಇಒ ಪ್ರದೀಪ್‌, ಪುರಸಭೆ ಮುಖ್ಯಾಧಿಕಾರಿ ನಟರಾಜ್‌ ಇದ್ದರು. ಸರಸ್ವತಿ ವಿದ್ಯಾಮಂದಿರದ ಮಕ್ಕಳು ಗಾಂಧಿ ಹೋರಾಟದ ಬಗ್ಗೆ ಕಿರು ನಾಟಕ ಪ್ರದರ್ಶಿಸಿದರು. ಸಸಿ ವಿತರಿಸಲಾಯಿತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)