ಶನಿವಾರ, ಏಪ್ರಿಲ್ 1, 2023
29 °C
ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡಲು ಸಲಹೆ

ಕೃಷಿ ಸಂಘಕ್ಕೆ ಆರ್ಥಿಕ ನೆರವಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ತಾಲ್ಲೂಕಿನ ಹಾರೋಹಳ್ಳಿ ಹೋಬಳಿಯ ಕಗ್ಗಲಹಳ್ಳಿಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಕಗ್ಗಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕಾಂಗ್ರೆಸ್‌ ಬೆಂಬಲಿತರಾಗಿ ಆಯ್ಕೆಯಾದ ನೂತನ ನಿರ್ದೇಶಕರು, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಸ್‌. ರವಿ ಅವರಿಗೆ ಅಭಿನಂದನೆ ಸಲ್ಲಿಸಿ ಸಂಘಕ್ಕೆ ಸಂಪೂರ್ಣ ಸಹಕಾರ ನೀಡಲು ಮನವಿ ಮಾಡಿದರು.

ಕೃಷಿ ಪತ್ತಿನ ಸಹಕಾರ ಸಂಘವು ಬಿಡಿಸಿಸಿ ಬ್ಯಾಂಕ್‌ ಅಧೀನದಲ್ಲಿ ಬರುತ್ತದೆ. ಹಾಗಾಗಿ, ಸೊಸೈಟಿಗೆ ಪ್ರಾರಂಭಿಕ ಬಂಡವಾಳವಾಗಿ ಹೆಚ್ಚಿನ ಹಣ ನೀಡಿ ಸಹಕರಿಸಬೇಕು. ಆಡಳಿತಾತ್ಮಕವಾಗಿ ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ಸಲಹೆ, ಸಹಕಾರ ನೀಡಬೇಕು ಎಂದು ಕೋರಿದರು.

ಅಭಿನಂದನೆ ಸ್ವೀಕರಿಸಿದ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ರವಿ ಮಾತನಾಡಿ, ಸೊಸೈಟಿಯು ಹೊಸದಾಗಿ ಪ್ರಾರಂಭವಾಗಿದೆ. ಯಾವುದೇ ವ್ಯವಹಾರ ಇರುವುದಿಲ್ಲ. ಸಾಲ ಪಡೆಯದ ರೈತರನ್ನು ಗುರುತಿಸಿ ಅವರಿಗೆ ಹೊಸ ಸಾಲ ನೀಡಬೇಕು. ಸ್ತ್ರೀಶಕ್ತಿ ಮಹಿಳಾ ಸಂಘಗಳಿಗೆ ಸಾಲ ನೀಡುವ ಮೂಲಕ ಸೊಸೈಟಿಯ ವ್ಯವಹಾರವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೊಸ ಸೊಸೈಟಿಯಲ್ಲಿ ‍ಷೇರು ಹಣಬಿಟ್ಟರೆ ಯಾವುದೇ ಬಂಡವಾಳ ಇಲ್ಲ. ಅದಕ್ಕಾಗಿ ಬಿಡಿಸಿಸಿ ಬ್ಯಾಂಕ್‌ನಿಂದ ಸಾಲ ಪಡೆದು ಅದನ್ನು ಆದಾಯ ಬರುವ ರೀತಿಯಲ್ಲಿ ನೀವು ವ್ಯವಹಾರ ನಡೆಸಬೇಕು. ಸಾರ್ವಜನಿಕವಾಗಿ ಠೇವಣಿ ಸಂಗ್ರಹಿಸಬೇಕು. ಒಡವೆ ಸಾಲ ನೀಡಬೇಕು. ಸೊಸೈಟಿಯನ್ನು ಬ್ಯಾಂಕ್‌ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿದರು.

ಸೊಸೈಟಿಯ ಅಧ್ಯಕ್ಷ, ಉಪಾಧ್ಯಕ್ಷರು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಸೊಸೈಟಿಯ ಅಭಿವೃದ್ಧಿ ಇಬ್ಬರ ಮೇಲೆ ಅವಲಂಬಿತವಾಗಿರುತ್ತದೆ. ಅದಕ್ಕಾಗಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿ ಅವರಿಗೆ ಜವಾಬ್ದಾರಿ ನೀಡಬೇಕು. ಎಲ್ಲಾ ನಿರ್ದೇಶಕರು ಅವರಿಗೆ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಿ ಸೊಸೈಟಿಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕಿವಿಮಾತು ಹೇಳಿದರು.

ನಿರ್ದೇಶಕ ವಡೇರಹಳ್ಳಿ ಕೃಷ್ಣಪ್ಪ, ಹೊಸಗಬ್ಬಾಡಿ ಸೂರ್ಯ ನಾರಾಯಣಗೌಡ, ಹಳೇಗಬ್ಬಾಡಿ ಜಿ.ಎಂ. ಮುದ್ದೇಗೌಡ, ಕಗ್ಗಲಹಳ್ಳಿ ಕೆ. ರಂಗನಾಥ್‌, ಕಗ್ಗಲಹಳ್ಳಿ ಕೆ.ಜಿ. ರವಿ, ಬೆಟ್ಟಳ್ಳಿ ಕಾವಲ್‌ ಬಿ.ಎಂ. ಮುದ್ದುಕೃ‍ಷ್ಣ, ಜಟ್ಟಿಪಾಳ್ಯ ಜೆ.ಎಂ. ಮುನಿರಾಜು, ಯಶೋದಮ್ಮ, ಸರಸ್ವತಿ, ಬಮೂಲ್‌ ನಿರ್ದೇಶಕ ಎಚ್‌.ಎಸ್‌. ಹರೀಶ್‌ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌, ಮುಖಂಡರಾದ ಈಶ್ವರ್‌, ಸೌಭ್ಯಾಗ್ಯಮ್ಮ, ಜಗದೀಶ್ವರಗೌಡ, ರವಿಕುಮಾರ್‌, ಎಂ.ಎಲ್‌.ಎ. ಪ್ರಕಾಶ್‌, ರಾಜು ಪಾಳ್ಯ, ಜೈರಾಮು ಗಬ್ಬಾಡಿ, ಚಂದ್ರು, ಜಿ.ಎಸ್‌. ಸುರೇಶ್‌, ಶಿವಲಿಂಗಯ್ಯ, ರಾಯಲ್‌ ರಾಮಣ್ಣ, ರಾಜು, ವಿಶ್ವಪ್ರಿಯ, ಕರಿಯಪ್ಪ, ರಮೇಶ್‌, ಚೂಡೇಗೌಡ, ಶಂಕರೇಗೌಡ, ಹೊನ್ನಗಿರಿಗೌಡ, ಸಂತೋಷ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.